ಗೂಳ್ಯದಲ್ಲಿ ಮಕ್ಕಳಿಂದಲೇ ತಂದೆ ಕೊಲೆ?
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ನ.10
ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೂಳ್ಯ ಗ್ರಾಮದ ಕಾಲೋನಿ ಸಮೀಪ ಗದ್ದೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ.
ಮೃತನನ್ನು ಗೂಳ್ಯ ಕಾಲೋನಿಯ ನಿವಾಸಿ ಚಿಕ್ಕಬಂಗ್ಯಪ್ಪ(55) ಎಂದು ಗುರುತಿಸಲಾಗಿದೆ. ಘಟನೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದ್ದು ಆತನ ಮಗ ಮತ್ತು ಮಗಳೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗ್ರಾಮದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವೂ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಘಟನೆ ವಿವರ: ಚಿಕ್ಕಬಂಗ್ಯಪ್ಪ ಅವರ ಮನೆಯಲ್ಲಿ ಕಳೆದ 4-5 ದಿನಗಳಿಂದ ನಿರಂತರವಾಗಿ ಜಗಳ-ಕೌಟುಂಬಿಕ ವ್ಯಾಜ್ಯ ನಡೆಯುತ್ತಲೇ ಇತ್ತು. ಆತನ ಮಗ, ಮದುವೆಯಾಗಿದ್ದರೂ ತವರು ಮನೆಯಲ್ಲೇ ಉಳಿದುಕೊಂಡಿದ್ದ ಮಗಳು ಮತ್ತು ಮೃತ ವ್ಯಕ್ತಿಯ ನಡುವೆ ಗಂಭೀರ ಕಲಹ ನಡೆದಿದೆ. ಶನಿವಾರ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದೆ. ಚಿಕ್ಕಬಂಗ್ಯಪ್ಪನ ಮಗಳು ಶಶಿಕಲ ಮತ್ತು ಆಕೆಯ ಅಣ್ಣನ ನಡುವೆ ಮಾರಾಮಾರಿ ನಡೆದಿದೆ. ಆ ಸಮಯದಲ್ಲಿ ಈತ ಮನೆಯಿಂದ ಹೊರಗೆ ಹೋದವನು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಮನೆಗೆ ಸಮೀಪವಿರುವ ಗದ್ದೆಯೊಂದರಲ್ಲಿ ತೆಂಗಿನ ಮರವೊಂದಕ್ಕೆ ಹಗ್ಗದಿಂದ ಮೃತದೇಹವನ್ನು ಬಿಗಿಯಲಾಗಿತ್ತು ಎನ್ನಲಾಗಿದೆ.
ಮದ್ಯ ವ್ಯಸನಕ್ಕೆ ಬಲಿ: ಗ್ರಾಮಸ್ಥರು ಹೇಳುವ ಪ್ರಕಾರ ಈ ಮೂವರೂ ಮದ್ಯ ವ್ಯಸನಿಗಳಾಗಿದ್ದು ಪ್ರತಿದಿನ ಬೆಳಗಾಗುತ್ತಲೇ ಮದ್ಯಪಾನ ಮಾಡುತ್ತಿದ್ದರು. ಬೆಳಗ್ಗಿನಿಂದ ರಾತ್ರಿಯವರೆಗೆ ಅದೇ ಅವರ ಕೆಲಸವಾಗಿತ್ತು. ಶನಿವಾರ ರಾತ್ರಿ ಕೂಡ ಕಂಠಪೂರ್ತಿ ಕುಡಿದು ಜಗಳ ಮಾಡಿಕೊಂಡಿದ್ದಾರೆ. ಕುಟುಂಬದ ಯಾವುದೋ ವಿಚಾರಕ್ಕೆ ಅವರ ಮಧ್ಯೆ ವೈಮನಸ್ಯ ಬಂದಿದೆ. ಇದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನುತ್ತಾರೆ.
ತನಿಖೆ: ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶ್ರೀಧರ್, ಸಿಪಿಐ ಶಿವಾರೆಡ್ಡಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಮೇಲ್ನೋಟಕ್ಕೆ ಕೊಲೆ ಎಂದು ಕಂಡು ಬರುತ್ತಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಗೂಳ್ಯ ಕುಡುಕರ ಸ್ವರ್ಗ: ಗ್ರಾಮದ ಕೆಲ ಯುವಕರು ಮತ್ತು ಮಹಿಳೆಯರು ಆರೋಪಿಸುವಂತೆ ಗೂಳ್ಯ ಗ್ರಾಮ ಕುಡುಕರ ಸ್ವರ್ಗವಾಗಿದೆ. ದಿನನಿತ್ಯ ಇಲ್ಲಿನ ನಾಲ್ಕಾರು ಅಂಗಡಿಗಳಲ್ಲಿ ಮತ್ತು ಕೆಲ ಮನೆಗಳಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತದೆ. ದಿನಸಿ ಅಂಗಡಿಗಳಲ್ಲಿ, ಮನೆಗಳಲ್ಲಿ ಕೂಡ ಮದ್ಯ ಮಾರಾಟ ಯಾರದೇ ಭಯವಿಲ್ಲದೆ ನಡೆಯುತ್ತಿದೆ. ತಾಲೂಕಿನ ಅಬಕಾರಿ ಇಲಾಖೆ ಮತ್ತು ಆಡಳಿತ ಯಂತ್ರ ನಿಯಂತ್ರಿಸುವ ಕೆಲ ಅಧಿಕಾರಿಗಳ ಕೃಪೆಯೂ ಈ ಅಕ್ರಮ ಮದ್ಯ ಮಾರಾಟಕ್ಕೆ ಇದೆ. ಪದೇ ಪದೇ ಮನವಿ ಮಾಡಿದ್ದೇವೆ. ಲಿಖಿತವಾಗಿ ದೂರು ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಸುತ್ತಮುತ್ತಲ ಕೆಲ ಬಾರ್ ಮತ್ತು ರೆಸ್ಟೋರೆಂಟ್ಗಳಿಂದಲೇ ನೇರವಾಗಿ ಮದ್ಯದ ದಾಸ್ತಾನು ಇಲ್ಲಿನ ಅಂಗಡಿಗಳಿಗೆ ಬರುತ್ತದೆ. ಈ ಬಗ್ಗೆ ತಾಲೂಕು ಆಡಳಿತದ ಗಂಭೀರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂಬ ಆಕ್ರೋಶ ಜನರದ್ದು. ಹಲವಾರು ಮನೆಗಳಲ್ಲಿ ಕುಡುಕರು ಸೃಷ್ಟಿಸುವ ಜಗಳ-ಕಾದಾಟ ಇಲ್ಲಿ ನಿತ್ಯದ ವಿಚಾರವಾಗಿದೆ. ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಸಾಲದ್ದಕ್ಕೆ ಗ್ರಾಮದಲ್ಲಿ ಕೆಲ ಮಹಿಳೆಯರೂ ಮದ್ಯ ವ್ಯಸನ ಆರಂಭಿಸಿದ್ದಾರೆ. ಹೀಗಾಗಿ ಗ್ರಾಮದ ನೆಮ್ಮದಿ-ಶಾಂತಿ ಸಂಪೂರ್ಣವಾಗಿ ಹಾಳಾಗಿದೆ ಎನ್ನುತ್ತಾರೆ.
ಕೊಲೆ-ಸುಲಿಗೆ ಹೆಚ್ಚಳ: ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕೊಲೆ-ಸುಲಿಗೆಯಂತಹ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಗೂಳ್ಯ ಗ್ರಾಮದ ಸುತ್ತಮುತ್ತ ಕಳೆದ ಕೆಲ ವರ್ಷಗಳಿಂದೀಚೆಗೆ 4 ಕೊಲೆಗಳು ನಡೆದಿದ್ದು ಎಲ್ಲವೂ ಕುಡಿತದ ಹಿನ್ನೆಲೆಯಲ್ಲೇ ಆಗಿರುವುದು ವಿಷಾದನೀಯ ಎಂದು ಗ್ರಾಮಸ್ಥರು ದೂರುತ್ತಾರೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಕೂಡಲೇ ನಿಲ್ಲಬೇಕು. ಇದಕ್ಕೆ ಅಬಕಾರಿ ಮತ್ತು ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗುವುದಾಗಿ ತಾಲೂಕು ಪಿವಿಸಿ (ಎಸ್) ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

