ಬೆಂಗಳೂರು ಗ್ರಾಮಾಂತರ

ರೇಷ್ಮೆ ನಾಡಲ್ಲಿ ಬರ ಭೀಕರ; ನೀರಿಗೆ ಹಾಹಾಕಾರ

Published On :

ರಾಮನಗರ: ಕಳೆದ ಒಂದೂವರೆ ದಶಕದಿಂದ ಮಳೆ ಪ್ರಮಾಣ ಇಳಿಮುಖದ ಜತೆಗೆ ಸತತ ಎರಡು ವರ್ಷ ಕಾಡಿದ ಭೀಕರ ಬರದಿಂದ ರೇಷ್ಮೆ ನಾಡಿನ ಜನತೆ ಕಂಗೆಟ್ಟಿದ್ದಾರೆ. ಜಿಲ್ಲೆಯ ಅಣೆಕಟ್ಟೆ, ಕೆರೆ- ಕಟ್ಟೆಗಳೆಲ್ಲಾ ಬರಿದಾಗಿವೆ. ಕೊಳವೆ ಬಾವಿಗಳು ವಿಫಲಗೊಂಡಿವೆ. ಜಲಕ್ಷಾಮದ ಪರಿಣಾಮ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗಿದೆ.
ಇಷ್ಟಲ್ಲದೆ, ನೆರೆಯ ಮಂಡ್ಯ ಜಿಲ್ಲೆಯಲ್ಲಿರುವ ಕನ್ನಂಬಾಡಿ ಕಟ್ಟೆಯಲ್ಲಿ ನೀರಿನ ಮಟ್ಟ ತಳ ತಲುಪಿದೆ. ಕಾವೇರಿ ಆಶ್ರಿತ ಕನಕಪುರ ಪಟ್ಟಣ, ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳ ಕುಡಿಯುವ ನೀರಿಗೂ ಸಂಚಕಾರ ಬಂದೊದಗುವ ಸ್ಥಿತಿ ಎದುರಾಗಿದೆ. ಹಿಂದೆಂದೂ ಕಾಣದಂತಹ ಸಂಕಷ್ಟ ಈಗ ತಲೆದೋರಿದೆ.
ಬಯಲುಸೀಮೆಯ ರಾಮನಗರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ. ಈ ಜಿಲ್ಲೆಯ ಗಡಿಯಂಚಿನಲ್ಲೇ ಕಾವೇರಿ ನದಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಕಡೇ ಪಕ್ಷ ಜಿಲ್ಲೆಗೆ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಯೂ ಆಗಿಲ್ಲ. ಕಾವೇರಿ ಮತ್ತು ಹೇಮಾವತಿಯ ಸೋರಿಕೆ ನೀರು ಸ್ಥಗಿತದಿಂದ ರಾಮನಗರದ ದಾಹ ಹೆಚ್ಚಿದೆ.
ಬತ್ತುತ್ತಿರುವ ಕಾವೇರಿ: ಹಿಂದಿನ ಬಿಜೆಪಿ ಸರ್ಕಾರವು ಕುರ್ಚಿ ಉಳಿಸಿಕೊಳ್ಳಲು ದೂರಾಲೋಚನೆ ಇಲ್ಲದೆ ಕೆಆರ್‌ಎಸ್ ಒಡಲನ್ನೆಲ್ಲಾ ಬಸಿದಿದೆ. ಅತ್ತ ಹಾರಂಗಿ, ಹೇಮಾವತಿಯಿಂದಲೂ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿದೆ. ಇದೀಗ ಮೈಸೂರು, ಬೆಂಗಳೂರು ಮಾತ್ರವಲ್ಲದೆ ಕಾವೇರಿ ನದಿ ನೀರು ಆಶ್ರಿತ ಮಂಡ್ಯ ಮತ್ತು ರಾಮನಗರದ ನಗರ, ಪಟ್ಟಣಗಳು ಸಹ ಪರಿತಪಿಸುವಂತಾಗಿದೆ.
ಬೆಂಗಳೂರಿಗೆ ನೀರು ಹರಿಸುವ ಪೈಪ್‌ಲೈನ್ ಮೂಲಕವೇ ಕನಕಪುರಕ್ಕೆ 3.5 ಎಂಎಲ್‌ಡಿ ನೀರು ಪಾಲು ಪಡೆದುಕೊಳ್ಳಲಾಗುತ್ತಿದೆ. ಮುಂಗಾರು ಒಂದೊಮ್ಮೆ ದುರ್ಬಲಗೊಂಡರೆ ಕಾವೇರಿ ನದಿ ಬತ್ತುವುದು ಖಚಿತ. ಆಗ ಬೆಂಗಳೂರಿನ ಜತೆ ಜತೆಗೆ ಕನಕಪುರದ ಜನತೆಯೂ ಕುಡಿಯುವ ನೀರಿನ ಬವಣೆಗೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಕಪುರಲ್ಲಿರುವ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ.  
ಅವಳಿ ನಗರಗಳಾದ ರಾಮನಗರ ಹಾಗೂ ಚನ್ನಪಟ್ಟಣ, ಮಾರ್ಗ ಮಧ್ಯೆಯ ಕೆಲ ಹಳ್ಳಿಗಳಿಗೆ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿಯಿಂದ ಸುಮಾರು 20 ಎಂಎಲ್‌ಡಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಕೊಡಗು ಜಿಲ್ಲೆ ಸಹಿತ ಕಾವೇರಿ ಕಣಿವೆಯಲ್ಲಿ ಇನ್ನೊಂದು ವಾರದೊಳಗೆ ಮಳೆ ಕಾಲಿಡದಿದ್ದರೆ ಕಾವೇರಿ ಆಶ್ರಿತ ಈ ಪ್ರದೇಶದ ಜನರ ಕಣ್ಣೀರ ಕೋಡಿ ಒಡೆಯುವುದು ನಿಶ್ಚಿತ.
ಪಾತಾಳಕ್ಕೆ ಅಂತರ್ಜಲ: ರಾಜ್ಯದಲ್ಲಿ ಕೋಲಾರದ ಬಳಿಕ ಅಂತರ್ಜಲ ಮಟ್ಟ ಕುಸಿತದ ಸ್ಥಾನ ರಾಮನಗರದ್ದಾಗಿದೆ. ಕಳೆದೊಂದು ವರ್ಷದಿಂದ ಈ ಜಿಲ್ಲೆಯಲ್ಲಿ ಕೊಳವೆಬಾವಿಗಳ ವಿಫಲತೆ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳು ನೀರು ಸಿಗದೆ ವಿಫಲವಾಗುತ್ತಿವೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಒಂದು ವರ್ಷದ ಹಿಂದೆ ಇದ್ದ ಕೊಳವೆ ಬಾವಿಗಳ ಪೈಕಿ ಈ ಬೇಸಿಗೆ ವೇಳೆಗೆ ಶೇ.70ರಷ್ಟು ವಿಫಲಗೊಂಡಿವೆ. ಕೈಪಂಪುಗಳಲ್ಲಿ ಎಷ್ಟು ಒತ್ತಿದರೂ ನೀರು ಬಾರದು. ಮಾಗಡಿ, ರಾಮನಗರ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲದೆ ಗ್ರಾಮೀಣ ಭಾಗದ ಶೇ.25ರಷ್ಟು ಕಡೆ ಟ್ಯಾಂಕರ್ ಮೂಲಕವೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಸಂಕಷ್ಟಕ್ಕೆ ಗುರಿಯಾಗಿರುವ ಜನತೆ ವರುಣನ ಮೊರೆ ಹೋಗಿದ್ದಾರೆ.
ಬೆಂಗಳೂರಿಗೆ ನೀರು ಹರಿಸುವ ಪೈಪ್‌ಲೈನ್ ಮೂಲಕವೇ ಕನಕಪುರಕ್ಕೆ 3.5 ಎಂಎಲ್‌ಡಿ ನೀರು ಪಾಲು ಪಡೆದುಕೊಳ್ಳಲಾಗುತ್ತಿದೆ. ಮುಂಗಾರು ಒಂದೊಮ್ಮೆ ದುರ್ಬಲಗೊಂಡರೆ ಕಾವೇರಿ ನದಿ ಬತ್ತುವುದು ಖಚಿತ. ಆಗ ಬೆಂಗಳೂರಿನ ಜತೆ ಜತೆಗೆ ಕನಕಪುರದ ಜನತೆಯೂ ಕುಡಿಯುವ ನೀರಿನ ಬವಣೆಗೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಕಪುರಲ್ಲಿರುವ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ.
ಬರಿದಾದ ಅಣೆಕಟ್ಟೆಗಳು
ಸುಮಾರು 1 ಟಿಎಂಸಿಯಷ್ಟು ನೀರು ಶೇಖರಣಾ ಸಾಮರ್ಥ್ಯ ಹೊಂದಿದ ಕಣ್ವ ಜಲಾಶಯ ತುಂಬಿ ಒಂದೂವರೆ ದಶಕವೇ ಕಳೆದಿದೆ. ಸದ್ಯದ ಮಟ್ಟಿಗೆ ಜಲಾಶಯದಲ್ಲಿ ಇದ್ದಬದ್ದ ಜಲ ಮೂಲವೆಲ್ಲಾ ಬತ್ತಿ ಹೋಗಿದೆ. ಬಿರುಕುಬಿಟ್ಟ ಇಳೆಯು ಮಳೆಗಾಗಿ ಕಾಯುತ್ತಿದೆ. ಸ್ವಯಂ ಚಾಲಿತ ಕ್ರಸ್ಟ್ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳನ್ನು ಅಳವಡಿಸಿದ್ದರೂ ಅದರಿಂದ ಒಮ್ಮೆಯೂ ನೀರು ಹೊರ ಹರಿದಿಲ್ಲ.
ಸರಾಸರಿ 1 ಟಿಎಂಸಿಯಷ್ಟು ನೀರು ಶೇಖರಣಾ ಸಾಮರ್ಥ್ಯವಿರುವ ಮಾಗಡಿಯ ವೈ.ಜಿ.ಗುಡ್ಡ, ಮಂಚನಬಲೆ ಜಲಾಶಯಗಳೂ ನೀರಿಲ್ಲದಾಗಿವೆ. ಕಾವೇರಿ, ಹೇಮಾವತಿಯ ಸೋರಿಕೆ ನೀರು ಅವಲಂಬಿತ ಮಳೆಗಾಲದ ನದಿಯಾದ ಶಿಂಷಾಕ್ಕೆ ಚನ್ನಪಟ್ಟಣದ ಇಗ್ಗಲೂರು ಬಳಿ ನಿರ್ಮಿಸಿರುವ ಎಚ್.ಡಿ.ದೇವೇಗೌಡ ಬ್ಯಾರೇಜ್‌ನಲ್ಲೂ ನೀರು ಖಾಲಿಯಾಗುತ್ತಿದೆ.
ಬೆಂಗಳೂರಿನ ಕೊಳಚೆಯೊಂದಿಗೆ ಹರಿಯುತ್ತಿರುವ ವೃಷಭಾವತಿ ನದಿಯಿಂದಾಗಿ ಬೈರಮಂಗಲ ಕೆರೆ ತುಂಬಿ ತುಳುಕುತ್ತಿದ್ದು, ರೋಗ-ರುಜಿನಗಳಿಗೆ ಕಾರಣವಾಗಿದೆ. ಇಲ್ಲಿದ ಮುಂದೆ ಸಾಗುವ ಕೊಳಚೆ ನೀರಿನಿಂದಾಗಿ ಕನಕಪುರ ತಾಲೂಕಿನ ಹಾರೋಬೆಲೆಯಲ್ಲೂ ಒಂದಿಷ್ಟು ನೀರಿದೆ. ಅದು ಪ್ರಯೋಜನಕ್ಕೆ ಬಾರದಂತಾಗಿದೆ.

-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.