ಬೆಂಗಳೂರು ಗ್ರಾಮಾಂತರ

ಮಲಹೊರುವ ಪದ್ಧತಿ ನಿರ್ಮೂಲನೆಗೆ ಕ್ರಮ

Published On :

ಕ.ಪ್ರ.ವಾರ್ತೆ ,  ರಾಮನಗರ ,  ನ.15
ಕೇಂದ್ರ ಸರ್ಕಾರವು ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗೆ ರು.6600 ಕೋಟಿ ಮೀಸಲಿಟ್ಟಿದ್ದು, ಅನಿಷ್ಠ ಮಲಹೊರುವ ಪದ್ಧತಿ ನಿರ್ಮೂಲನೆಗೂ ಕಠಿಣ ಕ್ರಮ ಕೈಗೊಂಡಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.
ಮಲ ಹೊರುವ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಮಂಡಿಸಲಾದ ಪೌರ ಕಾರ್ಮಿಕ ಕಾಯ್ದೆಯು ಸಂಸತ್ತಿನಲ್ಲಿ ಈಗಾಗಲೇ ಅಂಗೀಕಾರಗೊಂಡಿದ್ದು, ಡಿಸೆಂಬರ್ 6ರಿಂದಲೇ ಜಾರಿಯಾಗಲಿದೆ ಎಂದು ಅವರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೈಲು ಶಿಕ್ಷೆ: ನಮ್ಮಲ್ಲಿನ್ನೂ ಮಲ ಹೊರುವ ಪದ್ಧತಿ ಉಳಿದಿದೆ. ಅದನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕಾಯ್ದೆ ಜಾರಿಗೊಳಿಸಿದ್ದು, ಮಲ ಹೊರುವ ಕೆಲಸಕ್ಕೆ ಪ್ರೋತ್ಸಾಹಿಸಿದವರಿಗೆ 1 ವರ್ಷ ಜೈಲು ಶಿಕ್ಷೆ ಜತೆಗೆ ರು.1 ರಿಂದ 5 ಲಕ್ಷದವರೆಗೆ ದಂಡ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಹಣದಾಸೆಗೆ ಬಿದ್ದು ಮಲ ಹೊರುವ ಸಫಾಯಿ ಕರ್ಮಚಾರಿಗಳಿಗೆ ಒಂದು ಬಾರಿ ಎಚ್ಚರಿಕೆ ನೀಡಿ, ಪುನರ್ವಸತಿ ಕಲ್ಪಿಸಲಾಗುವುದು. ಆದಾಗ್ಯೂ ಮಲ ಹೊರುವ ಕೆಲಸದಲ್ಲಿ ತೊಡಗಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಚಿಂತನೆ ನಡೆಯುತ್ತಿದೆ ಎಂದು ಶಿವಣ್ಣ ಹೇಳಿದರು.
ಕ್ರಮ ಜಾರಿಗೆ ಸೂಚನೆ: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ್ನೂ ಮಲ ಹೊರುವ ಅನಿಷ್ಠ ಪದ್ಧತಿ ನಡೆಯುತ್ತಿರುವುದು ಮಾಧ್ಯಮಗಳಿಂದ ಬಯಲಾಗಿದೆ. ಅದಕ್ಕೆ ಕಾರಣವಾದ ಅಧಿಕಾರಿಗಳನ್ನು ತಕ್ಷಣವೇ ಅಮಾನತುಪಡಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.   
ದೇಶದ ಎಲ್ಲ ರಾಜ್ಯಗಳಲ್ಲೂ ಸಫಾಯಿ ಕರ್ಮಚಾರಿ ಆಯೋಗದ ಕಚೇರಿ ತೆರೆದು, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಅಂತೆಯೇ ಎಲ್ಲ ಕಡೆ ಅನಿಷ್ಠ ಮಲ ಹೊರುವ ಪದ್ಧತಿ ಹಾಗೂ ಸಫಾಯಿ ಕರ್ಮಚಾರಿಗಳ ಶೋಷಣೆ ವಿರುದ್ಧ ತೀವ್ರ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಯಂತ್ರ ಖರೀದಿಗೆ ಸೂಚನೆ: ಚರಡಿ, ಒಳ ಚರಂಡಿಗಳನ್ನು ಶುಚಿಗೊಳಿಸುವುದಕ್ಕೆ ಯಾವ ಕಾರಣಕ್ಕೂ ಸಫಾಯಿ ಕರ್ಮಚಾರಿಗಳ ಬಳಕೆ ಕೂಡದು. ಇನ್ನು ಮುಂದೆ ಯಂತ್ರಗಳ ಮೂಲಕವೇ ಶುಚಿ ಕಾರ್ಯ ನಡೆಯಬೇಕು. ಅದಕ್ಕೆ  ಅಗತ್ಯವಿರುವ ಸಕ್ಕಿಂಗ್ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳುವಂತೆ ಎಲ್ಲ ಪೌರ ಸಂಸ್ಥೆಗಳು ಮತ್ತು ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.   ಅಧಿಕಾರ ವಹಿಸಿಕೊಂಡ ನಂತರ ತಾವಾಗಲೇ ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸಿರುವೆ. ಈ ವರ್ಗದ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಅಧಿಕಾರಿಗಳ ಜತೆಗೂಡಿ ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಲಾಗುವುದು ಎಂದರು.  
ರಾಜ್ಯದಲ್ಲೂ ಕಾಯಂ ಚಿಂತನೆ: ಹರಿಯಾಣದಲ್ಲಿ 8 ಸಾವಿರ ಗುತ್ತಿಗೆ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ, ವೇತನ ಹೆಚ್ಚಳ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಸೇವೆ ಕಾಯಂ ಮತ್ತು ವೇತನ ಪರಿಷ್ಕರಣೆಗೆ ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸುತ್ತಿದ್ದಾರೆ. ಶೀಘ್ರವೇ ರಾಜ್ಯದಲ್ಲೂ ಗುತ್ತಿಗೆ ಪೌರ ಕಾರ್ಮಿಕರ ಬಹು ದಿನಗಳ ಬೇಡಿಕೆ ಈಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳು ಅಹವಾಲು ಸಲ್ಲಿಸಿದರು. ಕೆಪಿಸಿಸಿ ಸದಸ್ಯ ಕೆ.ರಮೇಶ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ವೆಂಕಟಸ್ವಾಮಿ, ನಗರಸಭೆ ಸದಸ್ಯ ಪಿ.ರವಿಕುಮಾರ್, ಮಾಜಿ ಸದಸ್ಯ ಶಿವಕುಮಾರಸ್ವಾಮಿ, ಶಿವಶಂಕರ್, ಪೌರ ಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳಾದ ಲಿಂಗರಾಜು, ಕಿಟ್ಟಿ, ಬಸವರಾಜು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.