ಎಂಎಸ್ಐಎಲ್ ಮದ್ಯದಂಗಡಿಗೆ ಹಾಡೋನಹಳ್ಳಿ ಜನರ ವಿರೋಧ
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಎಂಎಸ್ಐಎಲ್ ವತಿಯಿಂದ ಮದ್ಯ ಮಾರಾಟದ ಅಂಗಡಿ ತೆರೆಯಲು ಮುಂದಾಗಿರುವ ಕ್ರಮ ಸ್ಥಳೀಯರ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿ ತೆರೆಯಬಾರದು. ತಪ್ಪಿದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಎಂದು ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘಟನೆಯ ಮಹಿಳೆಯರು ಹಲವು ಸಂಘಟನೆಗಳ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
ರಾಜ್ಯದ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇದೇ ರಸ್ತೆಯ ಮೂಲಕ ಹಾದು ಹೋಗಬೇಕಿದೆ. ಘಾಟಿ ರಸ್ತೆಯ ಬದಿಯಲ್ಲೇ ಹಾಡೋನಹಳ್ಳಿ ಗ್ರಾಮವಿದೆ. ಈ ರಸ್ತೆಯ ಮೂಲಕವೇ ಪ್ರತಿದಿನ ಸಾವಿರಾರು ಭಕ್ತಾದಿಗಳು ಘಾಟಿ ಸುಬ್ರಹ್ಮಣ್ಯಕ್ಕೆ ತೆರಳುತ್ತಾರೆ. ಹಾಡೋನಹಳ್ಳಿಯಲ್ಲಿ ರಾಜ್ಯದಲ್ಲೇ ಗಮನ ಸಳೆದಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರ ಕೂಡ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ತರಬೇತಿ ಪಡೆಯಲು ರಾಜ್ಯದ ಹಲವು ಭಾಗಗಳಿಂದ ಕೃಷಿಕರು, ರೈತ ಮಹಿಳೆಯರು ಬರುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಅಥವಾ ಇತರೆ ಯಾವುದೇ ಖಾಸಗಿ ಬಾರ್ಗಳನ್ನು ತೆರೆಯಲು ಅವಕಾಶ ಕೊಡುವುದು ಸರಿಯಲ್ಲ. ಒಂದು ವೇಳೆ ಬಾರ್ ತೆರೆಯಲು ಪರವಾನಗಿ ನೀಡಿದರೆ ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿತ ತೊಲಗಿಸಿ: ತಾಲೂಕಿನಲ್ಲಿ ಈಗಾಗಲೇ ಹಲವು ಗ್ರಾಮಗಳಲ್ಲಿ ಕುಡಿತ ದೊಡ್ಡ ಸಮಸ್ಯೆಯಾಗಿ ಸಾರ್ವಜನಿಕರನ್ನು ಕಾಡುತ್ತಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದಲ್ಲಿ ಕುಡಿತದ ಪರಿಣಾಮ ನಡೆದ ವೈಮನಸ್ಸಿನಿಂದ ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದು ಹಸಿಯಾಗಿರುವಾಗಲೇ ಸರ್ಕಾರವೇ ಅಧಿಕೃತವಾಗಿ ಬಾರ್ ತೆರೆಯಲು ಮುಂದಾಗಿರುವ ಹುನ್ನಾರ ಖಂಡನೀಯ. ಮಹಿಳೆಯರು ಮಕ್ಕಳು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕಿದೆ. ದಿನನಿತ್ಯ ಕುಡಿತದ ಚಟಕ್ಕೆ ಬಿದ್ದ ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇವುಗಳನ್ನು ನಿಯಂತ್ರಿಸಿ ಜನರ ಆರೋಗ್ಯ ಮತ್ತು ಬದುಕು ಉಳಿಸಬೇಕಾದ ಸರ್ಕಾರ ಹೊಣೆಯಾಧಾರಿತವಾಗಿ ನಡೆದುಕೊಳ್ಳಬೇಕು. ಗ್ರಾಮಸ್ಥರ ವಿರೋಧದ ನಡುವೆಯೂ ಬಾರ್ ತೆರೆಯುವ ಕೆಲಸಕ್ಕೆ ಕೈ ಹಾಕಬಾರದು. ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿ ಬಾರ್ ತೆರೆದರೆ ಉತ್ತಮ ಲಾಭ ಬರುತ್ತದೆ ಎಂಬ ನಿರೀಕ್ಷೆ ಎಂಎಸ್ಐಎಲ್ಗೆ ಇದ್ದರೆ ಆ ಭ್ರಮೆಯನ್ನು ಈಗಲೇ ಬಿಟ್ಟುಬಿಡುವುದು ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

