ದೊಡ್ಡಬಳ್ಳಾಪುರದಲ್ಲಿ ತೀವ್ರಗೊಂಡ ಜಿಲ್ಲಾ ಕೇಂದ್ರ ಹೋರಾಟ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ಘೋಷಿಸಲು ಮತ್ತು ಉಪ ವಿಭಾಗ ಕೇಂದ್ರವನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.
ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವು ಸಂಘಟನೆಗಳ ಮುಖಂಡರು ಮಾತನಾಡಿದರು. ಇಲ್ಲಿನ ಜನರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೋರಾಟ ತಾರಕಕ್ಕೇರಿದ್ದ ಸಂದರ್ಭದಲ್ಲಿ ಅಧಿಕಾರಿಗಳ ಹಂತದಲ್ಲಿ ನಡೆದ ಸಭೆ ಮತ್ತು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ಕಾರ ಶೀಘ್ರದಲ್ಲೇ ದೊಡ್ಡಬಳ್ಳಾಪುರದ ಜನರ ಆಶೋತ್ತರಗಳನ್ನು ಈಡೇರಿಸುವ ಭರವಸೆ ದೊರೆತಿತ್ತು. ಉಪ ವಿಭಾಗ ಕೇಂದ್ರ ವರ್ಗಾಯಿಸದ ಹೊರತು ದೊಡ್ಡಬಳ್ಳಾಪುರದಲ್ಲಿ ಉಪ ವಿಭಾಗಾಧಿಕಾರಿಗಳು ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಮಾಡಲು ಬಿಡುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಕೆ ಕೊಟ್ಟ ಸಂದರ್ಭದಲ್ಲಿ ಶೀಘ್ರವೇ ಬೇಡಿಕೆಗೆ ಸ್ಪಂದಿಸುತ್ತೇವೆ. ಧ್ವಜಾರೋಹಣಕ್ಕೆ ಅವಕಾಶ ಕೊಡಿ ಎಂಬ ನಿಲುವು ಮುಂದಿಟ್ಟಿದ್ದ ಸರ್ಕಾರ ತದ ನಂತರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಹೇಳಿರುವಂತೆ, ಈಗಾಗಲೇ ಜಿಲ್ಲಾ ಕೇಂದ್ರದ ಘೋಷಣೆ ಕುರಿತಂತೆ ಸಮಗ್ರ ಅರ್ಹತೆಗಳು ಮತ್ತು ನ್ಯಾಯಬದ್ಧ ಆಲೋಚನೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ದೊಡ್ಡಬಳ್ಳಾಪುರ ಮತ್ತು ಇತರ ತಾಲೂಕುಗಳ ವಿಸ್ತೀರ್ಣ, ಜನಸಂಖ್ಯೆ, ಕಂದಾಯ ಸಂಗ್ರಹ, ಹೆದ್ದಾರಿ, ಶಿಕ್ಷಣ, ಸಾಮಾಜಿಕ ಸ್ಥಿತಿಗತಿ, ಆರ್ಥಿಕ ಸ್ಥಿತಿಗತಿ, ಉದ್ಯೋಗಾವಕಾಶಗಳ ಲಭ್ಯತೆ, ಸಂಪರ್ಕ, ಪಂಚಾಯತ್ರಾಜ್ ವ್ಯವಸ್ಥೆ, ಉಪ ವಿಭಾಗ, ನಗರಸಭಾ ಕೇಂದ್ರ ಸೇರಿದಂತೆ ಅಂಕಿ-ಅಂಶಗಳು ಮತ್ತು ಇತಿಹಾಸ ದೊಡ್ಡಬಳ್ಳಾಪುರವನ್ನೇ ಜಿಲ್ಲಾ ಕೇಂದ್ರ ಮಾಡಬೇಕು ಎಂಬುದು ನ್ಯಾಯಬದ್ಧ ಬೇಡಿಕೆ ಎಂದರು.
ಹಿಂದೆಯೇ ಆಗಬೇಕಿತ್ತು: 2008ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲಾ ಕೇಂದ್ರದ ಘೋಷಣೆಯಾದ ವೇಳೆಯೇ ದೊಡ್ಡಬಳ್ಳಾಪುರನ್ನೂ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿತ್ತು. ಆಗ ಇದ್ದ 2 ಉಪ ವಿಭಾಗಗಳಲ್ಲಿ ರಾಮನಗರವನ್ನು ಜಿಲ್ಲೆ ಮಾಡಿ ದೊಡ್ಡಬಳ್ಳಾಪುರಕ್ಕೆ ವಂಚಿಸಲಾಯಿತು. ಇಡೀ ರಾಜ್ಯದಲ್ಲೇ ಜಿಲ್ಲಾ ವ್ಯಾಪ್ತಿಯ ಹೊರಗೆ ಕೇಂದ್ರ ಕಚೇರಿ ಕಾರ್ಯ ನಿರ್ವಹಣೆ ಮಾಡುತ್ತಿರುವ ನತದೃಷ್ಟ ಜಿಲ್ಲೆ ಎನಿಸಿರುವ ಬೆಂಗಳೂರು ಗ್ರಾಮಾಂತರದ ಜನ ಪ್ರತಿಯೊಂದು ಕೆಲಸಕ್ಕೂ ಬೆಂಗಳೂರಿನ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು. ಈ ಹಂತದಲ್ಲಿ ಜಿಲ್ಲೆಯ ನೆಲಮಂಗಲ, ದೇವನಹಳ್ಳಿಗಳ ಮಧ್ಯೆ ಇರುವ ಎಲ್ಲ 4 ತಾಲೂಕುಗಳಿಂದಲೂ ಸಮರ್ಪಕ ಸಾರಿಗೆ ವ್ಯವಸ್ಥೆ ಹೊಂದಿರುವ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು ಎಂದು ಆಗ್ರಹಿಸಿದರು.
ಗಂಭೀರ ಹೋರಾಟ: ಜಿಲ್ಲಾ ಕೇಂದ್ರದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಸರ್ಕಾರ ಮತ್ತು ಆಡಳಿತಯಂತ್ರದ ಧೋರಣೆ ಖಂಡನೀಯ. ನಮ್ಮ ನ್ಯಾಯಯುತ ಹಕ್ಕನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಕಾನೂನು ರೀತಿಯಲ್ಲಿ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಬೇಕಿದೆ. ಈಗಾಗಲೇ ಸರ್ಕಾರದ ಎಲ್ಲ ಹಂತಗಳಲ್ಲಿ ಬೇಡಿಕೆ-ಆಗ್ರಹ ತಲುಪಿದೆ. ಈಗಲೂ ನಿರ್ಲಕ್ಷ್ಯ ಮುಂದುವರೆದರೆ ಹೋರಾಟ ಬೆಂಗಳೂರಿಗೆ ಸ್ಥಳಾಂತರವಾಗಬೇಕಾದೀತು ಎಂದು ಎಚ್ಚರಿಸಿದರು. ಹೋರಾಟದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನಾಗರೀಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

