ಬೆಂಗಳೂರು ಗ್ರಾಮಾಂತರ

ಅತಿಯಾಗಿ ರಾಸಾಯನಿಕ ಗೊಬ್ಬರ ಭೂಮಿ ಬಂಜರಾಗುವ ಸಂಭವ

Published On :

ಕ.ಪ್ರ.ವಾರ್ತೆ ,   ರಾಮನಗರ ,   ಮೇ 17
ಖುಷ್ಕಿ ಪ್ರದೇಶದಲ್ಲಿ ಸತತವಾಗಿ ಬೆಳೆ ಬೆಳೆಯಲಾಗುತ್ತಿದೆ. ಇಳುವರಿಯನ್ನು ಹೆಚ್ಚಿಸುವ ಉದ್ದೇಶದಿಂದ ಅತಿಯಾಗಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿರುವುದರಿಂದ ಭೂಮಿ ಬಂಜರಾಗುವ ಸಂಭವವಿದೆ ಎಂದು ಜಿಲ್ಲಾ ಸಾಮಾಜಿಕ ಅರಣ್ಯಾಧಿಕಾರಿ ಶ್ರೀನಿವಾಸ ರಾವ್ ಆತಂಕ ವ್ಯಕ್ತಪಡಿಸಿದರು.
ಮಾಗಡಿಯ ಚಂದೂರಾಯನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ 2013-14ನೇ ಸಾಲಿನ ಭೂಚೇತನ ಯೋಜನೆಯ 2ನೇ ಹಂತದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಬೆಳೆಗೆ ತಕ್ಕಂತೆ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ರಾಸಾಯನಿಕ ಗೊಬ್ಬರವನ್ನು ನೀಡಬೇಕು ಎಂದು ಸಲಹೆ ನೀಡಿದರು.
ರೈತರು ಭೂಚೇತನ ಯೋಜನೆಯ ಅನುಕೂಲ ಪಡೆದುಕೊಂಡು ಬೆಳೆಯ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಂಡು, ಯಾವುದೇ ಸರ್ಕಾರಿ ನೌಕರರಿಗೆ ಕಡಿಮೆ ಇಲ್ಲದಂತೆ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ನೂತನ ಯೋಜನೆ ಜಾರಿ: ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಯ ಇಳುವರಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಭೂಚೇತನ ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ 2011-12ನೇ ಸಾಲಿನಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 2012-13ನೇ ಸಾಲಿನಲ್ಲಿ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ತಿಳಿಸಿದರು.
ಮಣ್ಣಿನಲ್ಲಿ ಕೊರತೆಯಿರುವ ಸತು, ಕ್ಯಾಲ್ಷಿಯಂ, ಗಂಧಕ ಹಾಗೂ ಜೈವಿಕ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುತ್ತಿದೆ. ಮಳೆಯ ಕೊರತೆಯ ನಡುವೆಯೂ ಶೇಕಡಾ 26 ರಿಂದ 34ರವರೆಗೆ ಅಧಿಕ ಇಳುವರಿಯನ್ನು ರೈತರು ಪಡೆದಿದ್ದಾರೆ ಎಂದು ಹೇಳಿದರು.
ಅಧಿಕ ಇಳುವರಿ: 2013-14ನೇ ಸಾಲಿನಲ್ಲಿಯೂ ಸಹ ಭೂಚೇತನ ಯೋಜನೆಯನ್ನು 2ನೇ ಹಂತದಲ್ಲಿ ಮುಂದುವರಿಸಲಾಗಿದೆ. ರೈತರಿಗೆ ಸಹಾಯಧನ ರೂಪದಲ್ಲಿ ಸತುವಿನ ಸಲ್ಫೇಟ್, ಜಿಪ್ಸಂ, ಬೋರಾಕ್ಸ್, ಜೈವಿಕಗೊಬ್ಬರ, ಜೈವಿಕ ಪೀಡೆ ನಾಶಕಗಳನ್ನು ಒದಗಿಸಿ, ಹಾಲಿ ಪಡೆಯುತ್ತಿರುವ ಇಳುವರಿಗಿಂತ ಶೇ.20ರಷ್ಟು ಇಳುವರಿ ಹೆಚ್ಚಿಸಲು ಎಲ್ಲಾ ರೀತಿಯ ತಾಂತ್ರಿಕ ಮಾಹಿತಿಯನ್ನು ಸಕಾಲದಲ್ಲಿ ರೈತರಿಗೆ ನೀಡಲು ಪ್ರತಿ 500 ಹೆಕ್ಟೇರ್ ಖುಷ್ಕಿ ಪ್ರದೇಶದಕ್ಕೆ ಒಬ್ಬರಂತೆ ರೈತ ಅನುವುಗಾರರನ್ನು ನೇಮಿಸಲಾಗಿದೆ. ರೈತರು ಇವರಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಕಡಿಮೆ ರಾಸಾಯನಿಕ ಗೊಬ್ಬರವನ್ನು ಬಳಸಿ ಅಧಿಕ ಇಳುವರಿಯನ್ನು ಪಡೆಯಬೇಕು ಎಂದು ಅಣ್ಣಯ್ಯ ಹೇಳಿದರು.
ಇದೇ ಸಂದರ್ಭದಲ್ಲಿ ಭೂಚೇತನ ಯೋಜನೆಯ ಬಗ್ಗೆ ಮಾಹಿತಿ ಇರುವ ಪೋಸ್ಟರ್ ಹಾಗೂ ಹಸ್ತ ಮಡಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಬೆಂಗಳೂರು ಹಾಗೂ ರಾಮನಗರ ಜಿಲ್ಲೆಯ ಅಪರ ಕೃಷಿ ನಿರ್ದೇಶಕ ಡಾ.ಎಚ್.ಸುಬ್ಬಯ್ಯ, ಇಕ್ರಿಸ್ಯಾಟ್ ಸಂಸ್ಥೆ ವಿಜ್ಞಾನಿ ಡಾ.ಕೆ.ಕೃಷ್ಣಪ್ಪ, ಡಾ.ಸುಬ್ಬಯ್ಯ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಚ್.ನಾಗರಾಜ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.