ಚನ್ನಪಟ್ಟಣ: ಈಜಲು ತೆರಳಿದ್ದ ಸಹೋದರರು ನೀರುಪಾಲು
ಚನ್ನಪಟ್ಟಣ : ಈಜಲು ತೆರಳಿದ್ದ ಸಹೋದರರು ನೀರು ಪಾಲಾಗಿರುವ ಘಟನೆ ತಾಲೂಕಿನ ರಾಂಪುರ ಬಳಿಯ ತಾವರೆಕರೆಯಲ್ಲಿ ನಡೆದಿದೆ.
ಸೈಯದ್ ತಬ್ರೇಜ್(14), ಸೈಯದ್ ಇಮ್ರಾನ್ (10) ಮೃತಪಟ್ಟ ಸಹೋದರರು. ಟಿಪ್ಪುನಗರದ ನಯಾಜ್ ಎಂಬುವರ ಮಕ್ಕಳಾದ ಈ ಇಬ್ಬರೂ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದರು. ಈ ಸಮಯದಲ್ಲಿ ಕೆರೆಯಲ್ಲಿದ್ದ ಆಳದ ಗುಂಡಿಯಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿದ್ದಾರೆ.
ಇಬ್ಬರೂ ಮಕ್ಕಳು ಮನೆಗೆ ಬಾರದಿದ್ದರಿಂದ ಹುಡುಕಾಟ ನಡೆಸಿದನಯಾಜ್ ಕುಟುಂಬದವರಿಗೆ ಸೋಮವಾರ ಬೆಳಗ್ಗೆ ಇಬ್ಬರೂ ಕೆರೆಗೆ ಈಜಲು ತೆರಳಿದ್ದ ಸಂಗತಿ ತಿಳಿದುಬಂದಿದ್ದು, ಇವರೊಂದಿಗೆ ತೆರಳಿದ್ದ ಬಾಲಕರನ್ನು ವಿಚಾರಿಸಿದಾಗ ಮುಳುಗಿ ಸತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಮೃತ ಸಹೋದರರ ಜತೆ ಈಜಲು ಬಂದಿದ್ದವರು ಈ ಇಬ್ಬರೂ ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಭಯದಿಂದ ಅವರ ಮನೆಯವರಿಗೂ ಹೇಳದೆ ಸುಮ್ಮನಾಗಿದ್ದಾರೆ. ಬೆಳಿಗ್ಗೆ ವಿಚಾರ ಹೊರಬರುತ್ತಿದ್ದಂತೆಯೇ ಈಜಲು ಹೋಗಿದ್ದ ವಿಚಾರವನ್ನು ತಿಳಿಸಿ, ಮೃತಪಟ್ಟ ಸ್ಥಳವನ್ನು ಗುರುತಿಸಿದ ನಂತರ ಶವಗಳನ್ನು ಹೊರಕ್ಕೆ ತೆಗೆಯಲಾಯಿತು. ಇದಕ್ಕೂ ಮುನ್ನ ಶವಗಳಿಗಾಗಿ ಇಡೀ ಕೆರೆಯನ್ನು ಸ್ಥಳೀಯ ಯುವಕರು ಹುಡುಕಾಡಿ ಶವಗಳು ಸಿಗದೆ ಸುಮ್ಮನಾಗಿದ್ದರು. ಆನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಮ್ಮ ಆಯುಧಗಳ ನೆರವಿನಿಂದ ಸ್ಥಳೀಯರಿಂದಲೇ ಶವಗಳನ್ನು ಹೊರಗೆ ತೆಗೆಸುವಲ್ಲಿ ಯಶಸ್ವಿಯಾದರು.
ರೇಲ್ವೆ ಹಳಿ ನಿರ್ಮಾಣಕ್ಕೆ ತೆಗೆದ ಗುಂಡಿ: ಬೆಂಗಳೂರು ಮೈಸೂರು ರೈಲ್ವೆ ಮಾರ್ಗದಲ್ಲಿ ದ್ವಿಪಥ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೆರೆಯಲ್ಲಿನ ಮಣ್ಣು ತೆಗೆದು ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಮಣ್ಣು ತೆಗೆಯುವಾಗ ಸಮಾನಾಂತರವಾಗಿ ತೆಗೆಯದೆ 25-30 ಅಡಿ ಗುಂಡಿ ತೆಗೆದು ಆನಂತರ ಮುಚ್ಚದೆ ಹಾಗೆಯೇ ಬಿಟ್ಟು ಹೋಗಿರುವುದು ಘಟನೆ ನಡೆಯಲು ಪ್ರಮುಖ ಕಾರಣವಾಗಿದೆ. ಘಟನಾ ಸ್ಥಳದಲ್ಲಿ ಮೃತ ಬಾಲಕರ ಪೋಷಕರು ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಶವಗಳನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಕುಟುಂಬದ ವಶಕ್ಕೆ ಒಪ್ಪಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

