ಅರ್ಕಾವತಿ ಕಾಯಕಲ್ಪಕ್ಕೆ ರು. 9.5 ಕೋಟಿ ಯೋಜನೆ
ಕ.ಪ್ರ. ವಾರ್ತೆ , ರಾಮನಗರ , ಮೇ 24
ಜಿಲ್ಲಾ ಕೇಂದ್ರವಾದ ರಾಮನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಅರ್ಕಾವತಿ ನದಿಯಲ್ಲಿ ನೀರಿನ ಹರಿವಿಗೆ ಸೀಮಿತ ಅವಕಾಶ ಕಲ್ಪಿಸಿ, ಇಕ್ಕೆಲಗಳಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ರು.9.5 ಕೋಟಿ ವೆಚ್ಚದ ಯೋಜನೆಯನ್ನು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ರೂಪಿಸಿದೆ.
ಅರ್ಕಾವತಿ ನದಿಯು ನಗರ ವ್ಯಾಪ್ತಿಯಲ್ಲಿ ಸುಮಾರು 2.5 ಕಿ.ಮೀ. ದೂರ ಹಾದು ಹೋಗಿದೆ. 60-65 ಮೀಟರ್ ಅಗಲಿರುವ ನದಿಯಲ್ಲಿ ಗಿಡ-ಗಂಟಿ ಬೆಳೆದು ಪರಿಸರ ಮಾಲಿನ್ಯ ಉಂಟಾಗಿದೆ. ಕಳೆದ ವರ್ಷವಷ್ಟೇ ಶುದ್ಧೀಕರಣ ನಡೆಸಿದರೂ ಪ್ರಯೋಜನವಾಗಿಲ್ಲ. ಮತ್ತೆ ನದಿ ಯಥಾಸ್ಥಿತಿಗೆ ಬಂದಿದೆ.
ನದಿಯ ಶುದ್ಧೀಕರಣಕ್ಕೆ ಮಂಜೂರು ಮಾಡಿದ ರು.38 ಲಕ್ಷ ಮೊತ್ತವು ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತಾಗಿದೆ. ಇದೆಲ್ಲವನ್ನೂ ಮನಗಂಡ ಪ್ರಾಧಿಕಾರವು ತಜ್ಞರೊಡಗೂಡಿ ನೂತನ ಯೋಜನೆಯನ್ನು ರೂಪಿಸಿದ್ದು, ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ.
ನದಿ ಹರಿವಿನ ಮಾರ್ಗ: ರಾಮನಗರ ನಗರಕ್ಕೆ ಉತ್ತರ ದಿಕ್ಕಿನ ದ್ಯಾವರಸೇಗೌಡನದೊಡ್ಡಿ ಸಮೀಪದಿಂದ ದಕ್ಷಿಣದ ಕಡೆಯ ಬಾಲಗೇರಿವರೆಗೆ 2.5 ಕಿ.ಮೀ. ದೂರ ಅರ್ಕಾವತಿ ನದಿ ಹರಿಯುತ್ತಿದೆ. ಸದ್ಯದ ಈ ನದಿ ಮಲೀನವಾಗಿದೆಯಲ್ಲದೆ ನಗರದ ಅಂದವನ್ನೂ ಕೆಡಿಸಿದೆ.
ನಗರದ ಮಧ್ಯೆ ಇರುವ ಈ ನದಿಯಲ್ಲಿ ಹಾವು, ಚೇಳು ಸಹಿತ ವಿಷ ಜಂತುಗಳೇ ತುಂಬಿಕೊಂಡಿವೆ. ಆಸುಪಾಸಿನ ನಿವಾಸಿಗಳು ನೆಮ್ಮದಿಯಿಂದ ಬದುಕಲಾಗದೆ ಪರಿತಪಿಸುತ್ತಿದ್ದಾರೆ. ಇಷ್ಟಲ್ಲದೆ, ಮಳೆ ಕೊರತೆಯಿಂದ ಬತ್ತಿ ಹೋಗಿರುವ ನದಿಯಲ್ಲಿ ಈಗ ಕೊಳಚೆ ನೀರು ಮಾತ್ರವೇ ಹರಿದು, ಗಬ್ಬೆದ್ದು ನಾರುತ್ತಿದೆ.
ಉದ್ದೇಶಿತ ಯೋಜನೆ: ಸುಮಾರು 60 ರಿಂದ 65 ಮೀಟರ್ ಅಗಲಿದ ನದಿ ಪಾತ್ರವನ್ನು ಆಸುಪಾಸಿನ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲಿಗೆ ಅದೆಲ್ಲವನ್ನೂ ತೆರವುಗೊಳಿಸಿ, ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುವ ಚಿಂತನೆ ಪ್ರಾಧಿಕಾರದ್ದಾಗಿದೆ.
ನದಿಯ ನಡು ಮಧ್ಯೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ 15 ಮೀಟರ್ ಅಗಲದ ಕಾಲುವೆ ನಿರ್ಮಿಸಲಾಗುತ್ತದೆ. ಇಕ್ಕೆಲಗಳಲ್ಲಿ ಕಲ್ಲು ಹಾಸು ಅಳವಡಿಸಿ, ಅಲ್ಲಲ್ಲಿ ಗಿಡಗಳನ್ನು ನೆಡಲಾಗುತ್ತದೆ. ವಾಯು ವಿಹಾರಕ್ಕೆ ಯೋಗ್ಯವಾದ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದೆ.
ನಾಗರಿಕರು ವಾಯು ವಿಹಾರಕ್ಕೆ ಆಗಮಿಸಿದಾಗ ವಿಶ್ರಮಿಸಲು ಸೀಮಿತ ಕಡೆ ನೆರಳಿನ ವ್ಯವಸ್ಥೆ, ಕಲ್ಲು ಬೆಂಚುಗಳನ್ನು ಹಾಕಲಾಗುವುದು. ರಾಸಾಯನಿಕ ಮಿಶ್ರಣ ಮಾಡಿ ಕೊಳಚೆ ನೀರಿನ ಹರಿವಿನಿಂದ ಕೆಟ್ಟ ವಾಸನೆ ಬರದಂತೆ ತಡೆಯುವ ವ್ಯವಸ್ಥೆ ಕಲ್ಪಿಸುವುದು ಯೋಜನೆಯಲ್ಲಿ ಅಡಗಿದೆ.
ಸಣ್ಣ ಸೇತುವೆಗಳು: ಉದ್ಯಾನವನ ನಿರ್ಮಾಣದ ನಂತರ 15 ಮೀಟರ್ ಅಗಲದ ಕಾಲುವೆ ದಾಟಲು ಅಲ್ಲಲ್ಲಿ ಸಣ್ಣ ಪ್ರಮಾಣದ ಸೇತುವೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಎಲ್ಲ ಯೋಜನೆಗಳು ಸಾಕಾರಗೊಂಡಿದ್ದೇ ಆದರೆ, ಅರ್ಕಾವತಿಯಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರ ಆಗಲಿದೆ.
ಅರ್ಕಾವತಿ ಕೊಳಚೆಯಿಂದ ಬೇಸತ್ತಿರುವ ಜನತೆಯು ವಾಯು ವಿಹಾರಕ್ಕೆ ಈ ಕಡೆ ಮುಖ ಮಾಡುವಂತಾಗಲಿದೆ. ನಗರದಲ್ಲಿ ಉದ್ಯಾನವನಗಳಿಲ್ಲ ಎನ್ನುವ ಕೊರಗು ನೀಗುತ್ತದೆ. ಇತ್ತ ನಗರವೂ ಅಲ್ಲ, ಅತ್ತ ಹಳ್ಳಿಯೂ ಅಲ್ಲ ಎನ್ನುವಂತಹ ಸ್ಥಿತಿಯಲ್ಲಿರುವ ರಾಮನಗರ ಅಂದ ಹೆಚ್ಚಲಿದೆ.
ಡಿಸಿ ಆಡಳಿತಾಧಿಕಾರಿ: ಬಿಜೆಪಿ ಸರ್ಕಾರದಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಕೆ.ಶೇಷಾದ್ರಿ ಗುರುವಾರ (ಮೇ 23)ವಷ್ಟೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದಾರೆ.
ಶೇಷಾದ್ರಿ ಅವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪಕ್ಷಾಂತರ ನಡೆಸಿದ ಹಲವರು ಹಿಂದಿನ ಸರ್ಕಾರದ ಹುದ್ದೆ ತೊರೆದಿದ್ದರಾದರೂ ಶೇಷಾದ್ರಿ ಮತ್ತು ತಂಡ ಮುಂದುವರೆದುಕೊಂಡು ಬಂದಿತ್ತು. ಈಗ ಅವರು ಮತ್ತದೇ ಹುದ್ದೆ ನಿರೀಕ್ಷೆಯಲ್ಲಿದ್ದಾರೆ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

