ಕಬ್ಬು ಬಾಬ್ತು ಬಾಕಿ: ಮಾತಿನ ಚಕಮಕಿ
ಎಸ್ಪಿಆರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ-ಕಬ್ಬು ಬೆಳೆಗಾರರ ವಾಗ್ವಾದ
ಕ.ಪ್ರ.ವಾರ್ತೆ ರಾಮನಗರ ಮೇ 25
ಕದ ಮುಚ್ಚಿರುವ ಜಿಲ್ಲೆಯ ಕಂಚುಗಾರನಹಳ್ಳಿ ಬಳಿಯ ಎಸ್ಪಿಆರ್ ಶುಗರ್ ಕಾರ್ಖಾನೆಯಿಂದ ಕಬ್ಬು ಸರಬರಾಜುದಾರರಿಗೆ ಬರಬೇಕಾದ ಬಾಕಿ ವಿಷಯವಾಗಿ ಕಾರ್ಖಾನೆ ಆಡಳಿತ ಮಂಡಳಿ ಮತ್ತು ರೈತ ಮುಖಂಡರ ನಡುವೆ ವಾಗ್ವಾದಕ್ಕೆ ಜಿಲ್ಲಾಡಳಿತ ಕಚೇರಿ ಸಭಾಂಗಣ ವೇದಿಕೆಯಾಯಿತು.
ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮಂಡಳಿ ಆಯುಕ್ತರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಶನಿವಾರ ಕರೆದಿದ್ದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಕಾರ್ಖಾನೆ ಆಡಳಿತ ವರ್ಗ ತನ್ನ ಎಲ್ಲ ನಿಲುವು ಸಮರ್ಥಿಸಿಕೊಂಡರೆ, ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಖಾನೆ ಮುಚ್ಚಿರುವ ಆಡಳಿತ ಮಂಡಳಿ ಯಂತ್ರೋಪಕರಣಗಳನ್ನು ಅನ್ಯರಿಗೆ ಮಾರಾಟ ಮಾಡಿದ್ದು, ಸದ್ದಿಲ್ಲದೆ ನಡೆಯುತ್ತಿದ್ದ ಅವುಗಳ ಸಾಗಣೆ ಕುರಿತು ರೈತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮಂಡಳಿ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಮೇರೆಗೆ ಸಭೆ ಏರ್ಪಾಟಾಗಿತ್ತು.
ಮಾಲೀಕರ ವಿವರಣೆ: ಕಾರ್ಖಾನೆಗೆ ವಾರ್ಷಿಕ 1 ಲಕ್ಷ ಟನ್ಕಬ್ಬು ಪೂರೈಕೆ ಅಗತ್ಯವಿತ್ತು. ಆದರೆ, ಈ ಭಾಗದಲ್ಲಿ 50-60 ಸಾವಿರ ಟನ್ ಮಾತ್ರವೇ ಲಭ್ಯವಿದೆ. ಕೊರತೆ ನೀಗಿಸಲು ಇತರೆ ಜಿಲ್ಲೆಗಳನ್ನು ಆಶ್ರಯಿಸಿದರೂ ಪ್ರಯೋಜನ ಆಗದ ಪರಿಣಾಮ, ಕಾರ್ಖಾನೆಯನ್ನೇ ಮುಚ್ಚಲಾಗಿದೆ ಎಂದು ಮಾಲೀಕ ತಿಮ್ಮೇಗೌಡ ಸಭೆಗೆ ವಿವರಿಸಿದರು.
ಭರವಸೆ ಈಡೇರಿಸಲಿಲ್ಲ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಳೆಗಾರರು ಕಂಪೆನಿಯು ಬಿತ್ತನೆ, ಗೊಬ್ಬರವನ್ನು ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಆದರೆ, ಕಬ್ಬು ಸಾಗಣೆ ಮಾಡಿದಾದ ಬಿತ್ತನೆ, ಗೊಬ್ಬರದ ಹಣವನ್ನು ಕಟಾವು ಮಾಡಿಕೊಂಡು ವಂಚಿಸಿತು. ಈ ಕುರಿತು ಪ್ರಶ್ನಿಸಿದ ರೈತರ ಕಬ್ಬನ್ನು ಖರೀದಿಸುತ್ತಿರಲಿಲ್ಲ ಎಂದು ದೂರಿದರು.
ಮುಖಂಡರ ಆಕ್ಷೇಪ: ಕಾರ್ಖಾನೆಯಿಂದ ಯಾವ ರೈತರಿಗೂ ಬಾಕಿ ನೀಡಬೇಕಿಲ್ಲ ಎಂದು ತಿಮ್ಮೇಗೌಡ ತಿಳಿಸುತ್ತಿದ್ದಂತೆಯೇ ಆಕ್ರೋಶಗೊಂಡ ರೈತರು ಮಾತಿನ ಚಕಮಕಿಗೆ ಇಳಿದರು. ಈ ಸಭೆ ಕರೆದಿರುವ ಸಂಗತಿ ರೈತರಿಗೆ ತಿಳಿದಿಲ್ಲ. ಮುಖಂಡರಿಗಷ್ಟೇ ಗೊತ್ತಾಗಿದೆ. ಹಾಗಾಗಿ ಪ್ರಕಟಣೆ ಹೊರಡಿಸಿ, ಕಾರ್ಖಾನೆ ಪ್ರದೇಶದಲ್ಲೇ ಸಭೆ ನಡೆಸಿದರೆ ಆಡಳಿತ ಮಂಡಳಿಯ ಬಂಡವಾಳ ತಿಳಿಯುತ್ತದೆ ಎಂದರು. ಉಪ ವಿಭಾಗಾಧಿಕಾರಿ ನೇತೃತ್ವದ ತಂಡವು ಸ್ಥಳೀಯವಾಗಿ ಸಭೆ ನಡೆಸಿ, ರೈತರಿಂದ ಅಹವಾಲು ಸ್ವೀಕರಿಸುತ್ತದೆ. ಬಾಕಿ ಬರಬೇಕಾದ ರೈತರು ತಮ್ಮ ಬಳಿ ಇರುವ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಬೇಕು. ನಂತರ ಜಿಲ್ಲಾಡಳಿತ ತನಿಖೆ ನಡೆಸಿ, ಬಾಕಿ ಪಾವತಿಸಲು ಬದ್ಧವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಭರವಸೆ ನೀಡಿದರು.
ಬದಲಿ ವ್ಯವಸ್ಥೆ ಕಲ್ಪಿಸಿ: ಬಿಡದಿ ಸುತ್ತಮುತ್ತಲ ಪ್ರದೇಶದಲ್ಲಿ ಬೆಂಗಳೂರಿನ ಕೊಳಚೆ ನೀರು ಹರಿದು ಬರುತ್ತಿದೆ. ಅದರಿಂದ ಈ ಭಾಗದ ಕೃಷಿ ಭೂಮಿ ಜೌಗು ಪ್ರದೇಶವಾಗಿದೆ.
ಇಲ್ಲಿ ಕಬ್ಬು ಹೊರತುಪಡಿಸಿ ಬೇರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಭಾಗದಲ್ಲಿ ಕಬ್ಬನ್ನು ಅರೆಯಲು ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತೆರಿಗೆ ಬಾಕಿ ವಿವರ: ಎಸ್ಪಿಆರ್ ಕಾರ್ಖಾನೆಯಿಂದ ವಾಣಿಜ್ಯ ತೆರಿಗೆ ಇಲಾಖೆಗೆ ರು.2.68 ಕೋಟಿ ಬಾಕಿ ಇರುವುದಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಬಹಿರಂಗಪಡಿಸಿದರು.
ಆ ಬಗ್ಗೆ ಪ್ರಸ್ತಾಪಿಸಿದ ಮಾಲೀಕ ತಿಮ್ಮೇಗೌಡ ರು.40 ಲಕ್ಷ ತೆರಿಗೆ ಪಾವತಿಸಿರುವುದಾಗಿ ಸ್ಪಷ್ಟಪಡಿಸಿದರು.
ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಲಕ್ಷ್ಮಿನಾರಾಯಣಗೌಡ, ಲಕ್ಷ್ಮಣಸ್ವಾಮಿ, ಪುಟ್ಟಸ್ವಾಮಿ, ಕರಿಯಪ್ಪ, ಕೃಷ್ಣಪ್ಪ, ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಗುಟ್ಟಾಗಿ ನಡೆದದ್ದು ಸರಿಯಲ್ಲ
ರೈತರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ ಕರೆಯಲಾಗಿದ್ದ ಈ ಸಭೆ ಕುರಿತು ಜಿಲ್ಲಾಡಳಿತ ಯಾವುದೇ ಪ್ರಕಟಣೆ ಹೊರಡಿಸಿರಲಿಲ್ಲ. ಕಾರ್ಖಾನೆ ಆಡಳಿತ ಮಂಡಳಿ, ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನಾ ಪತ್ರ ಕಳುಹಿಸಿ ಆಯ್ದ ರೈತ ಮುಖಂಡರಿಗೆ ಮುನ್ನಾ ದಿನವಷ್ಟೇ ದೂರವಾಣಿಯಲ್ಲಿ ಮಾಹಿತಿ ನೀಡಲಾಗಿದೆ. ನಿಜಕ್ಕೂ ಇದೊಂದು ಗಂಭೀರ ಪ್ರಕರಣ. ಸರ್ಕಾರಕ್ಕೆ ತೆರಿಗೆ ಮಾತ್ರವಲ್ಲದೆ ರೈತರಿಗೆ ಬಾಕಿ ಬರಬೇಕೆನ್ನುವ ದೂರು ಇದೆ. ಇಂತಹ ವಿಷಯದಲ್ಲಿ ಪ್ರಕಟಣೆ ಹೊರಡಿಸಿಯೇ ಸಭೆ ಅಯೋಜಿಸಬೇಕಿತ್ತು. ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಬಾಕಿ ಕುರಿತು ಸೂಕ್ತ ದಾಖಲೆಯನ್ನು ಇಲ್ಲೇ ಒದಗಿಸಬಹುದಿತ್ತು ಎನ್ನುವುದು ರೈತ ಮುಖಂಡರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

