ಕಡಿಮೆ ನೀರು ಬಳಸಿ ಅಧಿಕ ಇಳುವರಿಯ ಬತ್ತ
ಕ.ಪ್ರ.ವಾರ್ತೆ , ರಾಮನಗರ , ನ.13
ಕಡಿಮೆ ನೀರು ಬಳಸಿಕೊಂಡು ಅಧಿಕ ಇಳುವರಿ ಪಡೆಯಬಹುದಾದ ಬತ್ತದ ತಳಿಯನ್ನು ಕೃಷಿ ವಿಜ್ಞಾನಿಗಳು ಆವಿಷ್ಕಾರಗೊಳಿಸಿದ್ದು, ಈ ತಳಿಯನ್ನು ಬಯಲುಸೀಮೆ ಪ್ರದೇಶದಲ್ಲೂ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಾರಾಯಣಗೌಡ ತಿಳಿಸಿದರು.
ತಾಲೂಕಿನ ಬಿಡದಿ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ರೈತ ರಂಗೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ನೂತನ ಆವಿಷ್ಕಾರದ ಅನಘ ಬತ್ತದ ತಳಿಯ ಕ್ಷೇತ್ರ ವೀಕ್ಷಣೆ ನಂತರ ಮಾತನಾಡಿದ ಅವರು, ಮಳೆ ಪ್ರಮಾಣದ ಕುಸಿತದ ನಡುವೆಯೂ ಕ್ಷಿಪ್ರ ಗತಿಯಲ್ಲಿ ಹೆಚ್ಚಳವಾಗುತ್ತಿರುವ ಜನಸಂಖ್ಯೆಗೆ ಅಗತ್ಯ ಆಹಾರ ಪೂರೈಸುವ ನಿಟ್ಟಿನಲ್ಲಿ ಇಂತಹ ತಳಿ ಶೋಧನೆ ಅತ್ಯವಶ್ಯಕ ಎಂದರು.
ಕೃಷಿಗೆ ಆಕರ್ಷಣೆ ಅಗತ್ಯ: ಮಳೆ ಕೊರತೆ, ಕಡಿಮೆ ದರ್ಜೆ ಬಿತ್ತನೆ ಬೀಜ, ಹೆಚ್ಚುತ್ತಿರುವ ರೋಗ-ರುಜಿನಗಳಿಂದ ಕೃಷಿಯನ್ನೇ ನಂಬಿರುವ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿಸಿದರೆ ಮಾತ್ರ ಯುವಕರು ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ರೈತನನ್ನು ಕೀಳು ಭಾವನೆಯಿಂದ ಕಾಣಲಾಗುತ್ತಿದೆ. ರೈತನಿಗೆ ಹೆಣ್ಣು ನೀಡಲು ಸಹ ಮುಂದೆ ಬರುತ್ತಿಲ್ಲ. ಇದರಿಂದ ಎಷ್ಟೋ ಮಂದಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯನ್ನು ಲಾಭದಾಯಕವಾಗಿಸುವುರಿಂದಷ್ಟೇ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಅನಘ ತಳಿಗೆ ಉತ್ತೇಜನ: ರಾಜ್ಯದ 15 ಜಿಲ್ಲೆಗಳು ಬಯಲು ಸೀಮೆ ಪ್ರದೇಶವಾಗಿದ್ದು, ಇಲ್ಲಿನ ಜನರು ಕೃಷಿಗೆ ಮಳೆಯನ್ನೇ ಆಶ್ರಯಿಸಿದ್ದಾರೆ. ಈ ಬಯಲು ಪ್ರದೇಶದಲ್ಲಿ ಅನಘ ತಳಿ ಬತ್ತವನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು. ರೈತರು ಅನಘ ತಳಿಯನ್ನು ಬೆಳೆದು ಕಡಿಮೆ ನೀರು ಹಾಗೂ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಎಂದರು.
ಜಿಕೆವಿಕೆ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ಈಗಾಗಲೇ ಪೂರೈಸಲಾಗುತ್ತಿದೆ. ಈ ಜತೆಗೆ ರೈತರಿಗೆ ಕಾಲ ಕಾಲಕ್ಕೆ ಅಗತ್ಯ ಮಾಹಿತಿಯನ್ನು ವಿಜ್ಞಾನಿಗಳೇ ನೀಡುವರು. ಇಚ್ಛೆಯುಳ್ಳ ರೈತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಬೆಳೆದು ತಿಂದರೆ ಸಂತೋಷ: ಕೊಂಡು ತಿನ್ನುವುದಕ್ಕಿಂತ ಬೆಳೆದು ತಿನ್ನುವುದರಲ್ಲಿ ಹೆಚ್ಚು ಸಂತೋಷ ಕಾಣಬಹುದು. ರೈತರೇ ಕೊಂಡು ತಿನ್ನುವ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ರೈತರು ಬಯಲು ಪ್ರದೇಶದಲ್ಲೂ ಕೂಡ ಬತ್ತ ಬೆಳೆಯಲು ಮುಂದಾಗಬೇಕು. ಹೆಚ್ಚು ಇಳುವರಿ ಪಡೆಯುವ ಪ್ರತಿ ಜಿಲ್ಲೆಯ ಒಬ್ಬ ರೈತನಿಗೆ ಕಿಸಾನ್ ಕ್ರಾಫ್ಟ್ ಕಂಪೆನಿ ವತಿಯಿಂದ ಯಂತ್ರೋಪಕರಣಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ನಾರಾಯಣಗೌಡ ಹೇಳಿದರು.
10 ಎಕರೆಯಲ್ಲಿ ಬೆಳೆಯಬಹುದು: ಸಾಂಪ್ರದಾಯಿಕ ಪದ್ಧತಿಯಲ್ಲಿ 2 ಎಕರೆಗೆ ಬೇಕಾದಷ್ಟು ನೀರನಲ್ಲಿ ಹೊಸ ಪದ್ಧತಿಯಲ್ಲಿ 10 ಎಕರೆಯಲ್ಲಿ ಬೆಳೆಯಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುತ್ತದೆ. ಬೆಳೆಗೆ ಯಾವುದೇ ರೋಗ ಬರುವುದಿಲ್ಲ. ನಾನು ಒಂದು ಬಾರಿಯೂ ಔಷಧ ಸಿಂಪಡಿಸಿಲ್ಲ. ನಿರೀಕ್ಷೆಗೂ ಮೀರಿ ಹೆಚ್ಚು ಇಳುವರಿ ಬಂದಿದೆ ಎಂದು ರೈತ ರಂಗೇಗೌಡ ಅನಿಸಿಕೆ ಹಂಚಿಕೊಂಡರು.
ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದಿಂದ ಬಂದಿದ್ದ 50ಕ್ಕೂ ಹೆಚ್ಚು ರೈತರು ಕ್ಷೇತ್ರ ವೀಕ್ಷಣೆ ಮಾಡಿದರು. ರೈತರ ರಂಗೇಗೌಡ ಅವರಿಗೆ ಕಿಸಾನ್ ಕ್ರಾಫ್ಟ್ ಕಂಪೆನಿ ವೀಡ್ ಕಟರ್ ಯಂತ್ರವನ್ನು ಬಹುಮಾನ ನೀಡಲಾಯಿತು.
ಜಿಕೆವಿಕೆ ಕೃಷಿ ವಿಜ್ಞಾನಿ ಶಶಿಧರ್, ಕಿಸಾನ್ ಕ್ರಾಫ್ಟ್ ಕಂಪೆನಿ ಮುಖ್ಯಸ್ಥ ರವೀಂದ್ರ ಅಗರ್ವಾಲ್, ಸಂಶೋಧನಾ ವಿದ್ಯಾರ್ಥಿಗಳಾದ ಸುಮಾ, ರಮ್ಯ, ಪವನ್, ಕೃಷ್ಣಮೂರ್ತಿ, ಸುಶ್ಮಿತಾ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

