ಬೆಂಗಳೂರು ಗ್ರಾಮಾಂತರ

ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳಿಸಿ: ಗೋಪಿ

Published On :

ಆನೇಕಲ್ಲು: ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸರ್ವ ಶಿಕ್ಷ ಅಭಿಯಾನ ಹಾಗೂ ಸಾಶಿಇ ಮೂಲಕ ಮಕ್ಕಳ ಶಿಕ್ಷಣ ಹಕ್ಕನ್ನು ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ವಿವಿಧ ಕಾರಣಗಳಿಗೆ ಶಾಲೆ ಬಿಟ್ಟ ಮಕ್ಕಳು ಕಂಡು ಬಂದಲ್ಲಿ ವಿದ್ಯಾರ್ಥಿ ಹಾಗೂ ಪೋಷಕರ ಮನವೊಲಿಸಿ ಶಾಲೆಗೆ ಮರು ದಾಖಲು ಮಾಡಿಸಲು ಸಹಕಾರ ನೀಡಬೇಕೆಂದು ಅತ್ತಿಬೆಲೆ ಜಿಲ್ಲಾ ಪಂಚಾಯ್ತಿ ಸದಸ್ಯ ಗೋಪಾಲಕೃಷ್ಣ ಅ. ಗೋಪಿ ಮನವಿ ಮಾಡಿದ್ದಾರೆ. ಅವರು ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹಾಗೂ ಕುಟುಂಬ ಕಾರಣಗಳಿಗಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಕೆಲವೆಡೆ ಗಂಡು ಮಕ್ಕಳೂ ಸಹಾ ಶಾಲೆ ಬಿಟ್ಟ ನಿರ್ದಶನ ಕಂಡು ಬಂದಿದೆ. ಚುನಾಯಿತು ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ಶಾಲೆ ಬಿಟ್ಟ ಮಕ್ಕಳು ಕಂಡು ಬಂದಲ್ಲಿ ಸ್ಥಳೀಯ ಶಾಲೆಯ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು. ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಶಿಕ್ಷಣ ಹಕ್ಕಿನ ಬಗ್ಗೆ ಚರ್ಚೆ ನಡೆದು ಮಕ್ಕಳನ್ನು ಶಾಲೆಗೆ ಕಳಿಸದಿದ್ದಲ್ಲಿ ಪೋಷಕರು ಕಾನೂನು ವ್ಯಾಪ್ತಿಗೆ ಬರುತ್ತಾರೆ. ಮಕ್ಕಳನ್ನು ಹೊಟೇಲ್, ಇಟ್ಟಿಗೆ ಕಾರ್ಖಾನೆ, ಬಸ್ ಹಾಗೂ ಖಾಸಗೀ ವಾಹನದಲ್ಲಿ ಕೆಲಸಕ್ಕೆ ಸೇರಿಸುವ ಪರಿಪಾಟಲಿದ್ದು ಜನಪ್ರತಿನಿಧಿಗಳು ಈ ಬಗ್ಗೆ ಸ್ಥಳೀಯ ಪೊಲೀಸರ ಸಹಕಾರ ಪಡೆದು ಮಾಹಿತಿ ನೀಡಬಹುದು. ಬಾಲ್ಯ ವಿವಾಹ ಸಹ ಕಾನೂನು ಪ್ರಕಾರ ಅಪರಾಧವಾಗಿದ್ದು ಪೋಷಕರು ಎಚ್ಚರಿಕೆಯಿಂದಿರಬೇಕೆಂದರು. ಬಿಇಒ ಶೇಖರಪ್ಪ ಮಾಹಿತಿ ನೀಡಿ ತಾಲೂಕಿನಲ್ಲಿ 350 ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. 541 ತಂಡಗಳಲ್ಲಿ 962 ಮಂದಿ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ನ.17ಕ್ಕೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಮುನಿವೆಂಕಟ ರಾಮಾಚಾರಿ, ಸಿಆರ್‌ಪಿ ನಾಗರಾಜು, ಮುಖ್ಯೋಪಾಧ್ಯಾಯ ಮುನಿಹನುಮಯ್ಯ ಕುಟುಂಬ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಕಣ್ವ ಏತ ನೀರಾವರಿ ಯೋಜನೆ ಕಾಮಗಾರಿಗೆ ಶಾಸಕರ ಚಾಲನೆ
ಚನ್ನಪಟ್ಟಣ: 
ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಪ್ರಾರಂಭಿಸಲಾಗಿರುವ 220 ಕೋಟಿ ರು.ವೆಚ್ಚದ ಕಣ್ವ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಟ್ರಂಚ್ ವರ್ಕ್‌ಗೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ತಾಲೂಕಿನ ಮತ್ತಿಕೆರೆಯಲ್ಲಿ ಪೈಪ್‌ಲೈನ್ ಹಾದು ಹೋಗುವ ಮಾರ್ಗದಲ್ಲಿನ ರೈತರ ಮನವೊಲಿಸಿ ಇಲ್ಲಿ ರೇಲ್ವೆ ಬ್ರಾಡ್‌ಗೇಜ್ ಕಾಮಗಾರಿ ಪ್ರಗತಿಯಲ್ಲಿದ್ದು ನಾವೂ ಕಾಮಗಾರಿ ವಿಳಂಬ ಮಾಡಿದರೆ ಕಣ್ವ ಏತ ನೀರಾವರಿ ಯೋಜನೆಗೆ ಮತ್ತಷ್ಟು ತೊಂದರೆಯಾಗಲಿದ್ದು ಹಾಗಾಗಿ ಯಾವ ರೈತರು ಇದಕ್ಕೆ ಅನಗತ್ಯ ತಡೆ ಒಡ್ಡಬಾರದೆಂದು ಇದೇ ವೇಳೆ ರೈತರಲ್ಲಿ ಮನವಿ ಮಾಡಿಕೊಂಡರು. ಕಣ್ವ ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು ಆದಷ್ಟು ಬೇಗ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಬರುವ ಮೂಲಕ ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಲಿದೆ. ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ  ಮುದುಗೆರೆ ಸುರೇಶ್, ಸಿದ್ದರಾಮು, ಡೈರಿಕೃಷ್ಣ  ಸೇರಿದಂತೆ ಹಲವರು ಹಾಜರಿದ್ದರು.

ಭಕ್ತನಪಾಳ್ಯದ ಬಿ.ಎಸ್.ಲೋಕೇಶ ಅಧ್ಯಕ್ಷ
ನೆಲಮಂಗಲ:
ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ನೆಲಮಂಗಲ ತಾಲೂಕು ಅಧ್ಯಕ್ಷರನ್ನಾಗಿ ಭಕ್ತನಪಾಳ್ಯದ ಬಿ.ಎಸ್.ಲೋಕೇಶ ಅವರನ್ನು ರಾಜ್ಯಾಧ್ಯಕ್ಷರಾದ ಬಿ.ಎಂ.ಪಾಟೀಲ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.