ಬೆಂಗಳೂರು ಗ್ರಾಮಾಂತರ

ಜಿಲ್ಲಾಧಿಕಾರಿ ಬದಲಾಯಿಸುವ ಮೂಲಕ ಮಲತಾಯಿ ಧೋರಣೆ

Published On :

ಚನ್ನಪಟ್ಟಣ: ಪದೇ ಪದೇ ಜಿಲ್ಲಾಧಿಕಾರಿಗಳನ್ನು ಬದಲಾಯಿಸುವ ಮೂಲಕ ರಾಮನಗರ ಜಿಲ್ಲೆಯನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿರುವ ಸರ್ಕಾರಗಳು  ಈ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಕಿಡಿಕಾರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಕೆಲ ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿಗಾಗಿ ಪದೇಪದೆ ಜಿಲ್ಲಾಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದ್ದು, ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕಡೆಗಣನೆಯಾಗುತ್ತಿದೆ ಎಂದು ಆಪಾದಿಸಿದರು.
ಕೆಲ ಪ್ರಭಾವಿ ರಾಜಕಾರಣಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ಕೊಳ್ಳುತ್ತಿದ್ದು, ಜಿಲ್ಲಾಧಿಕಾರಿ ವರ್ಗಾವಣೆ ಹಿಂದೆ ಮರಳು ಮಾಫಿಯಾ, ಗ್ರಾನೈಟ್, ಜಲ್ಲಿಕ್ರಷರ್ ಸೇರಿದಂತೆ ಸಾಕಷ್ಟು ಸ್ಥಳೀಯ ಮಾಫಿಯಾಗಳು ಕೆಲಸ ಮಾಡಿವೆ ಎಂದು ಕಿಡಿಕಾರಿದರು.
ಸರ್ಕಾರ ನಿಷ್ಕ್ರಿಯ: ರಾಜ್ಯ ಸರ್ಕಾರ ಬರ ಪರಿಸ್ಥಿತಿ ಸೇರಿದಂತೆ ರೈತರು ಮತ್ತು ಶ್ರೀಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲಗೊಂಡಿದ್ದು ಮುಖ್ಯಮಂತ್ರಿಯನ್ನು ಹೊರತು ಪಡಿಸಿದರೆ ಯಾವುದೇ ಸಚಿವರು ಸಾರ್ವಜನಿಕ ವಾಗಿ ಸಿಗುತ್ತಿಲ್ಲ ಎಂದು ಆಪಾದಿಸಿದರು.
ಕೃಷಿಸಚಿವ ಕೃಷ್ಣ ಬೈರೇಗೌಡರು ಬೆಂಗಳೂರು ಬಿಟ್ಟು ಹೊರ ಬರುತ್ತಿಲ್ಲ, ತೋಟಗಾರಿಕಾ ಸಚಿವರು ಎಲ್ಲೂ ಕಾಣುತ್ತಿಲ್ಲ. ತೆಂಗು ಅಡಕೆಗೆ ರೋಗ ತಗುಲಿದ್ದು ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ವಿಫಲ ಗೊಂಡಿದೆ ಎಂದು ಆರೋಪಿಸಿದರು.
ಬೊಕ್ಕಸ ಖಾಲಿ: ರಾಜ್ಯದ ಬೊಕ್ಕಸ ಖಾಲಿಯಾಗಿದೆಯಾದರೂ ಸರ್ಕಾರ ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ  ಜನರನ್ನು ದಿಕ್ಕು ತಪ್ಪಿಸುತ್ತಿದೆ. ಕಾಲುಬಾಯಿ ಜ್ವರದಿಂದ ಸಾವಿಗೀಡಾಗಿರುವ ಮೃತರಾಸುಗಳಿಗೆ ಪರಿಹಾರ ಪ್ರಕಟಿಸಿದ ಸರ್ಕಾರ ಇದೀಗ ಹಣ ಬಿಡುಗಡೆ ಮಾಡಲು ಹಿಂದೆ ಮುಂದೆ ಯೋಚಿಸುತ್ತಿದ್ದಾರೆ ಎಂದು ಆರೋಪಿಸಿದರು.



ಮೋದಿ ರ್ಯಾಲಿಗೆ 10 ಸಾವಿರ ಮಂದಿ
ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿ ರ್ಯಾಲಿಗೆ ಜಿಲ್ಲೆಯಿಂದ 10 ಸಾವಿರಮಂದಿ ಆಗಮಿಸಲಿದ್ದು ಈಗಾಗಲೇ ತಾಲೂಕು ಮಟ್ಟದಲ್ಲಿ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ರವಿಕುಮಾರ್ ಗೌಡ, ಮುಖಂಡರಾದ ಡಿ.ರಾಮಚಂದ್ರು, ತಾಲೂಕು ಅಧ್ಯಕ್ಷ ಎಂ.ಎಲ್. ಪುಟ್ಟಪ್ಪ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.