ಅಕ್ರಮ ಮರಳು ದಂಧೆಗೆ ಮತ್ತೊಂದು ಜೀವ ಬಲಿ
ಕ.ಪ್ರ.ವಾರ್ತೆ ರಾಮನಗರ ನ.11
ಅಕ್ರಮ ಮರಳು ದಂಧೆಗೆ ಜಿಲ್ಲೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ತಾಲೂಕಿನ ಮೆಳೆಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಮೆಳೆಹಳ್ಳಿಯ ನಾಗರಾಜಯ್ಯ(58) ಮೃತಪಟ್ಟ ದುರ್ದೈವಿ. ಅರೇಹಳ್ಳಿಯ ಪ್ರಕಾಶ್ ಅವರಿಗೆ ತೀವ್ರ ಗಾಯಗಳಾಗಿದ್ದು ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬ ಗಾಯಾಳು ಕುಮಾರ್ ಎಂದು ತಿಳಿದುಬಂದಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಚನ್ನಪ್ಪ ಎಂಬುವರಿಗೆ ಸೇರಿದ ಕಂದಾಯ ಜಮೀನಿನಲ್ಲಿ ಸ್ಥಳೀಯ ಮರಳು ದಂಧೆಕೋರನೊಬ್ಬ ಸುಮಾರು 2 ವರ್ಷದಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದನು. ಇದರಿಂದಾಗಿ ಈ ಜಮೀನಿನಲ್ಲಿ 60 ರಿಂದ 70 ಅಡಿ ಆಳದ ಗುಂಡಿ ಬಗೆಯಲಾಗಿದೆ.
ದನ ಮೇಯಿಸಲು ಹೋಗಿದ್ದ ಮೃತ ನಾಗರಾಜಯ್ಯ ಅವರು ಸೋಮವಾರ ಮಧ್ಯಾಹ್ನ 1ರ ಸಮಯದಲ್ಲಿ ಮರಳು ತೆಗೆಯುತ್ತಿದ್ದ ಗುಂಡಿಯ ದಿಬ್ಬದ ಮೇಲೆ ಕುಳಿತಿದ್ದ ಮತ್ತಿಬ್ಬರ ಜತೆ ಕುಳಿತು ಸಮಾಲೋಚನೆ ನಡೆಸುತ್ತಿದ್ದರು. ಈ ವೇಳೆ ಹಠಾತ್ತನೆ ಇವರು ಕುಳಿತಿದ್ದ ದಿಬ್ಬ ಕುಸಿದಿದೆ.
ಸ್ಥಳದಲ್ಲೇ ಸಾವು: ಸುಮಾರು 70 ಅಡಿ ಆಳಕ್ಕೆ ಇವರು ಬಿದ್ದಿದ್ದು, ಇವರ ಮೇಲೆ ಮಣ್ಣು ಬಿದ್ದಿದೆ. ಕೂಡಲೇ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ರಕ್ಷಣೆಗೆ ಮುಂದಾಗಿದ್ದಾರೆ. ಮಣ್ಣು ತೆಗೆಯುವಾಗ ಜೆಸಿಬಿ ಯಂತ್ರಕ್ಕೆ ಸಿಲುಕಿದ ನಾಗರಾಜಯ್ಯ ಅವರ ಮರ್ಮಾಂಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅರೇಹಳ್ಳಿಯ ಪ್ರಕಾಶ್ ಎಂಬುವರಿಗೂ ಜೆಸಿಬಿ ಯಂತ್ರದಿಂದ ತಲೆಗೆ ಮತ್ತು ದೇಹದ ಇತರೆಡೆಗೆ ಮಾರಣಾಂತಿಕ ಗಾಯಗಳಾಗಿವೆ. ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆಂದು ಶಸ್ತ್ರ ಚಿಕಿತ್ಸೆ ನಡೆಸಿದ ಆಸ್ಪತ್ರೆಯ ವೈದ್ಯ ಡಾ.ವೆಂಕಟ್ ತಿಳಿಸಿದ್ದಾರೆ.
ಮತ್ತೊಬ್ಬ ಗಾಯಾಳು ಕುಮಾರ್ ಎಂಬುವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಘಟನೆ ಸಂಬಂಧ ತಡರಾತ್ರಿವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ದಂಧೆಗೆ ಪದೇ ಪದೇ ಹಲವಾರು ಜೀವಗಳು ಬಲಿಯಾಗಿವೆ. ಆದರೆ, ಜಿಲ್ಲಾಡಳಿತ ಈ ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.
ಹಾಗೊಮ್ಮೆ ಈಗೊಮ್ಮೆ ದಾಳಿ ಮಾಡಿ ಕಣ್ಣೊರೆಸುವ ತಂತ್ರವನ್ನು ಜಿಲ್ಲಾಡಳಿತ ಮಾಡುತ್ತಿದೆಯಾದರೂ ಅಕ್ರಮ ದಂಧೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಲೇ ಬಂದಿದೆ. ಅಧಿಕಾರಿಗಳ ಲಂಚ ದಾಹವೇ ದಂಧೆ ವ್ಯಾಪಕವಾಗಿ ಮುಂದುವರಿಯಲು ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

