ಮತದಾರರ ಪಟ್ಟಿಗೆ ನೋಂದಾಯಿಸುವ ಪ್ರಕ್ರಿಯೆಗೆ ಸಹಕರಿಸಿ
ಕ.ಪ್ರ.ವಾರ್ತೆ ರಾಮನಗರ ನ. 25
ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮದಡಿ 2014ರ ಜ.1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ಜನರನ್ನೂ ಮತದಾರರ ಪಟ್ಟಿಗೆ ನೋಂದಾಯಿಸುವ ಪ್ರಕ್ರಿಯೆಗೆ ಸಹಕರಿಸುವಂತೆ ಕಾಲೇಜು ಪ್ರಾಂಶುಪಾಲರು ಮತ್ತು ಹಾಸ್ಟೆಲ್ ವಾರ್ಡನ್‌ಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಮತದಾರರ ಸಂಖ್ಯೆಯಲ್ಲಿ ಯುವಜನರ ಸಂಖ್ಯೆ ಕೇವಲ ಶೇಕಡ 9ರಷ್ಟಿದೆ. ಆದರೆ, ರಾಮನಗರ ಜಿಲ್ಲೆಯಲ್ಲಿ ಈ ಪ್ರಮಾಣ ಶೇಕಡ 1.01 ಮಾತ್ರವೇ ಇದ್ದು, ಎಲ್ಲಾ ಅರ್ಹ ಯುವಜನರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡುವ ಕೆಲಸವಾಗಬೇಕು ಎಂದರು.
ಮುಂದಿನ ಜ.1ಕ್ಕೆ 18 ವರ್ಷ ತುಂಬಲಿರುವ ಎಲ್ಲ ಯುವಜನರಿಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ದೊರಕುವಂತಾಗಬೇಕು. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರನ್ನು ಪಾಲುದಾರರಾಗಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರಮಾಣ ಸರಿದೂಗಿಸಬೇಕು: ಯುವ ಮತದಾರರ ಸಂಖ್ಯೆಯನ್ನು ಜಿಲ್ಲೆಯಲ್ಲೂ ಕನಿಷ್ಠ ರಾಜ್ಯದ ಸರಾಸರಿಯಾದ ಶೇಕಡ 9ಕ್ಕೆ ಏರಿಸುವ ಅಗತ್ಯವಿದೆ. ಈ ಗುರಿ ಈಡೇರಲು ಕಾಲೇಜುಗಳ ಎಲ್ಲಾ ಪ್ರಾಂಶುಪಾಲರು, ಮೆಟ್ರಿಕ್‌ನಂತರದ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳ ಸಹಕಾರ ಅತಿಮುಖ್ಯ ಎಂದು ಡಾ.ವಿಶ್ವನಾಥ್ ಅಭಿಪ್ರಾಯಪಟ್ಟರು.
ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಲು ಅಗತ್ಯವಿರುವ ನಮೂನೆ 6 ನ್ನು ಹಾಸ್ಟೆಲ್ ಮತ್ತು ಕಾಲೇಜುಗಳಿಗೆ ವಿತರಿಸಲಾಗುತ್ತಿದೆ. ಇವುಗಳನ್ನು ಇರುವ ಕನಿಷ್ಠ ಕಾಲಾವಧಿಯಲ್ಲಿ ಭರ್ತಿ ಮಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಅಂತಿಮ ದಿನವಾದ ನ.29 ರೊಳಗೆ ಆಯಾ ತಾಲೂಕು ಕಚೇರಿಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಫಲಿತಾಂಶ ಹೆಚ್ಚಳಕ್ಕೆ ಕ್ರಮ: ರಾಮನಗರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಮಾರು 16 ಸಾವಿರ ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಕಳೆದ ವರ್ಷದ ಫಲಿತಾಂಶದಲ್ಲಿ ಜಿಲ್ಲೆಗೆ 17ನೇ ಸ್ಥಾನ ಬಂದಿದೆ.
ಈ ಬಾರಿ ಕಡೇ ಪಕ್ಷ 10ರ ಒಳಗಿನ ಸ್ಥಾನಕ್ಕೆ ಏರಬೇಕು ಎಂದು ವಿಶ್ವನಾಥ್ ಅವರು ಪ್ರಾಂಶುಪಾಲರಿಗೆ ಸಲಹೆಯಿತ್ತರು.
ಲಭ್ಯವಿರುವ ವ್ಯವಸ್ಥೆಯಲ್ಲಿಯೇ ಉತ್ತಮ ಫಲಿತಾಂಶ ಪಡೆಯಲು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಯತ್ನಿಸಬೇಕು. ಸಬೂಬು ನೀಡುತ್ತಾ ಹೋದರೆ ಉತ್ತಮ ಫಲಿತಾಂಶ ಬರುವುದಿಲ್ಲ. ನಮ್ಮ ಮನಸ್ಥಿತಿ ಬದಲಾಯಿಸಿ ನಮ್ಮ ಮುಂದಿನ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕುಸಿದ ಗುಣಮಟ್ಟ: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಆಸಕ್ತಿ ಹೊಂದಿಲ್ಲ. ವಿದ್ಯಾರ್ಥಿಗಳ ತಂದೆ-ತಾಯಿಗಳಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಅವರ ಉದಾಸೀನ ಮನೋಭಾವ, ವಿಜ್ಞಾನ ವಿಭಾಗಗಳಲ್ಲಿ ಉಪನ್ಯಾಸಕರ ಕೊರತೆಯು ಜಿಲ್ಲೆಯಲ್ಲಿ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂದು ವಿವಿಧ ಕಾಲೇಜು ಪ್ರಾಂಶುಪಾಲರು ಜಿಲ್ಲಾಧಿಕಾರಿ ಪ್ರಶ್ನೆಗೆ ಉತ್ತರಿಸಿದರು.
ಈ ವಾದವನ್ನು ಒಪ್ಪದ ಜಿಲ್ಲಾಧಿಕಾರಿ ವಿಶ್ವನಾಥ್, ಕೊರತೆಗಳನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿ ಸಮುದಾಯಕ್ಕೆ ಕೊಡುಗೆ ನೀಡುವ ಕೆಲಸವಾಗಬೇಕು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕು.
ಸ್ಥಳೀಯವಾಗಿಯೇ ಸಾಧ್ಯವಾದಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

