ಜಿದ್ದಾಜಿದ್ದಿ: ಕಾಂಗ್ರೆಸ್ ಮುನ್ನಡೆ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ನ.26
ರಾಜಕೀಯ ಜಿದ್ದಾಜಿದ್ದಿನ ಅಖಾಡವಾಗಿರುವ ರಾಮನಗರದಲ್ಲಿ ಲೋಕಸಭೆ ಉಪ ಚುನಾವಣೆ ಬಳಿಕ ಕಾಂಗ್ರೆಸ್ ಕೈ ಮೇಲಾಗಿದೆ. ಪ್ರತಿಷ್ಠಿತ ರಾಮನಗರ ತಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬುಡವನ್ನೇ ಅಲುಗಾಡಿಸಲು ಹೊರಟಿದೆ.
ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರದ ತಾ.ಪಂ.ನಲ್ಲಿ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಗಿದೆ. ಲೋಕಸಭೆ ಉಪ ಚುನಾವಣೆ ಸೋಲಿನ ಆಘಾತದಿಂದ ಇನ್ನೂ ಹೊರ ಬರದ ಕುಮಾರಸ್ವಾಮಿ ಅವರಿಗೆ ಇದೀಗ ತವರಿನಲ್ಲಿ ಮತ್ತೊಂದು ರಾಜಕೀಯ ಹಿನ್ನಡೆ ಉಂಟಾಗಿದೆ.
ವರ್ಷದ ಹಿಂದೆ ರಾಮನಗರ ಜಿ.ಪಂ. ಅಧ್ಯಕ್ಷರ ಚುನಾವಣೆ, ಅದಾದ ಬಳಿಕ ಚನ್ನಪಟ್ಟಣ ನಗರಸಭೆ ಅಧ್ಯಕ್ಷೆ ವಿರುದ್ಧದ ಅವಿಶ್ವಾಸ ಗೊತ್ತುವಳಿಯಲ್ಲೂ ಕುಮಾರಸ್ವಾಮಿ ಮಾತಿಗೆ ಸ್ವಪಕ್ಷೀಯರೇ ಕಿಮ್ಮತ್ತು ನೀಡಿರಲಿಲ್ಲ. ಮಂಗಳವಾರ ನಡೆದ ಅವರ ಸ್ವಕ್ಷೇತ್ರದ ತಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ಕುಮಾರಸ್ವಾಮಿ ಆಟ ನಡೆಯಲಿಲ್ಲ.
ಒಡೆದ ಮನೆಯಾದ ಜೆಡಿಎಸ್: ಕಳೆದೊಂದು ದಶಕದಿಂದ ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಪಾರುಪತ್ಯ ಸ್ಥಾಪಿಸಿದ್ದರು. ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿತ್ತು. ಇದೀಗ ಆ ಪಕ್ಷದ ಅಧಿಪತ್ಯ ಕೊನೆಗಾಣಿಸಿ, ಗತ ವೈಭವವನ್ನು ಕಾಣುವ ನಿಟ್ಟಿನಲ್ಲಿ ಕಾಂಗ್ರೆಸ್ ಆಶಾಭಾವನೆ ಹೊಂದಿದೆ.
ಆಗಲೇ ಎಚ್ಚೆತ್ತುಕೊಂಡಿದ್ದರೆ: 16 ಸದಸ್ಯ ಬಲದ ತಾ.ಪಂ.ನಲ್ಲಿ 9 ಸದಸ್ಯರನ್ನು ಹೊಂದಿರುವ ಜೆಡಿಎಸ್ಗೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ, ತಿಂಗಳ ಮುಂಚೆ ನಡೆದ ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆಯೇ ದಳಪತಿಗಳು ಎಚ್ಚೆತ್ತುಕೊಂಡಿದ್ದರೆ ಈಗ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲಾಟಕ್ಕೆ ಅವಕಾಶವೇ ಇರುತ್ತಿರಲಿಲ್ಲ.
ಪ್ರಜಾಪ್ರಭುತ್ವದ ಕಗ್ಗೊಲೆ
ಅಧಿಕಾರ ಮತ್ತು ಹಣ ಬಲದಿಂದ ಕಾಂಗ್ರೆಸ್ ಮುಖಂಡರು ತಾ.ಪಂ. ಚುಕ್ಕಾಣಿ ಹಿಡಿದಿದ್ದಾರೆ. ಆಪರೇಷನ್ ಕಮಲ ವಿರೋಧಿಸಿದ್ದ ಕಾಂಗ್ರೆಸಿಗರೇ ಈಗ ಜೆಡಿಎಸ್ ಸದಸ್ಯರನ್ನು ಖರೀದಿಸಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ. ರಾಜಕಾರಣದಲ್ಲಿ ಇಂತಹ ಆಟ ಹೆಚ್ಚು ದಿನ ನಡೆಯುವುದಿಲ್ಲ. ಪಕ್ಷದ್ರೋಹಿ ಜೆಡಿಎಸ್ ಸದಸ್ಯರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕರಣ ದಾಖಲಿಸಲಾಗುವುದು. ಅದಕ್ಕೂ ಮುನ್ನ ನೈತಿಕತೆ ಇದ್ದರೆ ಅವರೇ ರಾಜಿನಾಮೆ ನೀಡುವುದು ಸೂಕ್ತ.
ಟಿ ಕೆ.ರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ, ರಾಮನಗರ.
ತಾಲೂಕು ಅಭಿವೃದ್ಧಿಗೆ ಸಹಕಾರಿ
ರಾಜ್ಯದಲ್ಲಿ ಕಾಂಗ್ರೆಸ್ಸ್ರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ತಾ.ಪಂ. ಅಧಿಕಾರ ಚುಕ್ಕಾಣಿಯನ್ನು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಜೆಡಿಎಸ್ ಇಬ್ಬರು ಸದಸ್ಯರ ಗೈರು, ಒಬ್ಬ ಸದಸ್ಯರ ಬೆಂಬಲದ ವಿಷಯದಲ್ಲಿ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ. ಸೋಲಿನ ಹತಾಶೆಯಿಂದಾಗಿ ಜೆಡಿಎಸ್ ನಾಯಕರು ಕುದುರೆ ವ್ಯಾಪಾರದ ಊಹಾಪೋಹ ಹಬ್ಬಿಸುತ್ತಿದ್ದಾರೆ.
ಟಿ ಎ.ಮಂಜುನಾಥ್, ಕೆಪಿಸಿಸಿ ಸದಸ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

