ಮಾಹಿತಿ ಕೊರತೆ: ಸವಲತ್ತು ವಂಚಿತ ಜನತೆ
ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸದಲ್ಲಿ ಮುಂದಾಗಿ
ಕ.ಪ್ರ.ವಾರ್ತೆ, ರಾಮನಗರ, ನ.27
ಮಾಹಿತಿ ಕೊರತೆಯ ಕಾರಣಕ್ಕೆ ಸರ್ಕಾರದ ಜನಪರ ಯೋಜನೆಗಳಿಂದ ಸಾಕಷ್ಟು ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತು, ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸದಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸೂಚಿಸಿದರು.
ಭಾರತ್ ನಿರ್ಮಾಣದ ಸಾರ್ವಜನಿಕ ಮಾಹಿತಿ ಆಂದೋಲನ ಆಯೋಜನೆ ಹಿನ್ನೆಲೆಯಲ್ಲಿ ಬುಧವಾರ ಕರೆದಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿಯಾನದಲ್ಲಿ ಪ್ರಾತ್ಯಕ್ಷಿಕೆ, ಕಿರುಚಿತ್ರಗಳ ಪ್ರದರ್ಶನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಬೇಕಿದೆ ಎಂದರು.
3 ದಿನದ ಕಾರ್ಯಕ್ರಮ: ಭಾರತ್ ನಿರ್ಮಾಣ ಅಭಿಯಾನವನ್ನು ಡಿ.7 ರಿಂದ 9 ರವರೆಗೆ ಮೂರು ದಿನಗಳ ಕಾಲ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುವುದು. ಅಭಿಯಾನದಲ್ಲಿ ಈ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯು ಲಭ್ಯವಿರಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸುಮಾರು 40 ಮಳಿಗೆಗಳನ್ನು ಅಭಿಯಾನದಲ್ಲಿ ತೆರೆಯಲಾಗುವುದು. ಪ್ರತಿಯೊಂದು ಇಲಾಖೆಯ ಕಾರ್ಯಕ್ರಮವನ್ನು ಅಲ್ಲಿ ಒದಗಿಸಬೇಕು. ಅಭಿಯಾನವನ್ನು ಯಶಸ್ವಿಯಾಗಿ ಸಂಘಟಿಸಲು ಅಪರ ಜಿಲ್ಲಾಧಿಕಾರಿ ಬಸವರಾಜು ಹಾಗೂ ಜಿ.ಪಂ. ಮುಖ್ಯ ಯೋಜನಾಧಿಕಾರಿ ಧನುಷ್ ನೇತೃತ್ವದಲ್ಲಿ ನೋಡಲ್ ಅಧಿಕಾರಿಗಳ
ತಂಡ ನೇಮಿಸಲಾಗಿದೆ ಎಂದರು.
ಕೃಷಿ ಮೇಳ ಮಾದರಿ: ಕನಕಪುರದಲ್ಲಿ ನಡೆದ ಕೃಷಿ ಮೇಳದಂತೆಯೇ ರಾಮನಗರದಲ್ಲಿ ಭಾರತ್ ನಿರ್ಮಾಣ ಅಭಿಯಾನವನ್ನೂ ಯಶಸ್ವಿಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು. ಇಲಾಖಾವಾರು ಯೋಜನಾ ಅನುಷ್ಠಾನದಲ್ಲಿ ಆಗಿರುವ ಯಶಸ್ಸಿನ ಮಾಹಿತಿಯನ್ನು ಅಲ್ಲಿ ಅಳವಡಿಸಬೇಕು ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಡಾ.ವಿಶ್ವನಾಥ್, ಗ್ರಾಮ ಮಟ್ಟದಲ್ಲಿ ಯೋಜನೆಗಳ ಗುರಿ ಮತ್ತು ಸಾಧನೆ ವಿವರವನ್ನು ಇಲಾಖೆಗಳು ಮಳಿಗೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ವಿವರ: ಅಭಿಯಾನದ ಉದ್ಘಾಟನೆ ಡಿ.7ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಕಿರುಚಿತ್ರ ಪ್ರದರ್ಶನ, ಸರ್ವ ಶಿಕ್ಷಣ ಅಭಿಯಾನ, ಸಾಮಾಜಿಕ ಅರಣ್ಯ, ಮಹಿಳಾ ಸಬಲೀಕರಣ ಕುರಿತ ಮಾಹಿತಿ ಒದಗಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿ ವೆಂಕಟೇಶ್ವರನ್ ನಿರ್ವಹಿಸಿದರು.
ಡಿ.8 ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೃಷಿ, ತೋಟಗಾರಿಕೆ, ಕುಡಿಯುವ ನೀರು, ಸ್ವಚ್ಛತೆ, ಜಲ ಸಂಪನ್ಮೂಲ, ಮಧ್ಯಾಹ್ನದ ಬಿಸಿಯೂಟ, ನರೇಗ ಕುರಿತಾಗಿ ವಿಚಾರ ಸಂಕಿರಣ, ಡಿ.9 ರಂದು ಸಮಾರೋಪ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಸವರಾಜು, ಅಧಿಕಾರಿಗಳಾದ ಸಿ.ಶ್ರೀನಿವಾಸನ್, ಶ್ರೀನಿವಾಸನ್, ವೇಣುಗೋಪಾಲ್, ದುರ್ಗಪ್ಪ, ಅಣ್ಣಯ್ಯ, ಪ್ರೇಮ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

