ಬೆಂಗಳೂರು ಗ್ರಾಮಾಂತರ

ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಿ

Published On :

ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ ನ.27
ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ರಾಜ್ಯ ಸರ್ಕಾರ ಭೂರಹಿತ ಜನರಿಗೆ ಅರ್ಹತೆ ಮೇರೆಗೆ ಭೂಮಿಯನ್ನು ನೀಡಬೇಕು. ವಿ.ಬಾಲಸುಬ್ರಮಣಿಯನ್ ಸಮಿತಿಯ ವರದಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಹುಜನ ಸಮಾಜ ಪಕ್ಷ ಆಗ್ರಹಿಸಿದೆ.
ಈ ಕುರಿತು ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಮುಖಂಡರು, ವರದಿ ಪ್ರಕಾರ ರಾಜ್ಯದಲ್ಲಿ ಸುಮಾರು 12 ರಿಂದ 15 ಲಕ್ಷ ಎಕರೆ ಸರ್ಕಾರಿ ಭೂಮಿ ಅನಧಿಕೃತ ಒತ್ತುವರಿಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳೂ ಸೇರಿದಂತೆ ಹಲವಡೆ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಭೂ ಒತ್ತುವರಿದಾರರು ಲಕ್ಷಾಂತರ ಎಕರೆ ಭೂಮಿ ಕಬಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ಕಾರ್ಯೋನ್ಮುಖರಾಗಿ ಬಾಲಸುಬ್ರಮಣಿಯನ್ ವರದಿಯನ್ನು ಒಪ್ಪಿಕೊಳ್ಳಬೇಕು. ಅದರನ್ವಯ ಪರಿಶಿಷ್ಟ ಜಾತಿ, ವರ್ಗಗಳು, ಹಿಂದುಳಿದ ಜಾತಿಗಳ ಭೂರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿಯಲ್ಲಿ ತೊಡಗಿರುವವರು ನಮೂನೆ 50, 53ರ ಪ್ರಕಾರ ಅರ್ಜಿ ಸಲ್ಲಿಸಿರುವ ಭೂಮಿಯನ್ನು ಸಕ್ರಮಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅವರಿಗೆ ಕೂಡಲೇ ಸಾಗುವಳಿ ಪತ್ರ ವಿತರಿಸಬೇಕು. ಭೂಮಾಲೀಕರು, ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಮಾಫಿಯಾಗಳು ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ಸರ್ಕಾರ ಕೂಡಲೇ ವಶಪಡ್ಸಿಕೊಂಡು ಭೂರಹಿತ ಕುಟುಂಬಗಳಿಗೆ ಹಂಚಬೇಕು ಎಂದು ಅಗ್ರಹಿಸಿದರು.
ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದ ರಾಜಕೀಯ ಪ್ರಜಾಪ್ರಭುತ್ವ ಅರ್ಥಹೀನ. ಅನ್ನಭಾಗ್ಯ ಯೋಜನೆ ನಂತರ ಇರಲಿ, ಮೊದಲು ಅನ್ನ ಬೆಳೆವ ಭೂಮಿ ನಮಗೆ ಸಿಗಲಿ ಎನ್ನುವುದು ನಮ್ಮ ಒತ್ತಾಯ. 1991 ಮತ್ತು 1999ರ ಅವಧಿಯಲ್ಲಿ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮತ್ತು ನಂತರದ ದಿನಗಳಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣಹಿಡುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು. ಸರ್ಕಾರದ ಸೀಲಿಂಗ್ ನಿಯಮಿತಿಗಿಂತ ಹೆಚ್ಚುವರಿ ಭೂಮಿಯನ್ನು ಹೊಂದಿರುವ ಭೂ ಮಾಲೀಕರಿಂದ ಸರ್ಕಾರ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ವಿವರಿಸಿದರು.
ಜಿಲ್ಲಾ ಬಿಎಸ್ಪಿ ಅಧ್ಯಕ್ಷ ನಂದಿಗುಂಡ ಪಿ.ವೆಂಕಟೇಶ್, ಉಪಾಧ್ಯಕ್ಷ ದೊಡ್ಡಯ್ಯ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಟಿ.ಬಸವರಾಜು ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.