ಬೆಂಗಳೂರು ಗ್ರಾಮಾಂತರ

ಹೊಸಕೋಟೆ: ಕರಗ ಮಹೋತ್ಸವಕ್ಕೆ ಚಾಲನೆ

Published On :

ಹೊಸಕೋಟೆ: ಪಟ್ಟಣದಲ್ಲಿ ಶ್ರೀ ಅವಿಮುಕ್ತೆಶ್ವರಸ್ವಾಮಿ ಬ್ರಹ್ಮರಥೋತ್ಸವ, ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವಕ್ಕೆ ಚಾಲನೆ ದೊರತಿದೆ.
 ಮೇ 25ರ ಬುದ್ಧ ಪೂರ್ಣಿಮೆಯಂದು ಎರಡೂ ಮಹೋತ್ಸವಗಳು ನಡೆಯಲಿದ್ದು ಸಿದ್ಧತೆಗಳು ಭರದಿಂದಸಾಗಿವೆ. ಧರ್ಮರಾಯಸ್ವಾಮಿ ದೇವಾಲಯ, ವಹ್ನಿಕುಲ ಕ್ಷತ್ರಿಯರು ಆದಿಶಕ್ತಿ ದೇವಿಯ ಅವತಾರವಾದ ಶ್ರೀ ದ್ರೌಪದಿ ದೇವಿಯ ದೇವಾಲಯವನ್ನು 15ನೇ ಶತಮಾನದಲ್ಲಿ ನಿರ್ಮಿಸಿದ್ದು ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ನಂತರ 1957ರಲ್ಲಿ ಆರಂಭಿಸಿದ ಜೀರ್ಣೋದ್ಧಾರ ಕಾರ್ಯ 1990ರಲ್ಲಿ ಪೂರ್ಣಗೊಂಡಿದೆ. ದೇವಾಲಯದ ರಾಜಗೋಪುರ ನಿರ್ಮಾಣ 1995ರಲ್ಲಿ ಪ್ರಾರಂಭಗೊಂಡಿದ್ದು 1999ರಲ್ಲಿ ಮುಕ್ತಾಯಗೊಂಡಿದೆ. ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದ ಕರಗ ಮಹೋತ್ಸವ ಸಂಭ್ರಮದಲ್ಲಿ ಪಟ್ಟಣದವರೆಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಊರು ಹಬ್ಬವಾಗಿ ಆಚರಿಸುತ್ತಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಅಂಕುರಾರ್ಪಣೆ: ಮೇ 17ರಂದು ಅಂಕುರಾರ್ಪಣೆಯೊಂದಿಗೆ ಕರಗ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು ಮೇ 23ರಂದು ನವಗ್ರಹ ಪೂಜೆ, ರಾತ್ರಿ ಹಸಿ ಕರಗ, ಮೇ 24ರಂದು ಆರತಿ ಮತ್ತು
ದೀಪೋತ್ಸವ, 25 ರಂದು ರಾತ್ರಿ ಹೂವಿನ ಕರಗ ನಡೆದು 26 ರಂದು ವಸಂತೋತ್ಸವ, ಭಾರತ ಪುರಾಣ, ಗಾವಿನೊಂದಿಗೆ ಮುಕ್ತಾಯಗೊಳ್ಳಲಿದೆ. ರಾತ್ರಿ ಸುಮಾರು ಒಂದು ಗಂಟೆಗೆ ದೇವಾಲಯದಿಂದ ಹೊರಬರುವ ಹೊವಿನ ಕರಗ ಬಡಾವಣೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಹಿಂದಿರುಗುವುದು. ಸೂರ್ಯೋದಯದ ವೇಳೆಯಲ್ಲಿ ಕರಗದೊಂದಿಗೆ ರಾಜ್ಯದ ಇತರೆಡೆ ನಡೆಯುವ ಕರಗ
ಮಹೋತ್ಸವಗಳಿಗಿಂತಲೂ ಸುಮಾರು ಸಾವಿರಕ್ಕೂ ಹೆಚ್ಚಿನ ವೀರಕುಮಾರರು ಪಾಲ್ಗೊಳ್ಳುವುದು
ವೈಶಿಷ್ಟ ವಾಗಿದೆ.
ಬ್ರಹ್ಮರಥೋತ್ಸವ: ಬುದ್ಧ ಪೂರ್ಣಿಮೆಯಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಮೇ 21ರಂದು ಅಂಕುರಾರ್ಪಣೆ ಮೂಲಕ ಪೂಜಾ ವಿಧಿ ಅರಂಭಗೂಂಡಿದ್ದು ಜೂನ್ 3ರಂದು ಪಲ್ಲಕ್ಕಿ ಉತ್ಸವದೊಂದಿಗೆ ಸಮಾನಗೊಳ್ಳುತ್ತದೆ. ಸಂಪೂರ್ಣ ಮರದ ತುಂಡುಗಳಿಂದ, ಮರದ ಚಕ್ರಗಳನ್ನೇ ಹೊಂದಿರುವ ಒಂಬತ್ತು ಅಂಕಣಗಳುಳ್ಳ, ಸುಮಾರು 41 ಅಡಿ ಎತ್ತರದ ರಥವು ಮಧ್ಯಾಹ್ನ ಒಂದು ಗಂಟೆಗೆ ಬಸ್ ನಿಲ್ದಾಣದಿಂದ ಹೊರಟು ಗಣಿಗರಪೇಟೆ, ಸುಣ್ಣಕಲ್ ಪೇಟೆ, ಕುರುಬರಪೇಟೆ, ತಿಗಳರಪೇಟೆ, ಜೆ.ಸಿ. ವೃತ, ಕೆ.ಆರ್.ರಸ್ತೆ ಮೂಲಕ ಸಾಗಿ ಮತ್ತೆ ಸಂಜೆ ಆರು ಗಂಟೆಗೆ ಸ್ವಸ್ಥಾನ  ಸೇರುತ್ತದೆ. ರಾತ್ರಿ ರಥಕ್ಕೆ ವಿದ್ಯುತ್ ಅಲಂಕಾರ ಮಾಡಲಾಗುವುದು ಎಂದು ಪ್ರಥಮ ಬಾರಿಗೆ ಬ್ರಹ್ಮರಥೋತ್ಸವ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ.ಶ್ರೀನಿವಾಸಯ್ಯ(ಅಬಕಾರಿ) ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.