ನಿರುದ್ಯೋಗ ಸೃಷ್ಟಿಸುವ ತಂತ್ರಜ್ಞಾನ ದೇಶಕ್ಕೆ ಮಾರಕ
ದೊಡ್ಡಬಳ್ಳಾಪುರ: ಉದ್ಯೋಗಾವಕಾಶ ಕಸಿದುಕೊಳ್ಳುವ ತಂತ್ರಜ್ಞಾನ ದೇಶಕ್ಕೆ ಮಾರಕ. ತಂತ್ರಜ್ಞಾನದ ಬೆಳವಣಿಗೆ ಯಾವತ್ತೂ ನಿರುದ್ಯೋಗ ಸೃಷ್ಟಿಸಬಾರದು. ಗುಡಿ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳೇ ದೇಶದ ಜನರ ಜೀವನಾಡಿ ಎಂದು ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆದ ದಿ ಟೆಕ್ಸ್ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್(ಟಿಎಂಸಿ ಬ್ಯಾಂಕ್)ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಪೂರಕ: ನೇಕಾರರು ಸಾಲಗಾರರಾಗಬಾರದು ಎಂದು ಸಲಹೆ ನೀಡಿದ ಅವರು ಸಹಕಾರಿ ಕ್ಷೇತ್ರದಲ್ಲಿ ಉನ್ನತ ಆರ್ಥಿಕ ಬೆಳವಣಿಗೆಗೆ ಈ ಬಗೆಯ ಸಣ್ಣ ಪ್ರಮಾಣದ ಬ್ಯಾಂಕುಗಳ ಕೊಡುಗೆ ಅಪಾರ. ದೊಡ್ಡಬಳ್ಳಾಪುರದ ನೇಕಾರರ ಜೀವನಾಡಿಯಾಗಿ 50 ವರ್ಷ ಹತ್ತು ಹಲವು ರೀತಿಯಲ್ಲಿ ಏಳು-ಬೀಳುಗಳನ್ನು ಕಂಡು ಸುವರ್ಣ ಅಸ್ತಿತ್ವ ಉಳಿಸಿಕೊಂಡು ಬೆಳೆಯುತ್ತಿರುವುದು ಮಹತ್ವದ ವಿಚಾರ. ಬ್ಯಾಂಕು ಮುಂಬರುವ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ನೆರವು ಮತ್ತು ಅವಕಾಶಗಳನ್ನು ಒದಗಿಸಿಕೊಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಹಂಪಿ ಹೇಮಕೂಟ ಗಾಯತ್ರಿ ಸಂಸ್ಥಾನದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಮಾತನಾಡಿ, ಅಸಂಘಟಿತರಾಗಿರುವ ನೇಕಾರರು ಸಂಘಟಿತರಾಗಬೇಕು. ಹತ್ತು-ಹಲವು ಪಂಗಡಗಳಾಗಿ ಒಡೆದು ಹೋಗಿರುವ ನೇಕಾರ ಸಮುದಾಯ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ತನ್ನ ಅಸ್ತಿತ್ವವನ್ನು ಪ್ರತಿಪಾದಿಸಬೇಕಿದೆ. ಸಾಮಾಜಿಕ ಸಂಘಟನೆಯಿಂದ ಮಾತ್ರ ಇದು ಸಾಧ್ಯ. ನೇಕಾರರ ಬ್ಯಾಂಕ್ ಸಮಗ್ರ ನೇಕಾರರ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಹಿತಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲೂ ಮಹತ್ವದ ಕೆಲಸಗಳು ಆಗಲಿ ಎಂದರು.
10 ಕೋಟಿಗೆ ಪ್ರಸ್ತಾವನೆ: ದೇವಾಂಗ ಮಂಡಳಿ ಅಧ್ಯಕ್ಷ ಎಂ.ಜಿ. ಶ್ರೀನಿವಾಸ್ ಮಾತನಾಡಿ, ನೇಕಾರರ ಹಿತರಕ್ಷಣೆಗೆ ಪೂರಕವಾಗಿ ಸರ್ಕಾರ ಶೇ.3 ದುಡಿಮೆ ಬಂಡವಾಳವನ್ನು ನೇಕಾರರಿಗೆ ಸಂದಾಯ ಮಾಡಬೇಕು. ಕೈಮಗ್ಗ ಮೀಸಲಾತಿ ಮಸೂದೆಯಲ್ಲಿ ತಿದ್ದುಪಡಿ ತಂದು ವಿದ್ಯುತ್ ಮಗ್ಗಗಳ ನೇಕಾರರಿಗೂ ಯೋಜನೆಗಳನ್ನು ವಿಸ್ತರಿಸಬೇಕು. ಸಣ್ಣ ಪ್ರಮಾಣದ ನೇಕಾರರ ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾವನೆ ಮಂಡಿಸಬೇಕು ಎಂದು ಶಾಸಕರನ್ನು ಆಗ್ರಹಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ನೇಕಾರರ ಸಮಸ್ಯೆ ಮತ್ತು ಸಂಕಷ್ಟದ ಅರಿವು ನಮಗಿದೆ. ದೊಡ್ಡಬಳ್ಳಾಪುರದ ಜವಳಿ ಪಾರ್ಕ್ ನಷ್ಟದ ಸ್ಥಿತಿಗೆ ಬಂದು ತಲುಪಿದ್ದು, ಅದರ ಉತ್ತೇಜನಕ್ಕೆ ಈಗಾಗಲೇ 10 ಕೋಟಿ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಣ್ಣ ಪ್ರಮಾಣದ ನೇಕಾರರಿಗೂ ಹಲವು ಬಗೆಯ ಯೋಜನೆಗಳ ವಿಸ್ತರಣೆಗೆ ಬಂದಿರುವ ಮನವಿ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ಬ್ಯಾಂಕ್ನ ಬೆಳವಣಿಗೆಯಲ್ಲಿ ಶ್ರಮಿಸಿದ ಸಂಸ್ಥಾಪಕ ನಿರ್ದೇಶಕ ಡಿ. ಆವಲಕೊಂಡಪ್ಪ, ಎಸ್. ಶಂಕರಯ್ಯ, ಕಾನೂನು ಸಲಹೆಗಾರ ವೇದವ್ಯಾಸಾಚಾರ್, ಗೌತಮ್ರಾವ್, ಮಾಜಿ ಅಧ್ಯಕ್ಷ ಎ. ವೆಂಕಟೇಶ್, ಸಲಹೆಗಾರ ಎಚ್.ವಿ. ಶ್ರೀನಿವಾಸಯ್ಯ, ಮಾಜಿ ಅಧ್ಯಕ್ಷ ಕೆ.ಪಿ. ವಿಶ್ವನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ವಾಸುದೇವ್ ಮಾತನಾಡಿ ಸಮಗ್ರ ಬೆಳವಣಿಗೆ ಮತ್ತು ಸ್ಥಿತಿಗತಿಗಳ ಕುರಿತು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಬೆಂ.ಗ್ರಾ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಲಕ್ಷ್ಮೀಪತಿ, ಸಹಾಯಕ ನಿಬಂಧಕ ಬಿ.ಆರ್. ಕೃಷ್ಣಮೂರ್ತಿ, ವಿಶೇಷ ಆಹ್ವಾನಿತರಾದ ಎಚ್.ಪಿ. ಶಂಕರ್, ಎಚ್.ಜಿ. ಜಗನ್ನಾಥ್, ಬ್ಯಾಂಕ್ ಉಪಾಧ್ಯಕ್ಷ ಪಿ.ಸಿ. ವೆಂಕಟೇಶ್, ನಿರ್ದೇಶಕ ಎ.ಆರ್. ಶಿವಕುಮಾರ್, ಎ.ಎಸ್. ಕೇಶವ, ಜಿ. ಮಂಜುನಾಥ್, ಕೆ.ಜಿ. ಗೋಪಾಲ್, ಟಿ. ಆವಲಕೊಂಡಪ್ಪ, ಕೆ.ಸಿ. ಗೌರಮ್ಮ, ಡಾ. ಮಂಜುಳಾ, ಕೆ.ಎಂ. ಕೃಷ್ಣಮೂರ್ತಿ, ಎ.ಆರ್. ನಾಗರಾಜನ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

