ಬೆಂಗಳೂರು ಗ್ರಾಮಾಂತರ

ಮಾನವೀಯ ಮೌಲ್ಯ ಅಧಃಪತನದಿಂದ ಅಶಾಂತಿ

Published On :

ಕ.ಪ್ರ.ವಾರ್ತ್ಣೆ ನೆಲಮಂಗಲ , ಮೇ 20
ಮಾನವೀಯ ಮೌಲ್ಯಗಳು ಅಧಃಪತನವಾಗುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ತಲೆದೋರಿದೆ ಎಂದು ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ತಾಲೂಕಿನ ಸೋಂಪುರ ಹೋಬಳಿಯ ಇಮಚೇನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಆಂಜನೇಯಸ್ವಾಮಿ ಮತ್ತು ದುರ್ಗಾಪರಮೇಶ್ವರಿ ದೇವಾಲಯಗಳ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಧರ್ಮದ ತಳಹದಿಯಲ್ಲಿ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಧರ್ಮವನ್ನು ಪೂಜಿಸಿ ಗೌರವ ನೀಡಿ ನಡೆಯುವುದೇ ಮಾನವೀಯ ನೆಲೆಗಟ್ಟಾಗುತ್ತದೆ. ಪ್ರತಿ ಧರ್ಮೀಯರು ತಮ್ಮ ಮಕ್ಕಳಿಗೆ ನಿಜವಾದ ಧರ್ಮವನ್ನು ಬೋಧಿಸಿ ನಡೆ ನುಡಿಯಲ್ಲಿ ಒಂದಾಗುವಂತೆ ಮಾಡಲು ಶ್ರಮ ವಹಿಸುವುದು ಇಂದು ಅನಿವಾರ್ಯವಾಗಿದೆ ಎಂದರು.
ಮಕ್ಕಳಲ್ಲಿ ತಂದೆ, ತಾಯಿಯ ಬಗ್ಗೆ ಗೌರವವಿಲ್ಲ. ಅಕ್ಕ, ತಂಗಿಯರಲ್ಲಿ ಪ್ರೀತಿ- ವಿಶ್ವಾಸವಿಲ್ಲ. ಪವಿತ್ರ ಸಂಬಂಧಗಳು ವ್ಯವಹಾರಿಕವಾಗುತ್ತಿವೆ. ಇದರಿಂದ ಸಂಬಂಧಗಳಿಗೆ ಬೆಲೆಯೇ ಇಲ್ಲದಾಗುತ್ತಿದೆ. ಸಮಾಜದಲ್ಲಿ ಮತ್ತಷ್ಟು ಅಶಾಂತಿ ಉಂಟಾಗಿ ನೆಮ್ಮದಿಯನ್ನೆ ಕಳೆದುಕೊಳ್ಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸ್ಕಾರವಂತರನ್ನಾಗಿಸಿ: ತಂದೆ- ತಾಯಿ, ಗುರು- ಹಿರಿಯರು ಮತ್ತು ದೇವರ ಬಗ್ಗೆ ಯಾವ ಮನುಷ್ಯರಲ್ಲಿ ಗೌರವ ಭಕ್ತಿ ಇಲ್ಲದಂತಾಗುತ್ತದೆಯೋ ಅವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲದಂತಾಗುತ್ತದೆ. ಅದಕ್ಕಾಗಿ ಮಕ್ಕಳಲ್ಲಿ ಹಿರಿಯರು ತಂದೆ, ತಾಯಿಯ ಬಗ್ಗೆ ಇರುವ ಸಂಬಂಧವನ್ನು ತಿಳಿಹೇಳಿ, ತಿದ್ದಿ ತೀಡಿ ಸಂಸ್ಕಾರವಂತರನ್ನಾಗಿಸಿ ಎಂದು ಕರೆ ನೀಡಿದರು.
ಮಕ್ಕಳನ್ನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂದು ಅವರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಸರಿಯಲ್ಲ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೂ ಸರಿಯೇ ಆತನನ್ನು ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವಂತಹ ಗುಣವನ್ನು ಬೆಳೆಸಿ. ಮುಂದೆ ತಮ್ಮ ವೃದ್ಧಾಪ್ಯದಲ್ಲಿ ನಿಮ್ಮ ನೆರವಿಗೆ ಬರುತ್ತದೆ.
 ಇಲ್ಲದೆ ಇದ್ದರೆ ದೊಡ್ಡ ಉದ್ಯೋಗದಲ್ಲಿದ್ದರೂ ನಿಮ್ಮನ್ನು ನಿರ್ಲಕ್ಷಿಸುವ ಮಕ್ಕಳಾದರೆ ಏನು ಫಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ವಿದ್ಯಾಭಿನವ ಶಂಕರಭಾರತಿ ಮಹಾಸ್ವಾಮಿಗಳು ಮಾತನಾಡುತ್ತಾ, ನಮ್ಮ ಸಂಸ್ಕೃತಿಯ ಧ್ಯೋತಕವಾದ ಗೋಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಅದನ್ನು ತಡೆಗಟ್ಟಲು ಎಲ್ಲರೂ ಪಣ ತೊಡಬೇಕು ಎಂದರು.
ಇದೇ ವೇಳೆ ಸಿದ್ದಗಂಗಾ ಮಠಾಧೀಶರಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಗ್ರಾಮದ ಭಕ್ತ ವೃಂದ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಿ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸುವ ಮೂಲಕ ಗೌರವಿಸಿದರು.
ಕಾರ್ಯಕ್ರಮದಲ್ಲಿ ವನಕಲ್ಲು ಮಲ್ಲೇಶ್ವರ ಕ್ಷೇತ್ರದ ಬಸವರಮಾನಂದ ಸ್ವಾಮೀಜಿ, ಬಂಡೇಮಠದ ಬಸವಲಿಂಗ ಸ್ವಾಮೀಜಿ ಆರ್ಶೀವಚನ ನೀಡಿದರು.
 ಮಾಜಿ ಶಾಸಕ ಎಂ.ವಿ.ನಾಗರಾಜು, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಜಿ.ಮರಿಸ್ವಾಮಿ ಮಾತನಾಡಿದರು. ಸೋಂಪುರ ಜಿ.ಪಂ.ಸದಸ್ಯೆ ಸುನಂದ ಶಿವಕುಮಾರ್, ನರಸೀಪುರ ಗ್ರಾ.ಪಂನ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.