ಆಂಗ್ಲ ವ್ಯಾಮೋಹದಿಂದ ಕನ್ನಡ ಬಿಕ್ಕಟ್ಟು
ಕ.ಪ್ರ. ವಾರ್ತೆ ರಾಮನಗರ ಮೇ 12
ಕನ್ನಡ ಭಾಷೆಯು ಬಿಕ್ಕಟ್ಟಿಗೆ ಸಿಲುಕಲು ನಮ್ಮಲ್ಲಿ ಮನೆ ಮಾಡಿರುವ ಆಂಗ್ಲ ಭಾಷಾ ವ್ಯಾಮೋಹವೇ ಕಾರಣ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ ವಿಷಾದಿಸಿದರು.
ನಗರದ ಸ್ಫೂರ್ತಿ ಭವನದಲ್ಲಿ ಮಹಿಳಾ ಶಕ್ತಿ ವೇದಿಕೆಯಿಂದ ನಡೆದ ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕರಣದ ಜಾಲಕ್ಕೆ ಸಿಲುಕಿರುವ ಕನ್ನಡ ಭಾಷೆಯು ವ್ಯವಹಾರಿಕವಾಗಿ ಅಲ್ಲದೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕವಾಗಿಯೂ ಹಿನ್ನಡೆ ಅನುಭವಿಸಿದೆ ಎಂದರು.
ಕನ್ನಡದಿಂದ ಭವಿಷ್ಯ ರೂಪಿಸಿಕೊಡಲಾಗದು, ಅದೇನಿದ್ದರೂ ಇಂಗ್ಲಿಷ್ ಭಾಷೆಯಿಂದ ಮಾತ್ರವೇ ಸಾಧ್ಯ ಎನ್ನುವ ಮಟ್ಟಕ್ಕೆ ನಮ್ಮ ಪೋಷಕರು ಬಂದಿದ್ದಾರೆ. ಕನ್ನಡ ಭಾಷೆಯು ಕನ್ನಡಿಗರ ದೃಷ್ಟಿಯಲ್ಲಿಯೆ ಅವಿಶ್ವಾಸ ಹುಟ್ಟುಹಾಕುವ ಭಾಷೆಯಾಗಿ ಪರಿಣಮಿಸಿದೆ. ಇದರಿಂದಾಗಿಯೇ ಭಾಷೆಗೆ ಬಹುದೊಡ್ಡ ಪೆಟ್ಟು ಬಿದ್ದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಮಾನ ಶಿಕ್ಷಣ ಅಗತ್ಯ: ಸಮಾನ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸದಿದ್ದರೆ ಸಾಮಾಜಿಕ ಅಸಮಾನತೆ ದೂರ ಮಾಡಲಾಗದು. ಹೀಗಾಗಿ ಸಮಾನ ಶಿಕ್ಷಣದತ್ತ ಒತ್ತು ನೀಡುವುದು ಅಗತ್ಯ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟ ರು.
ವೇದಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಡ್ಡಾಯ ಶಿಕ್ಷಣದ ಹಕ್ಕು ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಶೈಕ್ಷಣಿಕ ಹಕ್ಕಿನ ಖಾತ್ರಿಯಗಿದೆ. ಭಾರತದ ಕಟ್ಟಕಡೆಯ ಪ್ರಜೆಗೂ ಸಹ ಶಿಕ್ಷಣ ತಲುಪಬೇಕು ಎನ್ನುವುದೇ ಸಮಾನ ಶಿಕ್ಷಣದ ಮೂಲ ಉದ್ದೇಶ ಎಂದರು.
ರೈತ ಸಂಘದ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ಸಮಾನ ಶಿಕ್ಷಣದ ಜಾರಿಯಿಂದ ಸಾಮಾಜಿಕ ಸಮಾನತೆ ಸಾಧಿಸಿ, ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ. ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಎಲ್ಲ ವರ್ಗದ ಜನರು ಸರ್ಕಾರದ ಅಭಿವೃದ್ಧಿಯ ಫಲವನ್ನು ಪಡೆಯಬೇಕು ಎಂದು ತಿಳಿಸಿದರು.
ಇದೇ ವೇಳೆ ಸಾಹಿತಿ ಸಿ.ರಾಮಲಿಂಗೇಶ್ವರ ಅವರು ಮಾತನಾಡಿದರು.
ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್, ಎಂ.ಶಿವಮಾದು, ವಿಜಯ್ರಾಂಪುರ, ಡಾ.ಅಪ್ಪಗೆರೆ ವೆಂಕಟಯ್ಯ, ಡಾ.ಕೂಡ್ಲೂರು ವೆಂಕಟಪ್ಪ, ಶಿವರಾಮೇಗೌಡ, ರಾ.ಶಿ.ದೇವರಾಜು, ಚಕ್ಕಲೂರು ಚೌಡಯ್ಯ, ಶಿವಾಜಿರಾವ್, ಕೃಷ್ಣೇಗೌಡ, ನಾಗರತ್ನ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

