ಗಾಳಿ-ಮಳೆಗೆ ವಿದ್ಯುತ್ ಕಂಬ, ಮರ ಧರೆಗೆ
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಮೇ 20
ದೊಡ್ಡಬಳ್ಳಾಪುರ ನಗರ ಮತ್ತು ಸುತ್ತಮುತ್ತ ಸೋಮವಾರ ಸಂಜೆ ಬೀಸಿದ ಭಾರೀ ಬಿರುಗಾಳಿ ಮತ್ತು ಸುರಿದ ಮಳೆಗೆ ಹಲವು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಇಲ್ಲಿನ ಖಾಸ್ಬಾಗ್ ಮುಖ್ಯರಸ್ತೆಯ ರಾಮಣ್ಣನಬಾವಿ ಸಮೀಪ ಬೃಹತ್ ಗಾತ್ರದ ಮರದ ಕೊಂಬೆಗಳು ಬಿರುಗಾಳಿಗೆ ನೆಲಕಚ್ಚಿವೆ. ಅದೇ ರೀತಿ ವಿದ್ಯುತ್ ಕಂಬಗಳೂ ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ವಿದ್ಯುತ್ ಕಂಬ ರಸ್ತೆ ಬದಿಗೆ ಉರುಳಿ ಬಿದ್ದಿದ್ದರಿಂದ ಸಂಭವನೀಯ ಭಾರೀ ಅವಘಡ ತಪ್ಪಿದಂತಾಗಿದೆ. ರೈಲು ನಿಲ್ದಾಣ, ಶ್ರೀನಗರ, ಚಂದ್ರಶೇಖರಪುರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ.
ಆಲಿಕಲ್ಲು ಮಳೆ ದೊಡ್ಡಬಳ್ಳಾಪುರ ಹೊರವಲಯದ ಬಿರ್ಲಾಸೂಪರ್ ಬಲ್ಕ್ ಟರ್ಮಿನಲ್ ಕಾರ್ಖಾನೆ ಪ್ರದೇಶ, ವೀರಾಪುರ ಸುತ್ತಮುತ್ತ ಸೋಮವಾರ ಮಧ್ಯಾಹ್ನ ಆಲೀಕಲ್ಲು ಸಹಿತ ಮಳೆ ಸುರಿದಿದೆ. ಗಾಳಿ-ಮಳೆಯ ಪರಿಣಾಮ ಹಲವೆಡೆ ಚರಂಡಿಗಳು ತುಂಬಿ ರಸ್ತೆಯಲ್ಲಿ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಘಟನೆಗಳೂ ಅಲ್ಲಲ್ಲಿ ನಡೆದಿವೆ.
ತಾಲೂಕಿನಾದ್ಯಂತ ಮಳೆ: ದೊಡ್ಡಬಳ್ಳಾಪುರ ನಗರ ಹೊರತು ಪಡಿಸಿ ತಾಲೂಕಿನಾದ್ಯಂತ ಮಳೆ ಸುರಿದಿದೆ. ತಾಲೂಕಿನ ಕೊಡಿಗೇಹಳ್ಳಿ, ಕೆಸ್ತೂರು, ಹಣಬೆ, ದೊಡ್ಡಬೆಳವಂಗಲ, ಬಾಶೆಟ್ಟಿಹಳ್ಳಿ, ಮಾರಸಂದ್ರ, ನಾಗದೇನಹಳ್ಳಿ, ತೂಬಗೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಮಳೆಯಾಗಿದೆ. ದೊಡ್ಡಬಳ್ಳಾಪುರ ನಗರದಲ್ಲಿ ರಾತ್ರಿ ವೇಳೆಗೆ ಜಡಿಮಳೆ ಆರಂಭವಾಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಕೆಸರುಗದ್ದೆಯಾಗಿ ಪರಿವರ್ತನೆಯಾಗಿದ್ದು, ಚರಂಡಿಗಳು ತುಂಬಿ ಚರಂಡಿಯ ಕೊಚ್ಚೆ ನೀರು ರಸ್ತೆಗಳಲ್ಲಿ ಹರಿಯುತ್ತಿದೆ.
ಬಿರುಗಾಳಿ ಹೆಚ್ಚಿದ್ದರಿಂದ ಕೆಲಕಾಲ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಸ್ತೆಗೆ ಉರುಳಿದ್ದ ಮರ ಮತ್ತು ವಿದ್ಯುತ್ ಕಂಬಗಳನ್ನು ಸ್ವಲ್ಪ ಸಮಯದಲ್ಲೇ ತೆರವು ಮಾಡಿದ್ದರಿಂದ ಹೆಚ್ಚಿನ ಸಂಚಾರ ವ್ಯತ್ಯಯ ಉಂಟಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

