ಬೆಂಗಳೂರು ಗ್ರಾಮಾಂತರ

ಪ್ರಭಾವಿ ನಾಯಕ ಡಿಕೆಶಿಗೆ ಸಚಿವ ಸ್ಥಾನ ನಿರಾಕರಣೆಗೆ ಆಕ್ರೋಶ

Published On :

ಕ.ಪ್ರ.ವಾರ್ತೆ ರಾಮನಗರ ಮೇ 21
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಜನಾಂಗದ ಪ್ರಭಾವಿ ನಾಯಕರಾಗಿರುವ  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ನಿರಾಕರಣೆ ವಿರುದ್ಧ  ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಆರ್. ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಿಸಿರುವ ಶಿವಕುಮಾರ್ ಅವರಿಗೆ ಕಳಂಕದ ಆಪಾದನೆ ಹೊರಸಿ ಸಚಿವ ಸ್ಥಾನ ತಪ್ಪಿರುವುದು ಖಂಡನೀಯ ಎಂದಿದ್ದಾರೆ. ಶಿವಕುಮಾರ್  ಅವರು ಒಂದು ಜಿಲ್ಲೆಗಷ್ಟೇ ಸೀಮಿತರಾದವರಲ್ಲ. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಅವರೂ ಒಬ್ಬರು.  ಅವರಿಗೆ ಸಚಿವ ಸ್ಥಾನ ತಪ್ಪಿರುವುದು ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಎಸಗಿರುವ ದ್ರೋಹವಾಗಿದೆ ಎಂದು ವೆಂಕಟೇಶ್ ಕಿಡಿ ಕಾರಿದ್ದಾರೆ.
ಒಂದೊಮ್ಮೆ ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡದದಿದ್ದಲ್ಲಿ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಭಾಗದಲ್ಲಿ ದೊಡ್ಡ ಪೆಟ್ಟು ಬೀಳಲಿದೆ.  ಈ ಬಗ್ಗೆ ಕಾಂಗ್ರೆಸ್ ವರಿಷ್ಠರು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವ್ಯತಿರಿಕ್ತ ಪರಿಣಾಮ:  ರಾಮನಗರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಏಕೈಕ ಪ್ರತಿನಿಧಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡದೇ ಹೋದಲ್ಲಿ ಜಿಲ್ಲೆಯ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವ ಅವರಿಗೆ ಸಚಿವ ಸ್ಥಾನದ ಜತೆಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕು ಎಂದು ಅವರು ಹೇಳಿದರು.  
ಕರ್ನಾಟಕಕ್ಕೆ ಮಾರಕ: ಕಾವೇರಿ ಐತೀರ್ಪು ರಾಜ್ಯಕ್ಕೆ ಮಾರಕವಾಗಿದೆ. ಇದೀಗ ರಚಿಸಿರುವ ನಿರ್ವಹಣಾ ಮಂಡಳಿಯಿಂದ ಮತ್ತೊಂದು ಆಘಾತ ಉಂಟಾಗಿದೆ. ಈ ಬಗ್ಗೆ ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ಗಮನ ಹರಿಸಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ವೆಂಕಟೇಶ್ ಒತ್ತಾಯಿಸಿದ್ದಾರೆ. ಐತೀರ್ಪಿನ ಪುನರ್ ಪರಿಶೀಲನೆಯ ಜತೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಮೂಲಕ ಕಾವೇರಿ ಕಣಿವೆ ರೈತರು, ಕುಡಿಯುವ ನೀರು ಆಶ್ರಿತ ಪ್ರದೇಶಗಳ ಹಿತ ಕಾಯಬೇಕು ಎಂದು ಅವರು ಆಗ್ರಹಿಸಿದರು. ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹ ಧನವನ್ನು ರು.4ಕ್ಕೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ, ಪಶು ಆಹಾರ ಧಾರಣೆಯನ್ನು ಇಳಿಸಬೇಕು. ರೇಷ್ಮೆ ಹುಳು ಸಾಕಾಣಿಕೆದಾರ ರೈತರಿಗೆ ಸಾಕಾಣಿಕಾ ಘಟಕ ಸ್ಥಾಪನೆ ಸೇರಿದಂತೆ ಇತರೆ ಸವಲತ್ತುಗಳಿಗೆ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಶೇಕಡ 100ಕ್ಕೆ ಹೆಚ್ಚಳ ಮಾಡಬೇಕು ಎಂದು ವೆಂಕಟೇಶ್ ಸಲಹೆ ನೀಡಿದರು.  
ಚೀನಾ ದೇಶದಲ್ಲಿರುವಂತೆ ಹೆಚ್ಚು ಇಳುವರಿ ನೀಡುವ ರೇಷ್ಮೆ ಬಿತ್ತನೆ ಬೀಜದ ಉತ್ಪಾದನೆ ಮಾಡಬೇಕು. ಆಮದು ಸುಂಕವನ್ನು ಮತ್ತಷ್ಟು ಹೆಚ್ಚಿಸಬೇಕು. ಉತ್ಪಾದನಾ ವೆಚ್ಚ ಆಧರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಗೋಷ್ಠಿಯಲ್ಲಿ ಚೂಡಲಿಂಗೇಶ್ವರ, ವಾಸು, ಚಿಕ್ಕಬೈರೇಗೌಡ, ಕಾಡೇಗೌಡ, ನಾಗರಾಜು, ಗೋಪಾಲಗೌಡ  ಹಾಜರಿದ್ದರು.

ಡಿಕೆಶಿ ಮೂಲೆಗುಂಪು: ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ
ಕನಕಪುರ:
ರಾಜಕೀಯ ಮುತ್ಸದ್ದಿಗಳೆಂದೇ ಹೆಸರಾದ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಹಾಗೂ ಅತ್ಯುತ್ತಮ ಸಂಘಟಕ, ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಮೂಲೆಗುಂಪು ಮಾಡಿರುವುದು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಗಂಭೀರ ಪರಿಣಾಮ ಬೀರಲಿದೆ. ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಎನ್.ಅನಿಲ್ ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ದುಡಿದಿದ್ದು, ಕೇಂದ್ರ ಸಚಿವರಾಗಿ ಕೃಷ್ಣ ಅವರು ದಕ್ಷ ಆಡಳಿತವನ್ನೂ ನೀಡಿದ್ದಾರೆ. ಶಾಸಕ ಡಿಕೆಶಿಯವರ ಸಂಘಟನಾ ಚತುರತೆಯನ್ನು ಕೇಂದ್ರದ ಹಿರಿಯ ಮುಖಂಡರು ಅರಿತಿದ್ದಾರೆ. ಆದರೂ ಯಾವುದೇ ಸಾಕ್ಷಿ ಪುರಾವೆಗಳಿಲ್ಲದೆ, ಆರೋಪಗಳ ಆಧಾರದ ಮೇಲೆ ಕಳಂಕಿತರ ಪಟ್ಟಿ ಧರಿಸಿ ಮೂಲ ಕಾಂಗ್ರೆಸ್ಸಿಗರನ್ನು ದೂರ ಮಾಡಿರುವುದು ಪಕ್ಷದ ಹಿತದೃಷ್ಟಿಯಿಂದ ಸರ್ವತಾ ಸಲ್ಲದು ಎಂದು ಹೇಳಿದ ಅನಿಲ್ ಕುಮಾರ್, ಕೇಂದ್ರದ ಹೈಕಮ್ಯಾಂಡ್, ಅಧಿನಾಯಕಿ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸೂಕ್ತ ತೀರ್ಮಾನ ಕೈಗೊಂಡು ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಕನಕಪುರ ತಾಲೂಕು ಹಾಗೂ ರಾಮನಗರ ಜಿಲ್ಲೆಯಾದ್ಯಂತ ತೀವ್ರಗೊಳ್ಳುತ್ತಿರುವ ಪ್ರತಿಭಟನೆಗಳು ಮುಂದುವರೆಯದಂತೆ ಎಚ್ಚರ ವಹಿಸಬೇಕು ಎಂದು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.