ಸಮಾಜ ಕಟ್ಟುವ ಕನಸು ಅನಿವಾರ್ಯ: ನಂಜುಂಡಸ್ವಾಮಿ
ದೊಡ್ಡಬಳ್ಳಾಪುರ: ಸಮಾಜ ಕಟ್ಟುವ ಕನಸು ಎಲ್ಲರಿಗೂ ಇರುವುದಿಲ್ಲ. ಸಮಾಜದ ಆರೋಗ್ಯಕ್ಕೆ ಚಿಕಿತ್ಸೆ ನೀಡುವುದು ಹಿರಿಯ ಹೋರಾಟಗಾರ ಡಾ. ಎನ್. ವೆಂಕಟರೆಡ್ಡಿ ಅಂತಹವರಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಪಚ್ಚೆ ನಂಜುಂಡಸ್ವಾಮಿ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ತಾಲೂಕು ಕನ್ನಡ ಪಕ್ಷದ ವತಿಯಿಂದ ನಡೆದ ಡಾ. ಎನ್. ವೆಂಕಟರೆಡ್ಡಿ ಒಂದು ನೆನಪು, 58ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹುಟ್ಟು ಮತ್ತು ಬದುಕನ್ನು ಹೋರಾಟದಲ್ಲೇ ಕಂಡ ರೆಡ್ಡಿ ಅವರ ಕನಸುಗಳೂ ಹೋರಾಟದ ಸುತ್ತಲೇ ಗಿರಕಿ ಹೊಡೆಯುತ್ತಿದ್ದದ್ದು ವಿಶೇಷ. ಈ ನೆಲದ ಶೋಷಿತರ, ತುಳಿತಕ್ಕೊಳಗಾದವರ ಮತ್ತು ಧ್ವನಿ ಹೀನರ ದನಿಯಾಗಿ ಅವರು ಸಾರ್ಥಕ ಬದುಕು ಕಂಡರು. ಅವರ ಆದರ್ಶಗಳ ಪಾಲನೆ ಮುಖ್ಯ ಎಂದರು.
ಸ್ವಾಭಿಮಾನದ ಕಿಡಿ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎನ್. ವೆಂಕಟಸ್ವಾಮಿ, ಚಳವಳಿ ಅಂದ್ರೆ ರೆಡ್ಡಿ ಎನ್ನುವಷ್ಟರ ಮಟ್ಟಿಗೆ ಪಾರದರ್ಶಕ ಚಳವಳಿಗಳನ್ನು ರೂಪಿಸಿದ ಅವರು, ದಲಿತರ, ಕೊಳಚೆವಾಸಿಗಳ, ಈ ನೆಲದ ಕಟ್ಟಕಡೆಯ ಬದುಕನ್ನು ಸಾಗಿಸುತ್ತಿರುವ ಜನರ ಪರವಾದ ಹೋರಾಟಗಳನ್ನು ಸಂಘಟಿಸಿದರು. ದೊಡ್ಡಬಳ್ಳಾಪುರದ ಹಲವಾರು ದಲಿತ ಕಾಲೋನಿಗಳಿಗೆ ಮೂಲ ಸೌಕರ್ಯಗಳು ದೊರೆತಿವೆ ಎನ್ನುವುದಾದರೆ ಅದು ಅವರ ಹೋರಾಟಕ್ಕೆ ಸಾಕ್ಷಿ. ಪ್ರಾದೇಶಿಕವಾದ ರಾಜಕೀಯ ಆಲೋಚನೆಗಳ ಮೂಲಕ ಒಂದು ಸಣ್ಣ ಊರಿನಲ್ಲಿ ಸಂಘಟನೆಯನ್ನೇ ಪಕ್ಷವಾಗಿಸಿ ರಾಜಕಾರಣದ ಅಸ್ತಿತ್ವ ಪಡೆಯುವ ಮೂಲಕ ಕನ್ನಡ ಮನಸ್ಸುಗಳ ಸ್ವಾಭಿಮಾನದ ಕಿಡಿಯಾಗಿ ಬೆಳೆದವರು. ಜಾಗೃತಿ ರಾಜಕಾರಣದ ರೂವಾರಿ ವೆಂಕಟರೆಡ್ಡಿ ಎಂದರು.
ಮೋದಿ ಎಂಬ ವ್ಯಕ್ತಿಗೆ ನಮ್ಮ ವಿರೋಧವಿಲ್ಲ: ಕನ್ನಡ ಜಾಗೃತ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಮಾತನಾಡಿ, ನಮ್ಮ ಸರ್ಕಾರಗಳು 6 ಲಕ್ಷ ಕೋಟಿಯನ್ನು ಬಹುರಾಷ್ಟೀಯ ಕಂಪನಿಗಳಿಗೆ ಕೊಟ್ಟಿದ್ದಾರೆ. ಆದರೆ ಶಾದಿಭಾಗ್ಯ, ಅನ್ನಭಾಗ್ಯದಂತಹ ಯೋಜನೆಗಳಿಗೆ ವೆಚ್ಚವಾಗುವ ಚಿಲ್ಲರೆ ಕಾಸಿಗೆ ನಾವು ತಲೆಕೆಡಿಸಿಕೊಳ್ಳುತ್ತಿದ್ದೇವೆ. ಈ ದೇಶ ಮತ್ತೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಹೋಗುವ ಅಪಾಯ ತಂದುಕೊಳ್ಳುವುದು ಬೇಡ. ಮೋದಿ ಎಂಬ ವ್ಯಕ್ತಿಗೆ ನಮ್ಮ ವಿರೋಧವಿಲ್ಲ. ಆದರೆ ಮೋದಿಯ ಇಮೇಜ್ ಮೂಲಕ ತಮ್ಮ ಅಸ್ತಿತ್ವದ ಹವಣಿಕೆಯಲ್ಲಿರುವ ಮನುವಾದಿ, ಜಾತಿವಾದಿ ಶಕ್ತಿಗಳು ಈ ದೇಶಕ್ಕೆ ಅಪಾಯಕಾರಿ. ಸ್ಥಾಪಿತ ಹಿತಾಸಕ್ತಿಗಳು ಮುಖ್ಯವಾಗಿ ದುಡಿಯುವ ವರ್ಗದ ಆಲೋಚನೆಗಳು ನಿರ್ಲಕ್ಷ್ಯಕ್ಕೊಳಪಡುವುದು ಆತಂಕಕಾರಿ. ಧಮನಕಾರಿ ಚಿಂತನೆಗಳ ರೂವಾರಿಗಳಿಗೆ ಪ್ರಭುತ್ವ ಹಸ್ತಾಂತರ ಆಗಬಾರದು. ಸಂಘಟನೆಗಳನ್ನು ಹುಟ್ಟುಹಾಕುವ ಮತ್ತು ಒಡೆಯುವ ಹುನ್ನಾರಗಳು ನಿರಂತರ ನಡೆಯುತ್ತಿವೆ. ಭೌತಿಕ ದಾರಿದ್ರ್ಯ ದೇಶಕ್ಕೆ ಕಳಂಕ. ಈ ಹಂತದಲ್ಲಿ ಪಾರದರ್ಶಕತೆ ಹೆಸರಾಗಿದ್ದವರು ವೆಂಕಟರೆಡ್ಡಿ. ನಿಷ್ಠೆ ರೆಡ್ಡಿ ಅವರ ಕೆಲಸವಾಗಿತ್ತು. ಜಂಗಮ ಬದುಕಿನ ಹರಿಕಾರರಾದ ಅವರು ನಂಬಿದ ಆದರ್ಶ ಪಾಲನೆ ಮುಖ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಪಕ್ಷದ ಹುಟ್ಟು-ಬೆಳವಣಿಗೆ, ಏಳು-ಬೀಳುಗಳ ಸಮಗ್ರ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಡಾ. ಸಿ.ಎಸ್. ಶ್ರೀನಿವಾಸ್, ತಾಲೂಕು ಅಧ್ಯಕ್ಷ ನಾಗಸಂದ್ರ ಪ್ರಸನ್ನ, ಕನ್ನಡ ಜಾಗೃತ ಪರಿಷತ್ತಿನ ಟ್ರಸ್ಟ್ ಸುಲೋಚನಮ್ಮ ಡಾ. ವೆಂಕಟರೆಡ್ಡಿ, ಕನ್ನಡ ಪಕ್ಷದ ಕಾರ್ಯದರ್ಶಿ ಡಿ.ಪಿ. ಆಂಜನೇಯ ಮತ್ತಿತರರು ಭಾಗವಹಿಸಿದ್ದರು. ಹಸಿರು ಸೇನೆ ಯುವಕರಿಂದ ಕ್ರಾಂತಿಗೀತೆಗಳ ಗಾಯನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

