ರಾಜಕೀಯ ರಂಗದಲ್ಲಿ ಅಟಲ್‌ಗೆ ಬೇರೆ ಸಾಟಿ ಇಲ್ಲ
ಬೆಂಗಳೂರು: ದೇಶದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕೊರತೆ ಇಲ್ಲ. ಬದಲಾಗಿ ಅಟಲ್‌ಬಿಹಾರಿ ವಾಜಪೇಯಿ ಅವರಂತಹ ಮುತ್ಸದ್ಧಿಗಳ ಕೊರತೆ ಇದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮ ಕ್ರಿಯೇಷನ್ಸ್ ಹೊರತಂದಿರುವ ಎಂ.ನರಸಿಂಹಮೂರ್ತಿ ಅವರು ಬರೆದಿರುವ 'ರಾಜರ್ಷಿ ಅಟಲ್‌ಜಿ' ಎಂಬ ಪುಸ್ತಕವನ್ನು ಭಾನುವಾರ ಭಾರತೀಯ ವಿದ್ಯಾಭವನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವ್ಯಕ್ತಿತ್ವ ಬಹಳ ದೊಡ್ಡದ್ದು: ಅಟಲ್‌ಜಿ ಅವರ ವ್ಯಕ್ತಿತ್ವ ಬಹಳ ದೊಡ್ಡದ್ದು. ಇಂದು ಅವರನ್ನು ಹೋಲುವ ಯಾವೊಬ್ಬ ರಾಜಕೀಯ ವ್ಯಕ್ತಿಗಳೂ ಸಿಗುವುದಿಲ್ಲ. ಭಾರತದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕೊರತೆ ಇಲ್ಲ. ಎಲ್ಲಿ ಹೋದರೂ ಸಿಗುತ್ತಾರೆ. ಆದರೆ, ಅಟಲ್ ಅವರಂತಹ ಮುತ್ಸದ್ಧಿ ಸಿಗುವುದು ಕಷ್ಟ ಎಂದರು. ನಾನು ವಿದ್ಯಾರ್ಥಿ ದೆಸೆಯಿಂದಲೂ ಅಟಲ್ ಅವರ ತತ್ವ ಸಿದ್ಧಾಂತ ರೂಢಿಸಿಕೊಂಡು ಅವರ ಬಗ್ಗೆ ಹೆಚ್ಚಿನ ಅಭಿಮಾನ ಇಟ್ಟುಕೊಂಡು ಬೆಳೆದವನು. ಅವರ ಮಾತುಗಳು ಇಂದಿಗೂ ಎಷ್ಟೋ ಜನರಿಗೆ ಆದರ್ಶವಾಗಿವೆ ಎಂದು ಅಭಿಪ್ರಾಯಪಟ್ಟರು.
ಮುಂದಾಲೋಚನಾ ವ್ಯಕ್ತಿತ್ವ: ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಜಾರಿಗೆ ತಂದ ಸಂದರ್ಭದಲ್ಲಿ ಅಟಲ್‌ಜಿ, ಲಾಲ್‌ಕೃಷ್ಣ ಆಡ್ವಾಣಿ, ಎಸ್.ಎನ್.ಮಿಶ್ರಾ, ದಂಡವಾಟಿ ಅವರು ಜೈಲಿನಲ್ಲಿ ಇದ್ದರು. ಇವರ ಪರವಾಗಿ ನಾನು ಕೋರ್ಟ್‌ನಲ್ಲಿ ವಾದ ಮಂಡಿಸುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಆಡ್ವಾಣಿ ಅವರು, ಕಾನೂನಿನ ಪರವಾಗಿ ವಾದ ಮಂಡಿಸು ಎಂದು ನನಗೆ ಹೇಳಿದ್ದರು. ಆದರೆ, ಅಟಲ್‌ಜಿ ಅವರು ನೀನು ಏನೇ ವಾದ ಮಾಡಿದರೂ ವ್ಯರ್ಥ. ನಮ್ಮನ್ನು ಪಾರು ಮಾಡುವ ಶಕ್ತಿ ನಿನ್ನ ಕೈಯಲ್ಲೂ ಇಲ್ಲ. ನ್ಯಾಯಮೂರ್ತಿಗಳಿಗೂ ಇಲ್ಲ. ಬೇರೆಯವರ 'ಕೈ'ವಾಡ ಇದೆ ಎಂದು ಹೇಳಿದ್ದರು. ಕೊನೆಗೆ ಅವರು ಹೇಳಿದಂತೆ ಆಯಿತು. ಆ ಸಂದರ್ಭವನ್ನು ನಾನು ಇಂದಿಗೂ ಮರೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಮುಂದಾಲೋಚನಾ ವ್ಯಕ್ತಿತ್ವ ಹೊಂದಿದ್ದ ಅಪ್ರತಿಮ ವ್ಯಕ್ತಿತ್ವ ಅಟಲ್‌ಜಿ ಅವರದ್ದು ಎಂದರು.
ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ ಮಾತನಾಡಿ, ಅಟಲ್‌ಜಿ ಅವರು ವಿದ್ಯಾರ್ಥಿ ಜೀವನದಲ್ಲಿ ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಭಾಷಾಣಕಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಕೇಂದ್ರದಲ್ಲಿ ಹೊಟೇಲ್‌ಗಳ ಸ್ಥಾಪನೆ ಬಗ್ಗೆ ವಿಷಯ ಪ್ರಸ್ತಾಪವಾದಾಗ ಸಂದರ್ಭದಲ್ಲಿ ಅಟಲ್‌ಜಿ ಅವರು ನಮಗೆ ಅಶೋಕ ಹೊಟೇಲ್‌ನಂಥವುಗಳು ಬೇಕಾಗಿಲ್ಲ. ಬದಲಾಗಿ ಧನ್ವಂತರಿ ಆಸ್ಪತ್ರೆಗಳು ಬೇಕು ಎಂದು ವಾದಿಸುತ್ತಿದ್ದರು ಎಂಬುದನ್ನು ಸ್ಮರಿಸಿಕೊಂಡರು.
ಪ್ರಗತಿ ಪ್ರತಿಪಾದಕ: 'ಆನೇಕ ಹೆಣ್ಣು ಮಕ್ಕಳ ಆಕರ್ಷಕ ಹುಡುಗ' ಅಟಲ್‌ಜಿ ಅಗಿದ್ದರು. ಅಲ್ಲದೆ, ಹಲವಾರು ಬಾರಿ ಅವರ ಮನೆಯಿಂದ ಮದುವೆ ಪ್ರಸ್ತಾಪ ಬಂದಾಗಲೂ ಲೆಕ್ಕಿಸದೆ ಬ್ರಹ್ಮಚರ್ಯ ಕಾಪಾಡಿಕೊಂಡು ದೇಶದ ಪ್ರಗತಿಯೇ ನಮ್ಮ ಪ್ರಗತಿ ಎಂದು ನಂಬಿದ್ದರು. ಅವರು 'ಪಾಂಚಜನ್ಯ' ಎಂಬ ಪತ್ರಿಕೆ ಹೊರತರುವ ಮೂಲಕ ಪತ್ರಕರ್ತರಾಗಿಯೂ ಸೇವೆಸಲ್ಲಿಸಿದ್ದರು ಎಂಬ ಅನೇಕ ವಿಷಯಗಳ ಬಗ್ಗೆ ರಾಜರ್ಷಿ ಅಟಲ್‌ಜಿ ಪುಸ್ತಕದಲ್ಲಿ ಸವಿಸ್ತಾರವಾಗಿ ಪ್ರಕಟಿಸಲಾಗಿದೆ ಎಂದರು. ಹಿರಿಯ ರಂಗಕರ್ಮಿ ಮಾ.ಹಿರಣ್ಣಯ್ಯ, ಬಿ.ಎಲ್. ಸಂತೋಷ್ ಮತ್ತಿತರರು ಭಾಗಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

