ಸಿಎಂಸಿ ಬಡಾವಣೆ ಅವ್ಯವಸ್ಥೆಗಳ ಆಗರ
ಚನ್ನಪಟ್ಟಣ: 20 ವರ್ಷಗಳ ಹಿಂದೆ ಪಟ್ಟಣದ ನಾಗರಿಕರಿಗೆ ಅನುಕೂಲ ಕಲ್ಪಿಸಲೆಂದು ನಗರಸಭೆ ನಿರ್ಮಾಣ ಮಾಡಿದ ಸಿಎಂಸಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿರುವ ಕಾರಣ ಇಲ್ಲಿನ ನಿವಾಸಿಗಳು ನರಕ ಅನುಭವಿಸುವಂತಾಗಿದೆ.
ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮತ್ತು ಮಂಜೂರು ಮಾಡುವ ಕಾರ್ಯಕ್ಕೆ ಮಾತ್ರ ಸೀಮಿತವಾದ ನಗರಸಭೆ ನಂತರ ಈ ಬಡಾವಣೆಯ ಅಭಿವೃದ್ಧಿಗೆ ಕಿಂಚಿತ್ತೂ ಗಮನಹರಿಸದಿದ್ದು ನಗರಸಭೆಗೆ ಹಣತೆತ್ತು ನಿವೇಶನ ಪಡೆದು ಲಕ್ಷಾಂತರ ರು. ಸುರಿದು ಮನೆ ಕಟ್ಟಿಸಿಕೊಂಡಿರುವ ಇಲ್ಲಿನ ನಿವಾಸಿಗಳು ನಗರಸಭೆಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ.
20 ವರ್ಷಗಳ ಹಿಂದೆ ಐಡಿಎಸ್ಎಂಟಿ ಯೋಜನೆಯಡಿ ಬಡಾವಣೆ ನಿರ್ಮಾಣ ಮಾಡಿದ ನಗರಸಭೆ ಸರ್ಕಾರಿ ನಿಯಮಾನುಸಾರ ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿತು. ನಿವೇಶನ ಹಂಚಿಕೆ ಮಾಡಿ ನನ್ನ ಜವಾಬ್ದಾರಿ ಮುಗಿಯಿತು ಎಂದು ಕೈ ತೊಳೆದುಕೊಂಡ ನಗರಸಭೆ ಬಡಾವಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದು ಬಡಾವಣೆ ಸಮಸ್ಯೆಗಳ ಆಗರವಾಗಿದೆ.
ವಿಷ ಜಂತುಗಳ ಹಾವಳಿ: ಸಿಎಂಸಿ ಬಡಾವಣೆಯ ಖಾಲಿ ನಿವೇಶನಗಳಲ್ಲಿ ಪಾರ್ಥೇನಿಯಂ ಮೊದಲಾದ ಸತ್ತೆ ಗಿಡಗಳು ಬೆಳೆದಿದ್ದು, ಇದರಿಂದಾಗಿ ಬಡಾವಣೆಯಲ್ಲಿ ಹಾವು, ಚೇಳು, ಇಲಿ, ಹೆಗ್ಗಣಗಳು ವಾಸಿಸಲು ಅನುಕೂಲಕಾರಿ ಎನಿಸಿದೆ. ರಾತ್ರಿ ವೇಳೆ ಬಡಾವಣೆಗೆ ಸಮರ್ಪಕವಾದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಇಲ್ಲಿನ ನಿವಾಸಿಗಳು ಮುಂದೇನಾದೀತೋ ಎಂಬ ಆತಂಕದಿಂದ ತಿರುಗಾಡುವಂತಾಗಿದೆ.
ಬಡಾವಣೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು ಅಲ್ಲಲ್ಲಿ ಕಟ್ಟಿ ನಿಲ್ಲುವ ಚರಂಡಿ ನೀರಿನಿಂದ ಸೊಳ್ಳೆ ಮೊದಲಾದ ಕೀಟಗಳು ಉತ್ಪತ್ತಿಯಾಗಿ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಬಡಾವಣೆ ನಿರ್ಮಾಣಗೊಂಡು ಎರಡು ದಶಕಗಳೇ ಕಳೆದಿದ್ದರೂ ನಗರಸಭೆ ಮಾತ್ರ ಇದುವರೆಗೆ ಸೂಕ್ತ ಚರಂಡಿ ಮತ್ತು ಮೋರಿ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲಗೊಂಡಿದೆ.
ಹೈಟೆನ್ಷನ್ ಪ್ರಾಬ್ಲಂ: ಬಡಾವಣೆಯ ಕೆಲ ನಿವೇಶನದ ಮೇಲೆ 11ಕೆ.ವಿ. ವಿದ್ಯುತ್ ತಂತಿ ಹಾಯ್ದು ಹೋಗಿದ್ದು ಇದರಿಂದಾಗಿ ಇಲ್ಲಿನ ನಿವಾಸಿಗಳು ಮನೆಕಟ್ಟಿಕೊಳ್ಳಲು ಪರದಾಡುವಂತಾಗಿದೆ. ವಿದ್ಯುತ್ ವೈರ್ ಅನ್ನು ಬದಲಾವಣೆ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.
ಕುಡಿಯಲು ನೀರಿಲ್ಲ: ಬಡಾವಣೆಯ ನೀರಿನ ಸೌಲಭ್ಯಕ್ಕೆ ಎರಡು ಕೊಳವೆ ಬಾವಿಗಳಿದ್ದು ಒಂದು ಬೋರ್ವೆಲ್ ಕೆಟ್ಟು ನಿಂತಿದ್ದರೆ ಮತ್ತೊಂದು ಬೋರ್ವೆಲ್ನಿಂದ ಕನಕನಗರ ಬಡಾವಣೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಸಿಎಂಸಿ ಬಡಾವಣೆಗೆ ಎರಡು ದಿನಕ್ಕೊಮ್ಮೆ 2 ತಾಸುಗಳ ಕಾಲ ಪೂರೈಕೆ ಮಾಡುವ ಕಾವೇರಿ ನೀರಷ್ಟೇ ಸಿಗುತ್ತಿದ್ದು ಇದರಿಂದಾಗಿ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.
ಬಡಾವಣೆಯ ಸಮಸ್ಯೆಗಳಿಗೆ ಇನ್ನಾದರೂ ನಗರಸಭೆ ಅಧಿಕಾರಿಗಳು ಗಮನ ಹರಿಸುವಂತೆ ಆಗ್ರಹಿಸಿರುವ ಇಲ್ಲಿನ ನಿವಾಸಿಗಳು ಈ ಬಗ್ಗೆ ನಗರಸಭೆ ಉದಾಸೀನ ಧೋರಣೆ ತಳೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

