ಬೆಂಗಳೂರು ಗ್ರಾಮಾಂತರ

ಮತಯಂತ್ರ ಕಟ್ಟಡದಲ್ಲಿ 2 ಗಂಟೆ ವಿದ್ಯುತ್ ಸ್ಥಗಿತ

Published On :

ಕನ್ನಡಪ್ರಭ ವಾರ್ತೆ  ಕನಕಪುರ  ಮೇ 6
ಕನಕಪುರ ವಿಧಾನಸಭಾ ಚುನಾವಣೆಯ ಇವಿಎಂ ಮತಯಂತ್ರಗಳನ್ನು ಇರಿಸಿದ್ದ ಕಟ್ಟಡದಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಿ ಮೊಹರಾಗಿದ್ದ ಮತಪೆಟ್ಟಿಗೆಗಳನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿ ನೂರಾರು ಮಂದಿ ಜೆಡಿಎಸ್ ಕಾರ್ಯಕರ್ತರು ರೂರಲ್ ಕಾಲೇಜು ಆವರಣದಲ್ಲಿನ ಆರ್‌ಜಿಹೆಚ್‌ಎಸ್ ಪ್ರೌಢಶಾಲೆ ಕಟ್ಟಡದ ಮುಂದೆ ಧರಣಿ ಪ್ರತಿಭಟನೆ ನಡೆಸಿದರು.
ಷಡ್ಯಂತ್ರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಡಾ.ದಾಕ್ಷಾಯಣಿ ವಿರುದ್ಧ ಘೋಷಣೆಗಳನ್ನು ಕೂಗಿದರು.
 ಚುನಾವಣಾ ಆಯೋಗವನ್ನು ದಿಕ್ಕುತಪ್ಪಿಸಿ ತಾಲೂಕು ಆಡಳಿತದ ಕೆಲವು ಅಧಿಕಾರಿಗಳು ಮತಪೆಟ್ಟಿಗೆಗಳನ್ನು ಟ್ಯಾಂಪರಿಂಗ್ ಮಾಡಿದ್ದಾರೆ. ತಹಸೀಲ್ದಾರರು ಇದಕ್ಕೆ ನೇರ ಹೊಣೆಗಾರರಾಗಿದ್ದಾರೆ. ಅವರ ಬಗ್ಗೆ ಹತ್ತಾರು ಬಾರಿ ದೂರುಗಳನ್ನು ನೀಡಿದ್ದರೂ ಆಯೋಗ ಯಾವುದೇ ಕ್ರಮ ಕೈಗೊಳ್ಳದೆ ಇಂದಿನ ಅನರ್ಥಕ್ಕೆ ಕಾರಣವಾಗಿದೆ ಎಂದು ಪ್ರತೀಭಟನಾಕಾರರು ದೂರಿದರು. ಚುನಾವಣಾ ಅಕ್ರಮಗಳು ನಡೆದಿರಬಹುದು ಎಂಬ ವಾರ್ತೆ ಹಬ್ಬುತ್ತಿದ್ದಂತೆ ತಡರಾತ್ರಿಯಲ್ಲಿಯೂ ಪಟ್ಟಣದಲ್ಲಿ ಬಿಗುವಿನ ವಾತಾವರಣ ಮೂಡಿತ್ತು. ಪೊಲೀಸರು ಎಷ್ಟೇ ಬಿಗಿ ಬಂದೋಬಸ್ತ್ ನೀಡಿದರೂ ಫಲಕಾರಿಯಾಗದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠ ಮಾರ್ಟಿನ್‌ನ್ಯಾಮಗ್ಯಾಲ್ ಅರೆಸೈನಿಕ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಿದರು. ಗುಂಪನ್ನು ಚದುರಿಸಲು ಒಮ್ಮೆ ಲಘು ಲಾಠಿ ಪ್ರಹಾರವೂ ನಡೆಯಿತು. ಚುನಾವಣಾ ವೀಕ್ಷಕ ಹಿತೇಶ್, ಚುನಾವಣಾಧಿಕಾರಿ ವೆಂಕಟೇಶ್ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಅಧಿಕಾರಿಗಳು ಶಾಮೀಲು:  ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ,ಅಭ್ಯರ್ಥಿ ಪಿಜಿಆರ್ ಸಿಂಧ್ಯಾ, ಕನಕಪುರ ಕ್ಷೇತ್ರದ ಚುನಾವಣೆಯಲ್ಲಿ ಹಲವಾರು ಅಧಿಕಾರಿಗಳು ಶಾಮೀಲಾಗಿ ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಶಾಸಕರು ನಿರ್ದೇಶಕರಾಗಿರುವ ಸಂಸ್ಥೆಯ ಆವರಣದಲ್ಲಿ ಮತಪೆಟ್ಟಿಗೆ ಗಳನ್ನು ಇರಿಸಿದ್ದೇ ತಪ್ಪು, ಅಭ್ಯರ್ಥಿಗಳ ಗಮನಕ್ಕೆ ತಾರದೆ ಡೀಮಸ್ಟರಿಂಗ್ ಕಾರ್ಯವನ್ನು ನಡೆಸಲಾಗಿದೆ. ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಿ ಯೋಜಿತ ಉದ್ದೇಶ ಪೂರೈಸಿಕೊಂಡಿದ್ದಾರೆ ಎಂದು ಸಿಂಧ್ಯಾ ಆರೋಪಿಸಿದರು. ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಚುನಾವಣೆಗಳಿಗೆ ಆಯೋಗ ಅನುವು ಮಾಡಿಕೊಡಬೇಕು. ಕನಕಪುರ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯಬೇಕು, ಮುಖ್ಯಚುನಾವಣಾಧಿಕಾರಿಗಳು ಆಗಮಿಸುವವರೆಗೂ ಪ್ರತಿಭಟನೆ ನಿಲ್ಲದು ಎಂದು ಎಚ್ಚರಿಸಿದರು.
ಧಿಕ್ಕಾರ: ಕಾಲೇಜು ಆವರಣದ ಒಳಗೆ ನೂರಾರು ಮಂದಿ ಜೆಡಿಎಸ್‌ಕಾರ್ಯಕರ್ತರು ತಾಲೂಕು ಆಡಳಿತದ ಪಕ್ಷಪಾತ ಹಾಗೂ ವೈಫಲ್ಯದ ಬಗ್ಗೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರೆ, ವಿಚಾರವನ್ನು ಅರಿತ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಕಾಲೇಜಿನ ಮುಂಭಾಗದಲ್ಲಿ ಜಮಾಯಿಸಿ ಜೆಡಿಎಸ್ ಸೋಲುವ ಭೀತಿಯಿಂದ ಕುಯುಕ್ತಿಯನ್ನು ಪ್ರದರ್ಶಿಸಿದೆ ಎಂದು ಧಿಕ್ಕಾರ ಕೂಗಿದರು. ಇದೇ ಸಂದರ್ಭದಲ್ಲಿ ರೊಚ್ಚಿಗೆದ್ದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ನಾರಾಯಣಗೌಡರ ಕ್ವಾಲಿಸ್ ವಾಹನವನ್ನು ಅಡ್ಡಗಟ್ಟಿ ಸೈಜುಗಲ್ಲುಗಳನ್ನು ಎತ್ತಿಹಾಕಿ ಜಖಂಗೊಳಿಸಿದರು. ವಾಹನವನ್ನೇ ಉರುಳಿಸಿ ಗುಂಡಿಗೆ ತಳ್ಳಿ ತಮ್ಮ ಕೋಪವನ್ನು ಪ್ರದರ್ಶಿಸಿದರು.
ಮಧ್ಯರಾತ್ರಿ ಎರಡುಗಂಟೆ ವೇಳೆಗೆ ಚುನಾವಣಾಧಿಕಾರಿಗಳು ಮಾಜಿ ಸಚಿವ ಸಿಂಧ್ಯಾರ ಮನವೊಲಿಸಿ ಮತಪೆಟ್ಟಿಗೆಗಳನ್ನು ಮೊಹರು ಮಾಡಿ ಚುನಾವಣಾ ಏಜೆಂಟರ ಜೊತೆಗೆ ಎಣಿಕೆ ಕೇಂದ್ರಕ್ಕೆ ರವಾನಿಸಲು ಹಾಗೂ ಪರಿಶೀಲನೆ ನಡೆಸಲು ಅನುಮತಿ ನೀಡಿದರು. ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಬೆಂಬಲಿಗರನ್ನು ಪೊಲೀಸರು ಚದುರಿಸಿದ ಮೇಲೆ, ಮೈದಾನದ ಒಳಗೆ ಪ್ರತಿಭಟನೆ ನಡೆಸುತ್ತಿದ್ದವರೂ ಕೂಡಾ ಮರಳಿದರು.
ಬಿಗುವಿನನ ವಾತಾವರಣ: ಬೆಳಗ್ಗೆ ಮತ್ತೆ ಬಿಗುವಿನ ವಾತಾವರಣ ಮತ್ತೆ ಮುಂದುವರೆಯಿತು. ಜೆಡಿಎಸ್ ಮುಖಂಡ ನಾರಾಯಣಗೌಡ, ನಿನ್ನೆ ರಾತ್ರಿ ವಾಹನಗಳನ್ನು ಜಖಂ ಮಾಡಿದ ವಿಚಾರವಾಗಿ ಕೆಲವು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದಾಗ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಮತ್ತೊಮ್ಮೆ ನೂಕಾಟ ತಳ್ಳಾಟಗಳು ನಡೆದವು. ಪೊಲೀಸರು ಕ್ರೇನ್ ತರಿಸಿ ಸ್ಥಳದಿಂದ ಜಖಂಗೊಂಡ ವಾಹನವನ್ನು ತೆರವುಗೊಳಿಸಿದರು. ಸದರಿ ಪ್ರಕರಣದ ಬಗ್ಗೆ ಕನಕಪುರ ಟೌನ್ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.