ಬೆಂಗಳೂರು ಗ್ರಾಮಾಂತರ

ಸರ್ಕಾರದಿಂದ ದ್ವೇಷದ ರಾಜಕಾರಣ: ರಂಗಸ್ವಾಮಿ

Published On :

ಚನ್ನಪಟ್ಟಣ: ಬರಪೀಡಿತ ಪಟ್ಟಿಯಿಂದ ತಾಲೂಕನ್ನು ಹೊರಗಿಡುವ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಸಂಸದರು ಮತ್ತು ಶಾಸಕರು ವಿಫಲರಾಗಿರುವುದು ಮತ್ತೂ ದುರಂತ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವಾರ್ಷಿಕ 839 ಮಿ.ಮೀ. ಸರಾಸರಿ ಮಳೆ ತಾಲೂಕಿಗೆ ಹಾಗ ಬೇಕಿತ್ತಾದರೂ ಈ ವರ್ಷ ಇದರಲ್ಲಿ ಅರ್ಧ ಪ್ರಮಾಣದಷ್ಟು ಮಳೆಯಾಗಿಲ್ಲ, ತಾಲೂಕಿನ 115 ಕೆರೆಗಳ ಪೈಕಿ ಒಂದೇ ಒಂದು ಕೆರೆ ತುಂಬಿಲ್ಲ, ತಾಲೂಕಿನ ಸಾಂಪ್ರದಾಯಿಕ ಜಲ ಮೂಲಗಳು ಬತ್ತಿ ಹೋಗಿ 16 ವರ್ಷಗಳು ಕಳೆದಿವೆ  ಇಂತಹ ದಾರುಣ ಪರಿಸ್ಥಿತಿಯನ್ನು ತಾಲೂಕು ಎದುರಿಸುತ್ತಿರುವಾಗ ಇದ್ದಕ್ಕಿದ್ದಂತೆ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈ ಬಿಟ್ಟಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
29247 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಅರ್ಧದಷ್ಟು ಮಾತ್ರ ಬಿತ್ತನೆ ಕಾರ್ಯನಡೆದಿದ್ದು, ಬಿತ್ತಿದ ಭೂಮಿಯಲ್ಲಿ ಮಳೆ ಕೊರತೆಯಿಂದ ಪೈರುಗಳು ಒಣಗುತ್ತಿವೆ. ಇಲ್ಲಿನ ರೈತರು ದಿನನಿತ್ಯ ಅನುಭವಿಸುತ್ತಿರುವ ನೋವು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸದರು ಮತ್ತು ಶಾಸಕರು ಈ ಕ್ಷೇತ್ರದ ಜನತೆಯಿಂದ ಮತಪಡೆದು ಆಯ್ಕೆಯಾಗಿದ್ದೇವೆ, ಅವರು ಸುಖ-ದುಃಖಗಳಿಗೆ ದನಿಯಾಗಬೇಕು ಎಂಬುದನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯ ಮೂರೂ ತಾಲೂಕನ್ನು ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಿ ನಮ್ಮ ತಾಲೂಕನ್ನು ಕೈಬಿಟ್ಟಿರುವಾಗ ಸಂಸದರು ಮೌನಕ್ಕೆ ಶರಣಾಗಿರುವುದು ಸರಿಯೇ ಎಂದಿದ್ದಾರೆ.
ನೆರೆಯ ಮಂಡ್ಯ ಮದ್ದೂರಿನಲ್ಲಿ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿವೆಯಾದರೂ ಆ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಮಳೆಯಾಶ್ರಿತ ಪ್ರದೇಶವಾದ ನಮ್ಮ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈ ಬಿಡಲಾಗಿದ್ದು ಇದು ಎಷ್ಟರ ಮಟ್ಟಿಗೆ ಸಾಧು ಎಂದಿರುವ ಅವರು ಸಂಸದರು ಈ ವಿಷಯದಲ್ಲಿ ತಾಲೂಕಿನ ಜನತೆಗೆ ದ್ರೋಹ ಬಗೆದಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.