ಸಂಭ್ರಮದ ಶ್ರೀರಾಮಲಿಂಗೇಶ್ವರ ಬ್ರಹ್ಮರಥೋತ್ಸವ
ಕ.ಪ್ರ. ವಾರ್ತೆ , ದೊಡ್ಡಬಳ್ಳಾಪುರ , ನ.17
ಇಲ್ಲಿನ ಸುಪ್ರಸಿದ್ಧ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಗಿರಿಜಾ ರಾಮಲಿಂಗೇಶ್ವರಸ್ವಾಮಿಯವರ 8ನೇ ಬ್ರಹ್ಮರಥೋತ್ಸವ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀರಥಕ್ಕೆ ಹಣ್ಣು-ಧವನ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆದರು.
ದೊಡ್ಡಬಳ್ಳಾಪುರದ ಪುರಾತನ ದೇಗುಲಗಳಲ್ಲಿ ಒಂದಾಗಿ ಶ್ರೀ ಚೌಡೇಶ್ವರಿ ದೇವಾಲಯ ಶತಮಾನದ ಪರಂಪರೆ ಹೊಂದಿದೆ. ದೇವಾಂಗ ಮಂಡಲಿ ಮತ್ತು ತಿಪ್ಪೂರು ಪದ್ಮಾ ಗೋಪಾಲಕೃಷ್ಣ ಕುಟುಂಬದ ಸಹಯೋಗದಲ್ಲಿ ಪ್ರತಿವರ್ಷ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.
ಶಕ್ತಿದೇವತೆಯ ಆರಾಧನಾ ನೆಲೆಯಾಗಿ ಹೆಸರುಗಳಿಸಿರುವ ದೇವಾಲಯದಲ್ಲಿ ಶ್ರೀಚೌಡೇಶ್ವರಿ, ರಾಮಲಿಂಗಚಂದ್ರ, ಪಾರ್ವತಿ ದೇವಿಯರ ಮುಖ್ಯಪ್ರಾಣ ದೇವರುಗಳಿವೆ. ಜೊತೆಗೆ ಶ್ರೀಶಾರದಾ ಮಾತೆ, ದೇವರ ದಾಸಿಮಯ್ಯ, ಷಣ್ಮುಖ ಸ್ವಾಮಿ ಗುಡಿಗಳೂ ಭಕ್ತರನ್ನು ಸೆಳೆಯುತ್ತವೆ. ಆಕರ್ಷಕ ರಾಜಗೋಪುರ ಮತ್ತು ನವರಂಗ ಹೊಂದಿ ವಿಶಿಷ್ಟ ರೀತಿಯಲ್ಲಿ ಕಟ್ಟಲ್ಪಟ್ಟಿರುವ ಈ ದೇವಾಲಯದ ಇತಿಹಾಸದ ಕುರಿತು ಸ್ಪಷ್ಟ ಮಾಹಿತಿ ಅಲಭ್ಯ. ಆದರೆ ಪುರಾತನ ಕಾಲದ ದೇಗುಲವಾಗಿ ಪರಂಪರಾಗತವಾಗಿ ಪೂಜಾ ಕಾರ್ಯಕ್ರಮಗಳು ನೆರವೇರುತ್ತಾ ಬರುತ್ತಿವೆ.
ನಂದಾದೀಪ: ರಥೋತ್ಸವದ ಸಂದರ್ಭದಲ್ಲೇ ದೇವಾಲಯದಲ್ಲಿ ನಂದಾದೀಪ ಪ್ರತಿಷ್ಠಾಪನೆ ಮಾಡಲಾಯಿತು. ದಿನದ 24 ಗಂಟೆಯೂ ಆರದೆ ಉರಿಯುವ ನಂದಾದೀವಿಗೆಯನ್ನು ಮಂಡಲಿ ಅಧ್ಯಕ್ಷರು-ಪದಾಧಿಕಾರಿಗಳು ಮತ್ತು ದೇಗುಲದ ಪ್ರಧಾನ ಅರ್ಚಕರು ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವಿವಿಧ ಕಾರ್ಯಕ್ರಮ: ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ ಶ್ರೀರಾಮಲಿಂಗ ಚಂದ್ರ ಗಿರಿಜಾ ಮಾತೆ ಕಲ್ಯಾಣೋತ್ಸವ, ಉಯ್ಯಾಲೋತ್ಸವ, ಹೋಮ, ಧಾರ್ಮಿಕ ಕಾರ್ಯಕ್ರಮಗಳು, ಶಯನೋತ್ಸವ, ಪೂರ್ಣಾಹುತಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯದ ಮುಂಭಾಗದಿಂದ ಮಾರುಕಟ್ಟೆ ರಸ್ತೆವರೆಗೆ ಬ್ರಹ್ಮರಥ ಸಾಗಿ ಹಿಂತಿರುಗಿತು. ಇಕ್ಕೆಲಗಳಲ್ಲಿ ಭಕ್ತಾದಿಗಳು ನಿಂತು ದರ್ಶನ ಪಡೆದರು.
ಅರವಂಟಿಕೆ: ಶ್ರೀಗಿರಿಜಾ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಸಿನಿಮಾ ರಸ್ತೆ ಗೆಳೆಯರ ಬಳಗದ ನೇತೃತ್ವದಲ್ಲಿ ಅರವಂಟಿಕೆ ಏರ್ಪಡಿಸಲಾಗಿತ್ತು.
ನೂರಾರು ಭಕ್ತಾದಿಗಳಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಅದೇ ರೀತಿ ಹಲವೆಡೆ ಅರಂವಟಿಕೆ ಮತ್ತು ಪೂಜಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

