ಎಂಇಎಸ್ ಧೋರಣೆ, ಜಯಾ ಕ್ಯಾತೆಗೆ ಸಂಘಟನೆಗಳ ಆಕ್ರೋಶ
ದೊಡ್ಡಬಳ್ಳಾಪುರ: ಕರ್ನಾಟಕ ವಿಧಾನಸಭೆಯಲ್ಲಿ ಇಬ್ಬರು ಎಂಇಎಸ್ ಶಾಸಕರು ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಈ ನೆಲದ ಭಾಷೆಗೆ ದ್ರೋಹ ಬಗೆದಿದ್ದಾರೆ. ಇದನ್ನು ಕಂಡೂ ಕಾಣದಂತಿರುವ ಮೂಲಕ ಸರ್ಕಾರ ಕನ್ನಡ ವಿರೋಧಿತನವನ್ನು ಪ್ರಶ್ನಿಸದೆ ಹೊಣೆಗೇಡಿತನ ಮೆರೆದಿದೆ ಎಂದು ಇಲ್ಲಿನ ಹಲವು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್, ಕನ್ನಡಪರವಾದ ಗಟ್ಟಿದನಿ ಶಾಸನಸಭೆಯಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ. ಈ ಹಿಂದೆ ಕೂಡ ಎಂಇಎಸ್ ಇದೇ ರೀತಿಯ ವರ್ತನೆ ತೋರಿತ್ತು. ಆಗ ಸದನದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತೀವ್ರ ವಿರೋಧ ವ್ಯಕ್ತಪಡಿಸಿ, ಛೀಮಾರಿ ಹಾಕಿದ್ದರು. ಆದರೆ ಈ ಬಾರಿ ಯಾರೂ ಇದನ್ನು ವಿರೋಧಿಸದೆ ದಿವ್ಯ ನಿರ್ಲಕ್ಷ್ಯ ತೋರಿರುವುದು ಖಂಡನೀಯ. ಇದೇ ಧೋರಣೆ ಮುಂದುವರೆದಲ್ಲಿ ಮುಂದೊಂದು ದಿನ ಕರ್ನಾಟಕದ ವಿಧಾನಸೌಧ ಪರಭಾಷಿಕರ ಆಟಾಟೋಪಕ್ಕೆ ಸಾಕ್ಷಿಯಾಗಲಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಎಂಇಎಸ್ ಶಾಸಕರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನೆಲದ ಸಂಸ್ಕೃತಿ, ಭಾಷೆಗೆ ಧಕ್ಕೆ ತರುವ, ಇಲ್ಲಿನ ಜನರ ಭಾವನೆಗಳಿಗೆ ಆಘಾತ ನೀಡುವ ಉದ್ಧಟತನ ನಿಲ್ಲಿಸುವಂತೆ ಸರ್ಕಾರ ಖಡಕ್ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಯಾ ಕ್ಯಾತೆಗೆ ಧಿಕ್ಕಾರ: ಅದೇ ರೀತಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾವೇರಿ ನೀರು ತಾವು ಕೇಳಿದ ಪ್ರಮಾಣದಷ್ಟು ಬಿಡದಿರುವ ಹಿನ್ನಲೆಯಲ್ಲಿ ಆಗಿರುವ ಬೆಳೆ ನಷ್ಟವನ್ನು ಕಟ್ಟಿಕೊಡಬೇಕು ಎಂದು ಹೇಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ಖಂಡನೀಯ. ನಿಜವಾದ ಅರ್ಥದಲ್ಲಿ ಕರ್ನಾಟಕದ ಜನ ತಮಿಳುನಾಡಿನಿಂದ ಪರಿತಪಿತರಾಗಿದ್ದಾರೆ. ಇಲ್ಲಿನ ರೈತರಿಗೆ ತಮಿಳುನಾಡು ಸಿಎಂ ಪರಿಹಾರ ಕೊಡಬೇಕು. ಪದೇ ಪದೇ ಕರ್ನಾಟಕವನ್ನು ಗುರಿ ಮಾಡಿ ಕ್ಯಾತೆ ತೆಗೆಯುತ್ತಿರುವ ಅವರ ಧೋರಣೆ ಖಂಡನೀಯ. ಹೊಸ ಸರ್ಕಾರ ಕೂಡಲೇ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಸ್ಪಷ್ಟ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್.ರವಿಕಿರಣ್, ಡಾ.ರಾಜ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಹ.ರಾಮಕೃಷ್ಣ, ಪತ್ರಕರ್ತ ರಾಜೇಂದ್ರಕುಮಾರ್, ಪಿ.ಜಿ.ಸುಬ್ಬರಾವ್, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್, ಕನ್ನಡ ಜಾಗೃತ ಪರಿಷತ್ತು, ಕರವೇ, ಭುವನೇಶ್ವರಿ ಕನ್ನಡ ಸಂಘ ಸೇರಿದಂತೆ ಹಲವರು ಎಂಇಎಸ್ ಶಾಸಕರು, ಜಯಲಲಿತಾ ಧೋರಣೆಯನ್ನು ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

