ಫಲಿಸದ ವಿರೋಧಿಗಳ ತಂತ್ರ: ಬಾಲಕೃಷ್ಣ ಟೀಕೆ
ಕ.ಪ್ರ.ವಾರ್ತೆ ರಾಮನಗರ ಮೇ11
ಲೋಕೋಪಯೋಗಿ ಇಲಾಖೆ ಹಗರಣದ ಸುಳಿಗೆ ಸಿಲುಕಿಸಿ ನನ್ನನ್ನು ರಾಜಕೀಯವಾಗಿ ಹಣಿಯಲು ವಿರೋಧಿಗಳು ನಡೆಸಿದ ಷಡ್ಯಂತ್ರ ಫಲಿಸಿಲ್ಲ. ಅದರ ಪರಿಣಾಮ ಈ ಬಾರಿ ನನ್ನ ಗೆಲವಿನ ಅಂತರ 10 ಸಾವಿರ ಮತಗಳಷ್ಟು ಕಡಿಮೆಯಾಗಿದೆಯಷ್ಟೇ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ವಿಶ್ಲೇಷಿಸಿದ್ದಾರೆ.
600 ಕೋಟಿ ಹಗರಣದ ಹೆಸರಿನಲ್ಲಿ ನನ್ನ ಮುಖಕ್ಕೆ ಮಸಿ ಬಳಿಯಲು ಕುತಂತ್ರ ನಡೆಸಿದ ಎಲ್ಲ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಸಹಿತ ಮುಖಂಡರ ಮೇಲೆ ಶೀಘ್ರವೇ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಸೊಪ್ಪು ಹಾಕಲಿಲ್ಲ: ಲೋಕೋಪಯೋಗಿ ಇಲಾಖೆ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಹೀಗಿದ್ದರೂ ನನ್ನ ಹೆಸರನ್ನು ಅನಗತ್ಯವಾಗಿ ಬಳಸಿ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ. ಕಾಂಗ್ರೆಸ್ಸಿಗರು ನಡೆಸಿದ ಅಪಪ್ರಚಾರದ ಪರಿಣಾಮ ಗೆಲವಿನ ಅಂತರ 14 ಸಾವಿರ ಮತಗಳಿಗೆ ಇಳಿದಿದೆ. ಇಲ್ಲದಿದ್ದಲ್ಲಿ 25 ಸಾವಿರಕ್ಕೂ ಅಧಿಕವಾಗುತ್ತಿತ್ತು ಎಂದು ಹೇಳಿದರು.
ಚುನಾವಣೆ ಆದ ತರುವಾಯವೇ ನನ್ನನ್ನು ಜೈಲಿಗೆ ಸೇರಿಸುತ್ತೇವೆ ಎನ್ನುವ ರೀತಿಯಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಅಭ್ಯರ್ಥಿ ಮಂಜುನಾಥ್, ಲಿಂಗಪ್ಪ ಪ್ರಚಾರ ನಡೆಸಿದ್ದರು. ಮತದಾರರು ವಾಸ್ತವ ಅರಿತುಕೊಂಡು, ಮತವನ್ನು ನಿರ್ಧರಿಸಿದ್ದಾರೆ. ಮಾಗಡಿಯ ಮತದಾರರು ಅಪಪ್ರಚಾರಕ್ಕೆ ಸೊಪ್ಪು ಹಾಕಿಲ್ಲ ಎಂದು ಬಾಲಕೃಷ್ಣ ತಿಳಿಸಿದರು.
ಎದುರಾಳಿ ಬದಲು: ಕ್ಷೇತ್ರದಲ್ಲಿ ತಮಗೆ ಕಳೆದ ಬಾರಿ ಬಿಜೆಪಿಯಿಂದ ನಿಕಟ ಸ್ಪರ್ಧೆ ಎದುರಾಗಿದ್ದು, ಈ ಬಾರಿ ಕಾಂಗ್ರೆಸ್ ಸೆಣಸಿದೆ. ಮಾಗಡಿ ಕಸಬಾ, ಕೂಟಗಲ್, ಮಾಡಬಾಳ್, ಕುದೂರು, ತಿಪ್ಪಸಂದ್ರ ಹೋಬಳಿಗಳಲ್ಲಿ ನನಗೆ ಲೀಡ್ ಬಂದಿದೆ. ಸ್ಥಳೀಯ ಎನ್ನುವ ಅಂಶವಿದ್ದಾಗ್ಯೂ ಬಿಡದಿ ಹೋಬಳಿ ಮತದಾರರು ನನಗೆ ಗಣನೀಯ ಮತ ನೀಡಿದ್ದಾರೆ ಎಂದರು.
ಕುಮಾರಸ್ವಾಮಿ ನಾಮಬಲ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿದಿವೆ. ಪ್ರತಿಪಕ್ಷ ನಾಯಕರಾಗಲಿರುವ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತು ನಾನು ಸಹಿತ ಪಕ್ಷದ ಶಾಸಕರು ಕೆಲಸ ಮಾಡಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸಾರಥ್ಯ ವಹಿಸಲಿ: ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ಹರಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು ಮುಂದಾಳತ್ವ ವಹಿಸಿಕೊಂಡು, 6 ತಿಂಗಳೊಳಗೆ ಹೋರಾಟ ಪ್ರಾರಂಭಿಸಲಿ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಬಾಲಕೃಷ್ಣ ಹೇಳಿದರು.
ಜೆಡಿಎಸ್ ಮುಖಂಡರಾದ ಬ್ಯಾಟಪ್ಪ, ಕೆ.ದೇವೇಗೌಡ, ರಾಮಯ್ಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

