ನಕಲಿ ಆದಾಯ ತೆರಿಗೆ ಅಧಿಕಾರಿಗಳಿಂದ ದರೋಡೆ
ಕ.ಪ್ರ. ವಾರ್ತೆ ಆನೇಕಲ್ಲು ಮೇ 7
ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡ 5 ದಾಂಡಿಗರು ಮನೆಯಲ್ಲಿದ್ದ ಬಾಲಕಿಯನ್ನು ಹೆದರಿಸಿ ರೂ. 1.15 ಲಕ್ಷ ನಗದು, 300 ಗ್ರಾಂ ಚಿನ್ನ ಹಾಗೂ ದೇವರ ಮನೆಯಲ್ಲಿದ್ದ ಬೆಳ್ಳಿಯ ಒಡವೆಗಳನ್ನು ದೋಚಿಕೊಂಡು ಹೋದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಶಂಕರ್ ಬಡವಾಣೆಯ ಲಿಂಕನ್ ಸ್ಕೂಲ್ ಬಳಿ ನಡೆದಿದೆ. ಆನೇಕಲ್ ಪಬ್ಲಿಕ್ ಶಾಲೆ, ಕಾವೇರಿ ಪದವಿ ಪೂರ್ವ ಕಾಲೇಜು, ನರ್ಸಿಂಗ್ ಕಾಲೇಜು ಹಾಗೂ ಮಹಿಳಾ ಪದವಿ ಕಾಲೇಜು ನಡೆಸುತ್ತಿರುವ ಸುನೀತ ಉಪೇಂದ್ರ ಎಂಬುವರ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನಡೆದಿದೆ. ಘಟನೆ ನಡೆದಾಗ ಸುನೀತಾ ಅವರ ಮಗಳು ಎಲ್ಎಲ್ಬಿ ವ್ಯಾಸಂಗ ಮಾಡುತ್ತಿರುವ ಪ್ರಕೃತಿ ಒಬ್ಬರೇ ಮನೆಯಲ್ಲಿದ್ದರು.
ಆಕೆಯೇ ಹೇಳುವಂತೆ ಖಾಕಿ ಬಟ್ಟೆ ಹಾಕಿಕೊಂಡು ಎತ್ತರವಾಗಿದ್ದ ಇಬ್ಬರು ವೃತ್ತ ನಿರೀಕ್ಷಕರೆಂದು ಪರಿಚಯಿಸಿಕೊಂಡು ಮನೆ ಪ್ರವೇಶಿಸಿದರು. ಅವರ ಜೊತೆ ಇಬ್ಬರು ಸಫಾರಿ ಧರಿಸಿದ್ದವರು ಬಂದು ತಾವು ಆದಾಯ ತೆರಿಗೆ ಇಲಾಖೆಯಿಂದ ಬಂದವರೆಂದು ತಿಳಿಸಿ ಮನೆ ತನಿಖೆಗಾಗಿ ಬಂದಿದ್ದೇವೆ. ಸಹಕಾರ ನೀಡಬೇಕೆಂದು ಹೇಳಿದರು. ಅಮ್ಮನಿಗೆ ಫೋನ್ ಮಾಡುತ್ತೇನೆ ಎಂದಾಗ ಕೈಲಿದ್ದ ಮೊಬೈಲ್ ಕಿತ್ತುಕೊಂಡು ಸಿಮ್ಕಾರ್ಡ್ ತೆಗೆದೆಸೆದರು.
ಗುರ್ತಿಸಬಲ್ಲೆ: ನಾಲ್ವರು ಮನೆಯಲ್ಲಿನ ಕೊಠಡಿ ಹಾಗೂ ಬೀರುವಿನಲ್ಲಿದ್ದ ನಗ, ನಗದು ಮತ್ತು ಕೆಲ ದಾಖಲೆಗಳನ್ನು ಎತ್ತಿಕೊಂಡರು. ಮತ್ತೊಬ್ಬ ಮನೆಯಲ್ಲಿದ್ದ ನನ್ನನ್ನು ಬಲವಂತವಾಗಿ ಕುಳ್ಳಿರಿಸಿದ. ಅವರನ್ನು ಗುರ್ತಿಸಬಲ್ಲೆ.
ನಿಮ್ಮ ತಂದೆ ಎಲ್ಲಿದ್ದಾರೆ ಎಂದು ಕೇಳಿದರು. ಅವರು 1 ವರ್ಷದ ಹಿಂದೆ ತೀರಿಕೊಂಡರು ಎಂದೆ. ಮನೆಯಿಂದ ಹೊರಬರಲು ಅಥವಾ ಕೂಗಿಕೊಳ್ಳಲು ಅವಕಾಶ ನೀಡಲಿಲ್ಲ. 5 ಜನ ಮನೆಯಿಂದ ಹೊರಹೋದ ನಂತರ ಸಿಮ್ ಜೋಡಿಸಿಕೊಂಡು ಸನಿಹದ ಶಾಲೆಯಲ್ಲಿದ್ದ ತಾಯಿ ಸುನಿತಾ ಹಾಗೂ ತಮ್ಮ ಪ್ರಜ್ವಲ್ಗೆ ತಿಳಿಸಿದೆ. ತಾಯಿ ಸುನಿತಾ ಹಾಗೂ ಪ್ರಜ್ವಲ್ ಮನೆ ಬಳಿ ಬಂದಾಗ ಆಗ ತಾನೆ ಟಾಟಾ ಸುಮೋ ಕಾರಿನಲ್ಲಿ ಮುಂದೆ ಹೋದವರನ್ನು ಅಟ್ಟಿಸಿಕೊಂಡು ಹೋದೆವು. ಯಾವ ಇಲಾಖೆ, ನಿಮ್ಮ ಬಳಿ ಇರುವ ದಾಖಲೆ ತೋರಿಸಿ ಎಂದಾಗ, ಬನ್ನೇರುಘಟ್ಟ ಠಾಣೆಗೆ ಬಂದು ನಿಮ್ಮ ಒಡವೆ ಮತ್ತು ದಾಖಲೆ ಒಯ್ಯಿರಿ ಎಂಬುದಾಗಿ ತಿಳಿಸಿದರು.
ವಿಷಯ ತಿಳಿದ ಆನೇಕಲ್ ಠಾಣಾ ಪಿಎಸ್ಸೈ ರಾಘವೇಂದ್ರ ಬೈಂದೂರು ಅವರು ಸಿಬ್ಬಂದಿ ಜೊತೆ ನಾಕಾ ಬಂದಿ ನಡೆಸಿ ವಾಹನ ತಪಾಸಣೆ ಆರಂಭಿಸಿದರು. ಟಾಟಾ ಸುಮೋ ವೇಗವಾಗಿ ತಮಿಳುನಾಡು ಕಡೆ ಹೋಯಿತು ಎಂದು ಪ್ರಜ್ವಲ್ ತಿಳಿಸಿದ್ದಾರೆ. ವೃತ್ತ ನಿರೀಕ್ಷಕ ಹಾಗೂ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದರು.
ವಿಷಯ ತಿಳಿದ ಜನ ತಂಡೋಪ ತಂಡವಾಗಿ ಶಂಕರ್ ಬಡಾವಣೆಯತ್ತ ಆಗಮಿಸಿದರು. ಜನ ಸಂದಣಿ ತಡೆಯಲು ಪೊಲೀಸರು ಶ್ರಮ ಪಡಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

