ಬೆಂಗಳೂರು ಗ್ರಾಮಾಂತರ

12 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ: ಶಕೀಲ್

Published On :

ಚನ್ನಪಟ್ಟಣ: ಈದ್ಗಾ ಮೈದಾನವನ್ನು ಅಕ್ರಮವಾಗಿ ಪರಬಾರೆ ಮಾಡುವ ಮೂಲಕ ಮುಸ್ಲಿಂ ಜನಾಂಗದ ಧಾರ್ಮಿಕ ಭಾವನೆಗೆ ಧಕ್ಕೆತಂದಿರುವ ಈದ್ಗಾ ಕಾಂಪೌಂಡ್ ಸಮಿತಿಯ ಸದಸ್ಯರನ್ನು ಬಂಧಿಸುವಂತೆ, ಈದ್ಗಾ ಮೈದಾನವನ್ನು ಮುಸ್ಲಿಂ ಸಮುದಾಯದ ಪ್ರಾರ್ಥನೆಗೆ  ಸ್ಥಳ ಮೀಸಲಿರುವಂತೆ ಆಗ್ರಹಿಸಿ ನ.12 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮುಸ್ಲಿಂ ಮುಖಂಡ ಜನತಾ ಶಕೀಲ್ ಪ್ರಕಟಿಸಿದರು.
ತಾಲೂಕಿನ ಲಾಳಾಘಟ್ಟ ಗ್ರಾಮದ ತೋಟದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಧಾರ್ಮಿಕ ಸಂಸ್ಥೆಯ ಜಾಗವನ್ನು ಪರಭಾರೆ ಮಾಡಿರುವ ಇತಿಹಾಸ ಹಿಂದೆಂದೂ ಇಲ್ಲ, ಆದರೆ ಈದ್ಗಾ ಕಾಂಪೌಂಡ್ ಸಮಿತಿಯ ಸದಸ್ಯರು ಪರಭಾರೆ ಮಾಡುವ ಮೂಲಕ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದರು.
1965ರಲ್ಲಿ ಮೈಸೂರು ಸರ್ಕಾರ ಮುಸ್ಲಿಂ ಜನಾಂಗದ ಪ್ರಾರ್ಥನೆಗೆಂದು ಮಂಜೂರು ಮಾಡಿದ 6 ಎಕರೆ ಭೂಮಿಯನ್ನು ಅಧಿಕಾರವೇ ಇಲ್ಲದ ಈದ್ಗಾ ಸಮಿತಿ ಪರಭಾರೆ ಮಾಡಿದ್ದು, ಹಿಂದಿನ ಬಿಜೆಪಿ ಸರ್ಕಾರ ವಕ್ಫ್ ಮಂಡಲಿ ಆಕ್ಷೇಪವನ್ನು ಧಿಕ್ಕರಿಸಿ ಈದ್ಗಾ ಮೈದಾನ ಪರಭಾರೆಯಾಗಲು ಸಹಕರಿಸಿದೆ. ಅಕ್ರಮ ವೆಸಗಿರುವ ಈದ್ಗಾ ಕಾಂಪೌಂಡ್ ಸಮಿತಿಯ ಎಸ್.ಕೆ.ಬಾಬು, ಎಸ್.ಕೆ.ಸಾದತ್ ಸೇರಿದಂತೆ  11 ಮಂದಿ ಸದಸ್ಯರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಕಾಂಪೌಂಡ್ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ವಕ್ಫ್ ಮಂಡಲಿ ಅಧ್ಯಕ್ಷರು ಶಾಮೀಲಾಗಿ ಮುಸ್ಲಿಂ ಸಮುದಾಯವನ್ನು ದಿಕ್ಕು ತಪ್ಪಿಸಿದ್ದಾರೆ. ಎರಡು ವರ್ಷಗಳಿಂದ ಇವರ ಮೇಲೆ ನಂಬಿಕೆ ಇರಿಸಿ ಸುಮ್ಮನಿದ್ದೆವು, ಆದರೆ ಇವರೆಲ್ಲಾ ಗೋಮುಖ ವ್ಯಾಘ್ರಗಳಂತೆ ಮುಸ್ಲಿಂ ಸಮುದಾಯದ ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಯೋಗೇಶ್ವರ್ ಮಧ್ಯ ಪ್ರವೇಶಿಸಲಿ: ಈದ್ಗಾ ಮೈದಾನ ಅಕ್ರಮ ಪರರೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈದ್ಗಾ ಸಮಿತಿ ಸದಸ್ಯರೆಲ್ಲರೂ ಶಾಸಕ ಯೋಗೇಶ್ವರ್ ಶಿಷ್ಯರಾಗಿದ್ದು ಶಾಸಕರು ಮಧ್ಯಪ್ರವೇಶಿಸಿ ತಮ್ಮ ಬೆಂಬಲಿಗರಿಂದಾಗಿರುವ ಪ್ರಮಾದವನ್ನು ಸರಿಪಡಿಸ ಬೇಕೆಂದು ಆಗ್ರಹಿಸಿದರು.
ಇದು ಮುಸ್ಲಿಂ ಜನಾಂಗದವರೇ ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅನ್ಯಾಯ ಇದುವರೆಗೆ ಯಾವುದೇ ನಮ್ಮ ಸಮುದಾಯದಿಂದ ಆಗಿರುವ ಅನ್ಯಾಯವನ್ನು ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು ಸೇರಿ ಬಗೆಹರಿಸಿ ಕೊಡಿ  ಎಂದು ಮನವಿಮಾಡಿದರು.
ಪ್ರತಿಭಟನೆಗೆ ಎಲ್ಲಾ ಪಕ್ಷದ ರಾಜಕಾರಣಿಗಳು, ಎಲ್ಲಾ ಸಂಘಸಂಸ್ಥೆಗಳು ಬೆಂಬಲ ನೀಡಬೇಕೆಂದು ಆಗ್ರಹಿಸಿದ ಅವರು ಹಿಂದಿನ ಬಿಜೆಪಿ ಸರ್ಕಾರ ನಮಗೆ ಸಹಾಯ ಮಾಡಿಲ್ಲ. ಅಲ್ಪಸಂಖ್ಯಾತರ ಹಿತ ಕಾಯುತ್ತೇವೆನ್ನುವ ಕಾಂಗ್ರೆಸ್ ಪಕ್ಷದ ಸರ್ಕಾರವಾದರೂ ನಮ್ಮ ನೋವಿಗೆ ಸ್ಪಂದಿಸ ಬೇಕೆಂದು ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ಈದ್ಗಾ ಯುನೈಟೆಡ್ ಸಮಿತಿಯ ಪ್ರಮುಖರಾದ ಮಹಮದ್ ರಿಯಾಜ್ ಪಾಷಾ, ಮಹಮ್ಮದ್ ಯೂಸೆಫ್, ಜಾಫರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.