ಅನುದಾನಕ್ಕೆ ವೆಚ್ಚ ಮಿತಿ ಆಯವ್ಯಯ ಮಂಡನೆ
ಕ.ಪ್ರ.ವಾರ್ತೆ , ರಾಮನಗರ , ಮೇ 23
ಜಿಲ್ಲಾ ಪಂಚಾಯಿತಿಯ 2013-14ನೇ ಸಾಲಿಗೆ ಯೋಜನೆ, ಯೋಜನೇತರ ಲೆಕ್ಕಶೀರ್ಷಿಕೆಯಡಿ ಮಂಜೂರಾಗಿರುವ ಒಟ್ಟಾರೆ ರು.114.82 ಕೋಟಿ ಮೊತ್ತದ ಅನುದಾನಕ್ಕೆ ವೆಚ್ಚ ಮಿತಿಯ ಆಯವ್ಯಯವನ್ನು ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಅವರು ಗುರುವಾರ ನಡೆದ ಆರ್ಥಿಕ ಸ್ಥಾಯಿ ಸಮಿತಿಯಲ್ಲಿ ಮಂಡಿಸಿದರು.
ಜಿ.ಪಂ. ಸಭಾಂಗಣದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಇಲಾಖಾವಾರು ನಿಗದಿಪಡಿಸಿರುವ ಅನುದಾನದ ಮಿತಿಯನ್ನು ಪ್ರಕಟಿಸಿದರು. ಒಟ್ಟಾರೆ ಮೊತ್ತದ ಪೈಕಿ ಯೋಜನೆ ಲೆಕ್ಕಶೀರ್ಷಿಕೆಗೆ ರು.46.73 ಕೋಟಿ ಹಾಗೂ ಯೋಜನೇತರ ಲೆಕ್ಕಶೀರ್ಷಿಕೆಗೆ ರು.68.08 ಕೋಟಿ ನಿಗದಿಪಡಿಸಲಾಗಿದೆ.
ಈ ಜತೆಗೆ ಜಿಲ್ಲೆಯ 4 ತಾ.ಪಂ.ಗಳಿಗೆ ಯೋಜನಾ ಲೆಕ್ಕಶೀರ್ಷಿಕೆಯಲ್ಲಿ 46.06 ಕೋಟಿ ಹಾಗೂ ಯೋಜನೇತರ ಲೆಕ್ಕಶೀರ್ಷಿಕೆಯಲ್ಲಿ ರು.164 ಕೋಟಿ ಸಹಿತ ಒಟ್ಟಾರೆ ರು.210 ಕೋಟಿ ಅನುದಾನ ಬಿಡುಗಡೆ ಆಗಿದೆ. ಗ್ರಾಮ ಪಂಚಾಯಿತಿಗಳಿಗೆ ಯೋಜನೆಯಡಿ ರು.105.98 ಕೋಟಿ, ಯೋಜನೇತರದಲ್ಲಿ ರು.232 ಕೋಟಿ ಸೇರಿದಂತೆ ಒಟ್ಟು ರು.338.91 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರದಿಂದ ಯೋಜನೆ, ಯೋಜನೇತರ ಲೆಕ್ಕಶೀರ್ಷಿಕೆಯಡಿ ಇಲಾಖೆಗಳಿಗೆ ನಿಗದಿಯಾಗಿರುವ ಅನುದಾನದ ವಿವರವನ್ನು ಸಭೆಗೆ ಮಂಡಿಸಲಾಯಿತು. ನಿಗದಿಯಾದ ಅನುದಾನದಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ದೊರೆತಿದೆ. ಇದೂ ಸೇರಿದಂತೆ 32 ಇಲಾಖೆಗಳಿಗೆ ಅನುದಾನ ಹಂಚಿಕೆಯಾಗಿದೆ.
ಉಳಿಸಿದ್ದಕ್ಕೆ ತರಾಟೆ: 2012-13ನೇ ಸಾಲಿನಲ್ಲಿ ನಿಗದಿಯಾಗಿದ್ದ ಅನುದಾನದ ಪೈಕಿ ಗಣನೀಯ ಪ್ರಮಾಣದಲ್ಲಿ ಹಣ ಉಳಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮುದ್ದುರಾಜ್ ಯಾದವ್, ಸದಸ್ಯರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವೆಂಕಟೇಶ್ ಅವರ ಕೆಂಗಣ್ಣಿಗೆ ಗುರಿಯಾಗಿ, ತರಾಟೆಗೆ ಒಳಗಾದರು.
ಸಾಮಾನ್ಯ ಶಿಕ್ಷಣದ ಪೈಕಿ ಅಕ್ಷರ ದಾಸೋಹ ವಿಭಾಗದಲ್ಲಿ ರು.17 ಲಕ್ಷ ಉಳಿತಾಯ ಆಗಿದ್ದಕ್ಕೆ ಸುದೀರ್ಘ ವಿಚಾರಣೆ ನಡೆಯಿತು. ಬಹುತೇಕ ಇಲಾಖೆಗಳಲ್ಲಿ ಉಳಿಕೆಯಾಗಿರುವ ಮೊತ್ತವನ್ನು ಸಿಬ್ಬಂದಿ ವೇತನದ ಪಾಲು ಎಂದು ಹೇಳುವ ಮೂಲಕ ಹಲವು ಅಧಿಕಾರಿಗಳು ಅಧ್ಯಕ್ಷ ಮತ್ತು ಸಿಇಒ ವಿಚಾರಣೆಯಿಂದ ನುಣುಚಿಕೊಂಡರು.
ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯಲ್ಲಿ ಕಷ್ಟ ಪರಿಸ್ಥಿತಿಯಲ್ಲಿರುವ ಕ್ರೀಡಾಪಟುಗಳು ಮತ್ತು ಕುಸ್ತಿಪಟುಗಳಿಗೆ ಆರ್ಥಿಕ ನೆರವಿನ ನಿಧಿಯಲ್ಲಿ ರು.67 ಸಾವಿರ ಉಳಿದಿದೆ. ಇದಕ್ಕೆ ಅರ್ಹರಿಂದ ಅರ್ಜಿ ಬಂದಿಲ್ಲವೆನ್ನುವ ಉತ್ತರ ಕೇಳಿ ಬಂದಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಳಿತಾಯಕ್ಕೂ ವಿವರಣೆ ಪಡೆಯಲಾಯಿತು.
ಉಳಿಸಿದ ಇಲಾಖೆಗಳು: ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಬಾಬ್ತಿನಲ್ಲಿ ರು.5.19 ಲಕ್ಷ, ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರ, ಇತರೆ ರಿಯಾಯಿತಿ, ಶ್ರೇಷ್ಠತೆ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವುದರಲ್ಲಿ ರು.3.50 ಲಕ್ಷವನ್ನು ಉಳಿಸಿಕೊಂಡಿರುವ ವಿವರ ಬಹಿರಂಗ ವಾಯಿತು.
ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲೂ ಹಣ ಉಳಿದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ರು.33 ಲಕ್ಷದಷ್ಟು ಉಳಿದುಕೊಂಡಿದೆ. ಹೊಲಿಗೆ ಯಂತ್ರಗಳನ್ನು ಬಾಡಿಗೆಗೆ ಪಡೆದು, ತರಬೇತಿ ನೀಡಿರುವ ಬಗ್ಗೆ ಅಪಸ್ವರ ಕೇಳಿ ಬಂದಿತು.
ತೋಟಗಾರಿಕೆಯಲ್ಲಿ ಅಲ್ಪ ಪ್ರಮಾಣದ ಅನುದಾನ ಉಳಿದಿದ್ದರೆ, ಶಿಶು ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ಅನುದಾನದ ಉಳಿಕೆ ಹುಬ್ಬೇರುವಂತೆ ಮಾಡಿತು.
ಪಶು ಸಂಗೋಪನೆ, ಪಂಚಾಯತ್ ರಾಜ್ ಸಂಸ್ಥೆಗಳ ಅನುದಾನ, ರೇಷ್ಮೆ, ರಸ್ತೆ ಮತ್ತು ಸೇತುವೆ ನಿರ್ಮಾಣ, ಅಲ್ಪ ಸಂಖ್ಯಾತರ ಇಲಾಖೆಯಲ್ಲೂ ಭಾರಿ ಮೊತ್ತದ ಉಳಿಕೆಯಾಗಿರುವುದು ಕಂಡು ಬಂತು. ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ, ಸ್ಥಾಯಿ ಸಮಿತಿ ಸದಸ್ಯರಾದ ಎಂ.ಕೆ.ಧನಂಜಯ, ಕಲ್ಪನಾ ಮಲ್ಲಿಕಾರ್ಜುನೇಗೌಡ, ಬಿ.ವಿ.ಹಂಸಕುಮಾರಿ, ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಸಹಿತಿ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ತನಿಖೆಗೆ ಆದೇಶ
ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಕಳಪೆ ಬೇಳೆ ಸರಬರಾಜು ಮಾಡಿದ್ದ ಗುತ್ತಿಗೆದಾರರಿಗೆ ಬಿಲ್ ಪಾವತಿ ಸಂಬಂಧ ತನಿಖೆಗೆ ಜಿ.ಪಂ. ಅಧ್ಯಕ್ಷ ಕೆ.ಮುದ್ದರಾಜ್ ಯಾದವ್ ಆದೇಶಿಸಿದ್ದಾರೆ.
ಆರ್ಥಿಕ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯ ಎಂ.ಕೆ.ಧನಂಜಯ ಅವರ ಗಮನ ಸೆಳೆಯುವ ಪ್ರಶ್ನೆ ಮೇರೆಗೆ ನಡೆದ ಹಗರಣದ ಚರ್ಚೆಯ ಬಳಿಕ ಮುದ್ದುರಾಜ್ ಯಾದವ್ ಅವರು ಪ್ರಕರಣವನ್ನು ತನಿಖೆಗೆ ಒಪ್ಪಿಸಿದ್ದು, ಶೀಘ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
2012ರ ಡಿಸೆಂಬರ್ನಲ್ಲಿ ಜಿಲ್ಲೆಯ ಎಲ್ಲ 4 ತಾಲೂಕುಗಳಿಗೆ ಕಳಪೆ ಬೇಳೆ ಸರಬರಾಜಾಗಿತ್ತು. ಈ ಕುರಿತು 3ನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸಿದ್ದು, ಅದರಲ್ಲಿ ಬೇಳೆ ಕಳಪೆ ಎನ್ನುವ ವರದಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಬಿಲ್ ತಡೆ ಹಿಡಿಯುವಂತೆ ಆಗಿನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ ಆದೇಶಿಸಿದ್ದರು.
ಗುರುವಾರ ನಡೆದ ಆರ್ಥಿಕ ಸ್ಥಾಯಿ ಸಮಿತಿ ಸಭೆಯಲ್ಲಿ ಅಕ್ಷರ ದಾಸೋಹ ಯೋಜನೆಯ ವೆಚ್ಚದ ವಿವರ ನೀಡುವಾಗ ಅಧಿಕಾರಿ ಸೂರ್ಯಪ್ರಕಾಶ್ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ ಅಂಶ ಬಿಚ್ಚಿಟ್ಟರು. ಈ ಹಂತದಲ್ಲಿ ಧನಂಜಯ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಆದೇಶ ಉಲ್ಲಂಘಿಸಿದ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಮಕ್ಕಳು ತಿನ್ನುವ ಆಹಾರದಲ್ಲಿ ವಿಷ ಬೆರೆಸಿದವರು ಎಂದೂ ಉದ್ಧಾರವಾಗುವುದಿಲ್ಲ. ಅಂತಹ ಪಾಪದ ಕೆಲಸಕ್ಕೆ ಕೈಜೋಡಿಸಿರುವ ನಿಮಗೂ ಒಳ್ಳೆಯದಾಗದು ಎಂದು ಧನಂಜಯ ಏರುಧ್ವನಿಯಲ್ಲಿ ಗುಡುಗಿದರು. ಇತರೆ ಸದಸ್ಯರು, ಸಿಇಒ ಮತ್ತು ಅಧ್ಯಕ್ಷರು ಕೂಡ ಅಧಿಕಾರಿಯ ಬೆವರಿಳಿಸಿದರು.
ಪ್ರಕರಣವನ್ನು ತನಿಖೆಗೆ ಒಪ್ಪಿಸಿದ ಅಧ್ಯಕ್ಷ ಮುದ್ದುರಾಜ್ ಯಾದವ್, ಇನ್ನು ಮುಂದೆ ಮಾಹೆಯಾನ ಸರಬರಾಜು ಮಾಡಿಕೊಳ್ಳುವ ಆಹಾರ ಪದಾರ್ಥವನ್ನು 3ನೇ ವ್ಯಕ್ತಿ ಪರಿಶೀಲನೆಗೆ ಒಳಪಡಿಸಬೇಕು. ಪ್ರತಿ ಲೋಡ್ ಸ್ಯಾಂಪಲ್ ಅನ್ನು ಜಿ.ಪಂ. ಅಧ್ಯಕ್ಷ, ಸಿಇಒ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ತೋರಿಸಬೇಕೆಂದು ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

