ಉಮಾಶ್ರೀಗೆ ಸಚಿವ ಸ್ಥಾನ ನೀಡಲು ಆಗ್ರಹ
ದೊಡ್ಡಬಳ್ಳಾಪುರ: ಈ ಬಾರಿ ನೇಕಾರರ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಏಕೈಕ ಶಾಸಕಿ ಉಮಾಶ್ರೀ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ರಾಜ್ಯ ನೂತನ ಸಿಎಂಗೆ ಅಭಿನಂದನೆಗಳನ್ನು ಸಲ್ಲಿಸಿರುವ ದೊಡ್ಡಬಳ್ಳಾಪುರದ ವಿವಿಧ ನೇಕಾರ ಸಂಘಟನೆಗಳು ಆಗ್ರಹಿಸಿವೆ. ಕಾಂಗ್ರೆಸ್ ಹಿರಿಯ ಮುಖಂಡರೂ ಆಗಿರುವ ಅವರು, ವಿಧಾನಪರಿಷತ್ ಸದಸ್ಯರಾಗಿ ಕೂಡ ಸೇವೆ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಉಮಾಶ್ರೀ ಅವರನ್ನು ಸಂಪುಟ ಸಚಿವರಾಗಿ ಘೋಷಿಸಬೇಕು ಎಂದು ಇಲ್ಲಿನ ದೇವಾಂಗ ಮಂಡಲಿ, ಶ್ರೀಗಾಯತ್ರಿಪೀಠ ಮಿತ್ರ ಬಳಗ, ಗಾಯತ್ರಿಪೀಠ ಯುವ ಬಳಗ, ಮಹಿಳಾ ಬಳಗ, ತೆಲುಗು ದೇವಾಂಗ ಸಂಘ, ಆಂಧ್ರದೇವಾಂಗ ಯೂತ್ಸ್ ಅಸೋಸಿಯೇಷನ್, ಪಟ್ಟಸಾಲಿ ಸಂಘ, ತೊಗಟವೀರರ ಸಂಘ, ಪದ್ಮಶಾಲಿ ಸಂಘ, ಕುರುಹಿನಶೆಟ್ಟಿ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಆಗ್ರಹಿಸಿವೆ.
ಸ್ವಾಮೀಜಿ ಒತ್ತಾಯ: ನೇಕಾರ ಸಮುದಾಯದ ಪ್ರತಿನಿಧಿ ಎನಿಸಿರುವ ಉಮಾಶ್ರೀ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾ ಸಂಸ್ಧಾನದ ದೇವಾಂಗ ದಯಾನಂದಪುರಿ ಸ್ವಾಮೀಜಿ ಕೂಡ ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಸಂಭ್ರಮ
ದೊಡ್ಡಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸೋಮವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ದೊಡ್ಡಬಳ್ಳಾಪುರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ವಿವಿಧೆಡೆ ಸಂಭ್ರಮದ ವಿಜಯೋತ್ಸವ ಆಚರಣೆ ಮಾಡಲಾಗಿದೆ. ಇಲ್ಲಿನ ತಾಲೂಕು ಕುರುಬರ ಸಂಘ, ಜಿಲ್ಲಾ ಕುರುಬರ ಸಂಘ, ಸಂಗೊಳ್ಳಿರಾಯಣ್ಣ ಯುವ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳ ನೇತೃತ್ವದಲ್ಲಿ ಹಲವೆಡೆ ಸಂಭ್ರಮ ಹಂಚಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ನಾಯಕರೊಬ್ಬರು ಸಿಎಂ ಆಗುತ್ತಿರುವುದು ರಾಜ್ಯದ ಭವಿಷ್ಯ ಮತ್ತು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ. ಸ್ವತಃ ಪ್ರಗತಿಪರ ಚಿಂತನೆಗಳಿಂದ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಸಿದ್ದರಾಮಯ್ಯ ಎಲ್ಲ ವರ್ಗಗಳಿಗೂ ಸಮಾನ ಆದ್ಯತೆ ಮತ್ತು ಸಮಾನ ನ್ಯಾಯ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಸಿದ್ಧಲಿಂಗಯ್ಯ ವೃತ್ತ, ಕನಕದಾಸ ರಸ್ತೆ, ಖಾಸ್ಬಾಗ್, ರೇಲ್ವೆ ನಿಲ್ದಾಣ ಬಳಿಯ ವಿ.ಕೃ.ಗೋಕಾಕ ವೃತ್ತ, ಅರಳುಮಲ್ಲಿಗೆ ವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಭ್ರಮಾಚರಣೆ ನಡೆದಿದೆ.
ಸರ್ಕಾರ ಬಸವ ತತ್ವ ಪಾಲಿಸಲಿ: ನಾಗರಾಜ್
ಕೋಲಾರ: ಸಮಾಜ ಸುಧಾರಕ ಬಸವಣ್ಣ ಅವರ ಜಯಂತಿ ದಿನದಂದೇ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ತನ್ನ ಆಡಳಿತದಲ್ಲಿ ಬಸವಣ್ಣ ಅವರ ತತ್ವಗಳನ್ನು ಅಳವಡಿಸಿಕೊಂಡು ಅನುಭವ ಮಂಟಪದ ರೀತಿಯಲ್ಲಿ ಆಡಳಿತ ನಡೆಸಿದಲ್ಲಿ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು. ಬಸವೇಶ್ವರ ಜಯಂತಿ ಅಂಗವಾಗಿ ನಗರದ ಪಾರ್ವತಮ್ಮ ಬಿ.ಆರ್. ಮುನಿಯಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಗೌರೀಪೇಟೆಯ ಬಯಲು ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ವಸ್ತ್ರದಾನ, ಅನ್ನ ದಾಸೋಹ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

