ಬೆಂಗಳೂರು ಗ್ರಾಮಾಂತರ

ಆಪರೇಷನ್ ಹಸ್ತ: ತಾಪಂಗೆ ಕಾಂಗ್ರೆಸ್ ಆಡಳಿತ

Published On :

ಕ.ಪ್ರ.ವಾರ್ತೆ  ರಾಮನಗರ ನ.26
ಆಪರೇಷನ್ ಹಸ್ತ ಕಾರ್ಯಾಚರಣೆಯೊಂದಿಗೆ ರಾಮನಗರ ತಾ.ಪಂ. ಆಡಳಿತ ಚುಕ್ಕಾಣಿ ಕಾಂಗ್ರೆಸ್ ವಶವಾಗಿದೆ. ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ನ ಲಕ್ಷ್ಮೀ ಮಂಜುನಾಥ್ ಆಯ್ಕೆಯಾಗಿದ್ದಾರೆ. ಸ್ಪಷ್ಟ ಬಹುಮತವಿದ್ದರೂ ಜೆಡಿಎಸ್ ಅಧಿಕಾರ ಕಳೆದುಕೊಂಡು, ಮುಖಭಂಗ ಅನುಭವಿಸಿದೆ.  ನ.12ರಂದು ಕೋರಂ ಅಭಾವದ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ತಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆ ಮಂಗಳವಾರ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಮಂಜುನಾಥ್ ಅವರು ಜೆಡಿಎಸ್ ಹುರಿಯಾಳು ಸುಜಾತ ಶಿವಲಿಂಗಪ್ಪ ವಿರುದ್ಧ 2 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
16 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 9 ಹಾಗೂ ಕಾಂಗ್ರೆಸ್ 7 ಸದಸ್ಯರನ್ನು ಹೊಂದಿವೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಮಂಜುನಾಥ್ ಅವರಿಗೆ 8 ಮತಗಳು ಲಭಿಸಿದರೆ, ಜೆಡಿಎಸ್ನ ಪರಾಜಿತ ಅಭ್ಯರ್ಥಿ ಸುಜಾತ ಶಿವಲಿಂಗಪ್ಪ 6 ಮತಗಳನ್ನು ಪಡೆದರು.
ಕೈ ಹಿಡಿದ ದಳ ಸದಸ್ಯರು: ಜೆಡಿಎಸ್ನಲ್ಲಿ ಆಗಿದ್ದ ಅಧಿಕಾರಿ ಹಂಚಿಕೆ ಸೂತ್ರದನ್ವಯ ಭಾನುಮತಿ ಚಿಕ್ಕಬೋರೇಗೌಡ ರಾಜಿನಾಮೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹುದ್ದೆಯು ಮೊದಲ ಮತ್ತು ಎರಡನೇ ಅವಧಿಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.   
ಜೆಡಿಎಸ್ ಇಬ್ಬರು ಸದಸ್ಯರು ಪರೋಕ್ಷವಾಗಿ ಮತ್ತು ಒಬ್ಬ ಸದಸ್ಯ ಪ್ರತ್ಯಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ನೆರವಾಗಿದ್ದಾರೆ. ಆ ಪಕ್ಷದ ತಾ.ಪಂ. ಮಾಜಿ ಅಧ್ಯಕ್ಷೆ ಭಾನುಮತಿ ಚಿಕ್ಕಬೋರೇಗೌಡ, ಹಾಲಿ ಉಪಾಧ್ಯಕ್ಷ ಶಂಕರಪ್ಪ ಗೈರಾಗಿದ್ದು, ಸದಸ್ಯ ಜಯರಾಮ್ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು.
ಒಡೆದ ಮನೆಯಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಈ ಚುನಾವಣೆ ಮಟ್ಟಿಗೆ ಒಗ್ಗಟ್ಟು ಮೂಡಿತ್ತು. ಜೆಡಿಎಸ್ ಪಾಳಯದ ಜತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಸದಸ್ಯೆ ಶೀಲಮ್ಮ ಈಗ ಪಕ್ಷನಿಷ್ಠೆ ಮೆರೆದರು. ಇದರೊಟ್ಟಿಗೆ ಜೆಡಿಎಸ್ ಒಡಕಿನ ಲಾಭ ಪಡೆದು, ಕಾಂಗ್ರೆಸ್ ಜಯ ಸಾಧಿಸಿದೆ.
ವಿಜಯೋತ್ಸವ ಆಚರಣೆ: ಚುನಾವಣೆಗೆ ಮುನ್ನ ನಡೆಸಿದ್ದ ಎಲ್ಲ ಕಸರತ್ತು ಕೈಗೂಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಗೆಲವಿನ ವಿಶ್ವಾಸವಿತ್ತು. ಹಾರ, ತುರಾಯಿ, ಭಾರಿ ಪ್ರಮಾಣದಲ್ಲಿ ಪಟಾಕಿಯೊಂದಿಗೆ ಆಗಮಿಸಿದ್ದ ಕಾಂಗ್ರೆಸಿಗರು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷೆ ಲಕ್ಷ್ಮಿ ಅವರನ್ನು ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಸದಸ್ಯ ಎ.ಮಂಜುನಾಥ್, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಮುಖಂಡರಾದ ಮರಿದೇವರು, ಶೇಷಾದ್ರಿ, ಕೆ.ರಮೇಶ್, ಎಲ್.ಚಂದ್ರಶೇಖರ್, ಗಾಣಕಲ್ ನಟರಾಜ್ ಮತ್ತಿತರರು ಅಭಿನಂದಿಸಿದರು.


ಎ.ಮಂಜುನಾಥ್ ಪತ್ನಿ ಲಕ್ಷ್ಮೀ
ರಾಮನಗರ ತಾ.ಪಂ. ನೂತನ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರು ಕೆಪಿಸಿಸಿ ಸದಸ್ಯ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಕಾಂಗ್ರೆಸ್ ಪರಾ ಜಿತ ಅಭ್ಯರ್ಥಿ ಎ.ಮಂಜುನಾಥ್ ಅವರ ಪತ್ನಿಯಾಗಿದ್ದಾರೆ. ಬೈರಮಂಗಲ ಸಾಮಾನ್ಯ ಮಹಿಳಾ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಬಿಎ ಪದವೀಧರೆಯಾಗಿರುವ ಅವರು ಸಾರ್ವಜನಿಕ ಜೀವನದಲ್ಲಿ ತಾ.ಪಂ. ಮೂಲಕವೇ ಮೊದಲ ಚುನಾವಣೆ ಎದುರಿಸಿದವರು.
ಗ್ರಾಮೀಣಾಭಿವೃದ್ಧಿಗೆ ಆದ್ಯತೆ
ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರಾಮನಗರ ತಾಲೂಕಿನ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಲು ಆದ್ಯತೆ ನೀಡುವುದಾಗಿ ತಾ.ಪಂ. ನೂತನ ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಭರವಸೆ ನೀಡಿದ್ದಾರೆ. ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹೀಗಾಗಿ ನಿರೀಕ್ಷೆಗೂ ಮೀರಿ ಅನುದಾನ ತರಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಗ್ರಾಮೀಣ ಪ್ರದೇಶದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗುವುದು. ಯಾವುದೇ ಕಾರಣಕ್ಕೂ ಪಕ್ಷಪಾತ, ತಾರತಮ್ಯ ನೀತಿ ಅನುಸರಿಸುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.