ಬೆಂಗಳೂರು ಗ್ರಾಮಾಂತರ

ಯುಪಿಎಸ್‌ಸಿ ಪ್ರಮಾದದಿಂದ ಪುತ್ರನ ಸಾವು: ಆಕ್ರೋಶ

Published On :

ಬೆಂಗಳೂರು: ನಮ್ಮ ಪುತ್ರನ ಸಾವಿಗೆ ಕೇಂದ್ರ ಲೋಕಸೇವಾ ಆಯೋಗವೇ ಕಾರಣ. ಅಲ್ಲಿನ ಸದಸ್ಯರು ಮಾಡಿದ ತಪ್ಪಿನಿಂದ ಇಂದು ನಾವು ಮಗನನ್ನು ಕಳೆದುಕೊಂಡೆವು...
ಕೇಂದ್ರ ಆಯೋಗ ಪ್ರಕಟಿಸಿದ ಫಲಿತಾಂಶದ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಮಡಿಕೇರಿಯ ನಾಪೋಕ್ಲು ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ ರ್ಯಾಂಕ್ ವಿದ್ಯಾರ್ಥಿ ವಿ.ವೈ. ಮಂಜುನಾಥ್ ತಾಯಿ ನಾಗರತ್ನಮ್ಮ ಯುಪಿಎಸ್‌ಸಿ ವಿರುದ್ಧ ಹರಿಹಾಯ್ದದ್ದು ಹೀಗೆ.
ಶನಿವಾರ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅಂತ್ಯಕ್ರಿಯೆ ನಂತರ 'ಕನ್ನಡಪ್ರಭ'ದೊಂದಿಗೆ ತಮ್ಮ ನೋವು ಹಂಚಿಕೊಂಡ ನಾಗರತ್ನಮ್ಮ, ಮಗನ ಸಾವಿಗೆ ಆಯೋಗ ಬೊಟ್ಟುಮಾಡಿ ತೋರಿಸಿದರು.
ನಮ್ಮ ಪುತ್ರ ರ್ಯಾಂಕ್ ವಿದ್ಯಾರ್ಥಿ. ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುತ್ತಾನೆ ಎಂಬ ನಿರೀಕ್ಷೆ ಇತ್ತು. ಆದರೆ, ಆತನ ಹೆಸರಿನ ಜಾಗದಲ್ಲಿ ಬೇರೆ ಹೆಸರಿದೆ. ಆಯೋಗದ ಯಡವಟ್ಟಿನಿಂದ ಇಂದು ಇಂತಹ ಹಲವು ವಿದ್ಯಾರ್ಥಿಗಳು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಂಬಂಧಿ ಯಾದವಮೂರ್ತಿ ಮಾತನಾಡಿ, ಮಂಜುನಾಥ್ ಯುಪಿಎಸ್‌ಸಿ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಮುಖ್ಯಪರೀಕ್ಷೆ ಎದುರಿಸಿದ್ದರು. ಏಪ್ರಿಲ್ 16ರಂದು ನವದೆಹಲಿಯಲ್ಲಿ ಮುಖ್ಯಪರೀಕ್ಷೆ ನಡೆದಿತ್ತು. ಮೇ 3ರಂದು ಅದರ ಫಲಿತಾಂಶ ಪ್ರಕಟವಾಗಿತ್ತು. ಕ್ರಮಸಂಖ್ಯೆ  538745ರಲ್ಲಿ ಮಂಜುನಾಥ್ ಪರೀಕ್ಷೆ ಬರೆದಿದ್ದರು. ಆದರೆ, ಅಂತಿಮ ಪಟ್ಟಿಯಲ್ಲಿ ಆ ಕ್ರಮಸಂಖ್ಯೆ ಮುಂದೆ ಅಶ್ವಿನ್ ಬಿ ಎಂಬ ಹೆಸರಿತ್ತು. ಇದನ್ನು ನೋಡಿ ಗಾಬರಿಗೊಂಡ ಮಂಜುನಾಥ್ ತಕ್ಷಣ ಯುಪಿಎಸ್‌ಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡಿದ್ದ. ವಾರ ಕಳೆದರೂ ಅಧಿಕಾರಿಗಳಿಂದ ಆ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ. ಇದರಿಂದ ನೊಂದ ಮಂಜುನಾಥ್ ಸದಾ ಬೇಸರದಿಂದಿರುತ್ತಿದ್ದ. ಘಟನೆಯಿಂದ ಆತನ ಪೋಷಕರು ಕುಗ್ಗಿಹೋಗಿದ್ದಾರೆ. ಆಗಿರುವ ತಪ್ಪೇನು ಎಂದು ಪರಿಶೀಲಿಸಿ ಆಯೋಗದವರು ಮಾಹಿತಿ ನೀಡಿದ್ದಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಎಂಜಿನಿಯರಿಂಗ್ ಪದವಿ ಪಡೆದಿದ್ದ ಮಂಜುನಾಥ್ ಜನಸೇವೆ ಮಾಡುವ ಆಸೆಯಿಂದ ಪರೀಕ್ಷೆ ತೆಗೆದುಕೊಂಡಿದ್ದ. ಅದನ್ನು ಒಂದೇಬಾರಿ ಪಾಸು ಮಾಡಿದ್ದ. ಆದರೆ, ಕೆಲ ತಪ್ಪುಗಳಿಂದ ಇಂತ ಅನಾಹುತ ಸಂಭವಿಸುತ್ತವೆ ಎಂದು ಆರೋಪಿಸಿದರು.
ಘಟನೆ: ಗುರುವಾರ ಮನೆಯಿಂದ ಹೊರಹೋಗಿದ್ದ ಮಂಜುನಾಥ್ ಮೃತದೇಹ ಶನಿವಾರ ಬೆಳಗ್ಗೆ ತಡಿಯಂಡಮೋಳ್ ಎಂಬ ಬೆಟ್ಟದಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು, ಸ್ಥಳದಲ್ಲಿ ಪತ್ತೆಯಾದ ಮೊಬೈಲ್‌ನಲ್ಲಿ ದಾಖಲಾಗಿದ್ದ ಅಕ್ಕ ಎಂಬ ಹೆಸರಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಮಂಜುನಾಥ್ ಬೆಂಗಳೂರಿನ ಶ್ರೀರಾಂಪುರದವರು ಎಂಬ ಮಾಹಿತಿ ದೊರೆಯಿತು.  ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು.




ಯಾವುದೇ ತರಬೇತಿಗೆ ಹೋಗದೆ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದ ಇಂತಹ ಬುದ್ಧಿವಂತನನ್ನು ಕಳೆದುಕೊಂಡಿರುವುದು ನಮ್ಮ ದುರದೃಷ್ಟ. ಆಯೋಗದ ತಪ್ಪಿನಿಂದ ವಿದ್ಯಾರ್ಥಿಗಳು ತಲೆಕೊಡಬೇಕಾಗುತ್ತದೆ. ಈ ಪ್ರಕರಣದ ಸೂಕ್ತ ತನಿಖೆ ಆಗಬೇಕು.
- ಪಿ.ಆರ್. ರಾವ್,
ನಿವೃತ್ತ ಐಎಎಸ್ ಅಧಿಕಾರಿ

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಂದರ್ಶನಕ್ಕೆ ಮಂಜುನಾಥ್ ಹಾಗೂ ಕುಟುಂಬ ಸದಸ್ಯರು ಹೋಗಿದ್ದರು. ಮಗ ಉತ್ತಮ ಅಂಕ ಗಳಿಸಿ ಉನ್ನತ ಹುದ್ದೆ ಏರುತ್ತಾನೆ ಎಂದು ಭಾವಿಸಲಾಗಿತ್ತು. ಈ ಬಗ್ಗೆ ಆತನ ತಾಯಿ ಸಾವಿರಾರು ಕನಸು ಕಟ್ಟಿಕೊಂಡಿದ್ದರು.
- ಗವಿಸಿದ್ದಯ್ಯ,
ಮಂಜುನಾಥ್ ಚಿಕ್ಕಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.