ಜಿಲ್ಲೆ ಕಾಂಗ್ರೆಸ್ನಲ್ಲಿ ಮಡುಗಟ್ಟಿದ ಆಕ್ರೋಶ
ರಾಮನಗರ: ಸಿಎಂ ರೇಸ್ನಲ್ಲಿ ನಾನೂ ಒಬ್ಬ ಎಂದಿದ್ದ ಒಕ್ಕಲಿಗ ಜನಾಂಗದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಇದೀಗ ಸಚಿವ ಸ್ಥಾನ ವಂಚಿತರಾಗಿದ್ದಾರೆ. ಈ ಬಗ್ಗೆ ತವರು ಜಿಲ್ಲೆ ಕಾಂಗ್ರೆಸ್ ಪಾಳಯದಲ್ಲಿ ಆಕ್ರೋಶ ಮಡುಗಟ್ಟಿದ್ದರೆ, ಪ್ರತಿಪಕ್ಷ ನಾಯಕರು ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ತರುವಾಯ ಕಾಂಗ್ರೆಸ್ನಲ್ಲಿ ಒಕ್ಕಲಿಗ ಕೋಮಿಗೆ ಶಿವಕುಮಾರ್ ಅವರೇ ಪ್ರಬಲ ನಾಯಕ. ಪಕ್ಷವು ಜಯಭೇರಿ ಬಾರಿಸುತ್ತಿದ್ದಂತೆಯೇ ಅವರು ಸಿಎಂ ಹುದ್ದೆ ಬಯಸಿದ್ದರು. ಈಗ ಅವರಿಗೆ ಸಂಪುಟದ ಕದವೂ ಮುಚ್ಚಿದೆ.
ಬೆಂಬಲಿಗರ ಬ್ಯಾಟಿಂಗ್: ರಾಮನಗರ ಜಿಲ್ಲಾ ಕಾಂಗ್ರೆಸ್ ಸಹಿತ ಎಲ್ಲ ಘಟಕಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ಈಗಾಗಲೇ ರಾಜಿನಾಮೆ ಸಲ್ಲಿಸಿದ್ದಾರೆ. ಶಿವಕುಮಾರ್ ಪರ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳಾದ ರಾಮನಗರದ ಮರಿದೇವರು, ಮಾಗಡಿಯ ಎ.ಮಂಜುನಾಥ್ ಸಹಿತ ಎಲ್ಲ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ರಾಜಿನಾಮೆ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಅವರಿಗೆ ಸಲ್ಲಿಸಿದ್ದಾರೆ.
ರಾಮನಗರದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆಯಲ್ಲಿ ತೆರಳಲು ನಿರ್ಧರಿಸಿರುವ ಕಾಂಗ್ರೆಸಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟಿಸಿ, ಸಾಮೂಹಿಕ ರಾಜಿನಾಮೆಯನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಲು ತೀರ್ಮಾನ ಕೈಗೊಂಡಿದ್ದಾರೆ.
ಮೆಟ್ಟಿನಿಂತ ಡಿಕೆಶಿ: ಒಕ್ಕಲಿಗರ ಭದ್ರಕೋಟೆಯಾದ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಪ್ರಾಬಲ್ಯವನ್ನು ಮೆಟ್ಟಿ ನಿಂತು ಶಿವಕುಮಾರ್ ಹೋರಾಟ ನಡೆಸಿಕೊಂಡು ಬಂದವರು. ಕಳಂಕದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಪರಿಗಣಿಸಲ್ಪಡದೆ ಪರಿತಪಿಸುತ್ತಿದ್ದಾರೆ.
ಸತತ 6ನೇ ಬಾರಿ ವಿಧಾನಸಭೆಗೆ ಆಯ್ಕೆಯಾದ ಅವರು ಕಡೇ ಪಕ್ಷ ಉಪ ಮುಖ್ಯಮಂತ್ರಿ ಇಲ್ಲವೇ ಆಯಕಟ್ಟಿನ ಖಾತೆಯ ಸಚಿವ ಸ್ಥಾನ ನಿರೀಕ್ಷಿಸಿದ್ದರು. ಗಣಿ ಹಗರಣದ ಆರೋಪದಿಂದ ಅವರ ಕನಸು ಭಗ್ನವಾಗಿದೆ. ಇದರಿಂದ ಈ ಭಾಗದಲ್ಲಿ ಪಕ್ಷಕ್ಕೆ ಬಲವಾದ ಪೆಟ್ಟು ಬೀಳುವ ಸಂಭವವಿದೆ.
ತವರಿನಲ್ಲಿ ಹಿಡತ: ರಾಮನಗರ ಜಿಲ್ಲಾ ಕಾಂಗ್ರೆಸ್ನಲ್ಲಿ ಶಿವಕುಮಾರ್ ಪ್ರಶ್ನಾತೀತ ನಾಯಕ. ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಘಟಕಗಳು ಸ್ವತಃ ಅವರ ಹಿಡಿತದಲ್ಲಿವೆ. ಇದರಿಂದ ಸಹಜವಾಗಿಯೇ ಪಕ್ಷ ಸಂಘಟನೆ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವುದು ಖಚಿತ. ಹೇಳಿ ಕೇಳಿ ಈ ಜಿಲ್ಲೆಯಲ್ಲಿ ಜೆಡಿಎಸ್ ಅಬ್ಬರ ಜೋರು. ಇಂತಹ ಕಡೆ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ, ಬೆಳೆಸಬಹುದಾದ ನಾಯಕ ಶಿವಕುಮಾರ್ ಎನ್ನುವುದು ನಿರ್ವಿವಾದ ಸಂಗತಿ. ಅವರಿಗೆ ಸಚಿವ ಸ್ಥಾನ ಇಲ್ಲದಿರುವುದು ಜಿಲ್ಲೆಯ ಕಾಂಗ್ರೆಸ್ ವಲಯವನ್ನು ಕಂಗಾಲಾಗಿಸಿದೆ.
ಅಡ್ಡ ಪರಿಣಾಮ ಸಂಭವ: ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ರಾಜಿನಾಮೆಯಿಂದ ಬೆಂಗಳೂರು ಗ್ರಾಮಾಂತರ ಹಾಗೂ ಚಲುವರಾಯಸ್ವಾಮಿ ರಾಜಿನಾಮೆಯಿಂದ ಮಂಡ್ಯ ಕ್ಷೇತ್ರಗಳಿಗೆ ಮರು ಚುನಾವಣೆ ಸಾಧ್ಯತೆ ಇದೆ. ಹಾಗೊಮ್ಮೆ ನಡೆಯದಿದ್ದರೆ ವರ್ಷದೊಳಗೆ ಸಾರ್ವತ್ರಿಕ ಚುನಾವಣೆ ಎದುರಾಗಬಹುದು.
ಖಾಲಿ ಇರುವ ಸ್ಥಾನಗಳಿಗಾದರೂ ಶಿವಕುಮಾರ್ ಅವರನ್ನು ಪರಿಗಣಿಸಲ್ಪಡದಿದ್ದರೆ ಖಂಡಿತವಾಗಿಯೂ ಉಭಯ ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಸ್ವತಃ ಶಿವಕುಮಾರ್ ಹಾಗೂ ಬೆಂಬಲಿಗರಲ್ಲಿ ಪಕ್ಷದ ಬಗ್ಗೆ ನಿರಾಸಕ್ತಿ ಮೂಡಲಿದ್ದು, ಜೆಡಿಎಸ್ಗೆ ವರದಾನವಾಗಲಿದೆ.
ಜೆಡಿಎಸ್ ಅನುಕಂಪ: ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಲಭಿಸದ ಬಗ್ಗೆ ಪ್ರತಿಪಕ್ಷ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಹಿತ ಸಾಕಷ್ಟು ನಾಯಕರು ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭದ ಚಿಂತನೆ ಮತ್ತು ಚಿತಾವಣೆ ಇದ್ದೇ ಇದೆ.
ಮರು ಚುನಾವಣೆ ನಡೆಯುತ್ತಿರುವ ಪಿರಿಯಾಪಟ್ಟಣದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳನ್ನು ಸಾರಾಸಗಟು ಸೆಳೆಯುವ ನಿಟ್ಟಿನಲ್ಲಿ ಸ್ವತಃ ಕುಮಾರಸ್ವಾಮಿ ಕೂಡ ಶಿವಕುಮಾರ್ ಅವರಿಗೆ ಮಂತ್ರಿ ಸ್ಥಾನ ನಿರಾಕರಣೆ ಬಗ್ಗೆ ಅನುಕಂಪದ ಮಾತುಗಳನ್ನಾಡಿದ್ದಾರೆ.
ಇಷ್ಟು ಸಾಲದೆನ್ನುವಂತೆ ರಾಮನಗರ ಜಿಲ್ಲೆಯಲ್ಲೂ ಜೆಡಿಎಸ್ ನಾಯಕರು ಶಿವಕುಮಾರ್ಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಜಾತಿ ಕಾರಣದ ಅನುಕಂಪದ ಜತೆಗೆ ರಾಜಕೀಯ ಲಾಭದ ಲೆಕ್ಕಾಚಾರ ಅಡಗಿರುವುದು ಸ್ಪಷ್ಟವಾಗಿದೆ.
ಸಿಪಿವೈ ಪಡೆ ಹರ್ಷ: ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಲು ಶಿವಕುಮಾರ್ ಕಾರಣವೆನ್ನುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಸಚಿವ ಸ್ಥಾನ ವಂಚಿತರಾಗಿದ್ದಕ್ಕೆ ಯೋಗೇಶ್ವರ್ ಬೆಂಬಲಿಗರಿಗೆ ಹಾಲು ಕುಡಿದಂತಾಗಿದೆ.
ಶಿವಕುಮಾರ್ ಅವರಂತೆಯೇ ಯೋಗೇಶ್ವರ್ ಕೂಡ ಸ್ವಂತ ಬಲದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಈ ಮಾಜಿ ಸಚಿವದ್ವಯರು ಈಗ ಗೂಟದ ಕಾರಿಲ್ಲದೆ ಸಾಮಾನ್ಯ ಶಾಸಕರಾಗಿ ವಿಧಾನಸಭೆಯಲ್ಲಿ ಕೂರುವಂತಾಗಿದೆ.
ಪಕ್ಷ ನಿರ್ಲಿಪ್ತವಾಗಲಿದೆ
ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದಲ್ಲಿ ರಾಮನಗರ ಜಿಲ್ಲಾದ್ಯಂತ ಕಾಂಗ್ರೆಸ್ ನಿರ್ಲಿಪ್ತವಾಗಲಿದೆ. ಈ ಪರಿಣಾಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಪಕ್ಷಕ್ಕೆ ಬಲವಾದ ಪೆಟ್ಟು ಬೀಳುವುದು ನಿಶ್ಚಿತ.
- ಮರಿದೇವರು,ರಾಮನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

