ಇಳೆಗೆ ಇಳಿಯದ ಮಳೆ, ಕರಗುತ್ತಿದೆ ಕಾರ್ಮೋಡ
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 27
ಕೆಲ ದಿನಗಳ ಹಿಂದಷ್ಟೇ ಭರ್ಜರಿಯಾಗಿ ಸುರಿದು ಭರವಸೆ ಮೂಡಿಸಿದ್ದ ಮಳೆ ಮತ್ತೆ ಕೈಕೊಟ್ಟಿದೆ. ಇನ್ನೇನು ಮಳೆ ಸುರಿಯಬಹುದೆನ್ನುವಂತೆ ಕಟ್ಟಿದ ಕಾರ್ಮೋಡವೆಲ್ಲಾ ಕೆಲವೇ ಕ್ಷಣದಲ್ಲಿ ಕರಗಿ ಹೋಗುತ್ತಿದೆ. ಇಳೆಗೆ ಇಳಿಯದ ಮಳೆಯು ರೈತಾಪಿ ಸಮುದಾಯವನ್ನು ಮತ್ತೊಮ್ಮೆ ಚಿಂತೆಗೀಡು ಮಾಡಿದೆ.
ಎರಡು ವಾರದ ಹಿಂದೆ ಜಿಲ್ಲಾದ್ಯಂತ ವ್ಯಾಪಕವಾಗಿ ಸುರಿದ ಮಳೆಯು ಸತತ ಎರಡು ವರ್ಷ ಭೀಕರ ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಆಶಾಭಾವನೆ ಮೂಡಿಸಿತ್ತು. ಅಲ್ಲಿಂದೀಚೆಗೆ ನಿತ್ಯವೂ ಮೂಡುತ್ತಿರುವ ಕಪ್ಪನೆಯ ಮೋಡವೆಲ್ಲಾ ವೇಗದ ಗಾಳಿಯ ಪರಿಣಾಮ ಚದುರಿ ಹೋಗುತ್ತಿದ್ದು, ಮಳೆ ಸಾಧ್ಯತೆ ಕ್ಷೀಣವಾಗುತ್ತಿದೆ.
ಕಳೆದ ವರ್ಷ ಭೀಕರ ಬರ ಎದುರಾಗಿತ್ತಾದರೂ ಮಾರ್ಚ್-ಮೇ ಅವಧಿಯಲ್ಲಿ ಅವಧಿಪೂರ್ವ ಮುಂಗಾರು ಸುರಿದಿತ್ತು. ಈ ಬಾರಿ ಒಮ್ಮೆಯಷ್ಟೇ ವ್ಯಾಪಕ ಮಳೆಯಾಗಿದ್ದು, ಉಳಿದಂತೆ ಅಲ್ಲಲ್ಲಿ ಸುರಿದಿದೆ. ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿಯೂ ಮಳೆ ಕೊರತೆ ಎದುರಾಗಿದೆ.
ಕುಸಿದ ಮಳೆ ಪ್ರಮಾಣ: ರಾಮನಗರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ವಾಡಿಕೆಯಷ್ಟು ಮಳೆ ಸುರಿದೇ ಇಲ್ಲ. ಜನವರಿಯಿಂದ ಮೇ 25ರವರೆಗೆ ವಾಡಿಕೆ ಮಳೆ ಪ್ರಮಾಣ 192 ಮಿ.ಮೀ. ಆಗಿದ್ದರೆ, 169 ಮಿ.ಮೀ. ಮಳೆಯಾಗಿದೆ. ಈ ಪೈಕಿ ಏಪ್ರಿಲ್ ಮಾಹೆಯಲ್ಲಿ ವಾಡಿಕೆ ಮಳೆ 45 ಮಿ.ಮೀ.ಗೆ ಎದುರಾಗಿ 70 ಮಿ.ಮಿ. ಮಳೆ ಯಾಗಿದೆ.
ಏಪ್ರಿಲ್ ಮಾಹೆಯ ಮಳೆಯು ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿದಿಲ್ಲ. ಸೀಮಿತ ಪ್ರದೇಶದಲ್ಲಷ್ಟೇ ಸುರಿದಿದ್ದು, ಪ್ರತಿ ಬಾರಿ ಉತ್ತಮ ಮಳೆಯಾಗುತ್ತಿದ್ದ ಮಾಗಡಿಯಲ್ಲೇ ಈ ಬಾರಿ ಮಳೆ ಕೊರತೆ ಪ್ರಮಾಣ ಅಧಿಕವಾಗಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆ ಜನವರಿಯಲ್ಲಿ 1.5 ಮಿ.ಮೀ., ಫೆಬ್ರವರಿಯಲ್ಲಿ 5.5 ಮಿ.ಮೀ. ಆಗಿದ್ದರೆ, ಸುರಿದ ಮಳೆ ಪ್ರಮಾಣ ಶೂನ್ಯ.
ಮಾರ್ಚ್ ತಿಂಗಳಲ್ಲಿ 12.3 ಮಿ.ಮೀ. ವಾಡಿಕೆಯಾಗಿದ್ದು, ಒಟ್ಟಾರೆ 7.6 ಮಿ.ಮೀ. ಸುರಿದಿದೆ. ಮೇ ಮಾಹೆಯಲ್ಲಿ ಈವರೆಗೆ ವಾಡಿಕೆ 127.8 ಮಿ.ಮೀ. ಆಗಿದ್ದು, 91.6 ಮಿ.ಮೀ. ಮಳೆ ಸುರಿದಿದೆ. ಅಂಕಿ-ಅಂಶಗಳನ್ನು ನೋಡಿದರೆ ಹೆಚ್ಚಿನ ಮಳೆ ಕೊರತೆ ಆಗಿಲ್ಲವೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ, ವಾಸ್ತವದಲ್ಲಿ ಮಳೆ ವ್ಯಾಪಕವಾಗಿ ಸುರಿಯದೆ ಅಲ್ಲಲ್ಲಿ ಮಾತ್ರವೇ ಆಗಿದೆ.
ಅಲ್ಲಲ್ಲಿ ಬೆಳೆ ಬಿತ್ತನೆ: ರಾಮನಗರ ಜಿಲ್ಲೆಯ ಒಟ್ಟಾರೆ ಕೃಷಿ ಪ್ರದೇಶ 1.20 ಲಕ್ಷ ಹೆಕ್ಟೇರ್ ಎನ್ನುವುದು ಕೃಷಿ ಮತ್ತು ಕಂದಾಯ ಇಲಾಖೆ ಕಡತದಲ್ಲಿರುವ ಮಾಹಿತಿ. ಆದರೆ, ಪ್ರಸ್ತುತ ಆಗಿರುವ ಅನ್ಯಕ್ರಾಂತ, ಕೈಗಾರಿಕೆಗೆ ಸ್ವಾಧೀನ, ತೋಟಗಾರಿಕೆಗೆ ಪರಿವರ್ತನೆ ಸಹಿತ ನಾನಾ ಕಾರಣಗಳಿಂದ ಶೇ. 25ರಷ್ಟು ಪ್ರದೇಶ ಕೃಷಿಯಿಂದ ವಿಮುಖವಾಗಿದೆ. ಹೀಗಾಗಿ ಲಭ್ಯವಿರುವ ಕೃಷಿ ಪ್ರದೇಶ ಗರಿಷ್ಠ 90 ಸಾವಿರ ಹೆಕ್ಟೇರ್ ಮಾತ್ರವೇ.
ಅಲ್ಲಲ್ಲಿ ಸುರಿದ ಮಳೆಯಿಂದ ಕೆಲವೆಡೆ ರೈತರು ಹದವಾದ ಭೂಮಿಯನ್ನು ಉಳುಮೆ ಮಾಡಿಕೊಂಡಿದ್ದಾರೆ. ಮೇವು, ದ್ವಿದಳ ಧಾನ್ಯಗಳ ಬೆಳೆಯನ್ನು ಹಾಕಿಕೊಂಡಿದ್ದಾರೆ. ನೀರಾವರಿಯೂ ಸೇರಿದಂತೆ ಬೆಳೆ ಒಡ್ಡಿರುವ ಭೂ ಪ್ರದೇಶವು ಜಿಲ್ಲೆಯಲ್ಲಿ 3966 ಹೆಕ್ಟೇರ್ ಮಾತ್ರವೇ. ಅದರಲ್ಲೂ ಕೆಲವೆಡೆ ಮಳೆ ಕೈಕೊಟ್ಟು, ಬಿತ್ತನೆ ಬೀಜಗಳು ಮೊಳಕೆಯೊಡೆಯದೇ ನಷ್ಟವಾಗಿದೆ.
ಕಳೆದ 2 ದಶಕದಿಂದ ಬಯಲುಸೀಮೆಯ ಜಿಲ್ಲೆಗಳಲ್ಲಿ ಮಳೆಯ ವೈಪರೀತ್ಯದ ಪರಿಣಾಮ ಮುಂಗಾರು ಕೃಷಿ ಚಟುವಟಿಕೆಯ ಅವಧಿಯೂ ಮುಂದೂಡಲ್ಪಟ್ಟಿದೆ. ಈ ಮೊದಲು ಜೂನ್- ಜುಲೈ ಅವಧಿಯಲ್ಲೇ ರಾಗಿ, ಬತ್ತ ಬಿತ್ತನೆ ನಡೆಯುತ್ತಿತ್ತು. ಈಗೆಲ್ಲಾ ಆಗಸ್ಟ್- ಸೆಪ್ಟಂಬರ್ ಅವಧಿಯಲ್ಲಿ ಅಲ್ಪಾವಧಿ ಬೆಳೆಗಳನ್ನು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಪ ಪ್ರಮಾಣದ ದಾಸ್ತಾನು: ಸಮೃದ್ಧ ಮಳೆಯಿಲ್ಲದ ಕಾರಣಕ್ಕೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕೂಡ ಹೆಚ್ಚು ದಾಸ್ತಾನು ಮಾಡಿಕೊಂಡಿಲ್ಲ. ವಾರ್ಷಿಕ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಿಕೊಂಡ ರಸಗೊಬ್ಬರ, ಬಿತ್ತನೆ ಬೀಜದಲ್ಲಿಯೇ ಸಾಕಷ್ಟು ಉಳಿದಿದೆ.
ಈ ಜಿಲ್ಲೆಯಲ್ಲಿ ಏಪ್ರಿಲ್- ಮೇ ಮಾಹೆಯ ರಸಗೊಬ್ಬರ ಬೇಡಿಕೆ 3845 ಮೆಟ್ರಿಕ್ ಟನ್ ಆಗಿದೆ. ಇದರಲ್ಲಿ 2017 ಮೆಟ್ರಿಕ್ ಟನ್ ಸರಬರಾಜಾಗಿದ್ದು, 1031 ಮೆಟ್ರಿಕ್ ಟನ್ ವಿತರಣೆಯಾಗಿದೆ. ಉಳಿಕೆ ದಾಸ್ತಾನು 988 ಮೆಟ್ರಿಕ್ ಟನ್. ಇನ್ನು, ಬಿತ್ತನೆ ಬೀಜಗಳ ಬೇಡಿಕೆ 4713 ಕ್ವಿಂಟಾಲ್ ಆಗಿದೆ. ಇದರಲ್ಲಿ 598.1 ಕ್ವಿಂಟಾಲ್ ಸರಬರಾಜಾಗಿದ್ದು, 77.44 ಕ್ವಿಂಟಾಲ್ ವಿತರಿಸಲಾಗಿದೆ. 512.56 ಕ್ವಿಂಟಾಲ್ ದಾಸ್ತಾನಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

