ಬೆಂಗಳೂರು ಗ್ರಾಮಾಂತರ

ಬಸವಣ್ಣ ದೇಗುಲ ಸಮೀಪದ ಕಟ್ಟಡ ತೆರವು

Published On :

ದೊಡ್ಡಬಳ್ಳಾಪುರ: ಇಲ್ಲಿನ ಪುರಾತನ ಬಯಲು ಬಸವಣ್ಣ ದೇವಾಲಯದ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿದ್ದ ಹಳೆಯದಾದ ಕಟ್ಟಡವೊಂದನ್ನು ನಗರಸಭೆ ಸಿಬ್ಬಂದಿ ಬೆಳ್ಳಂಬೆಳಗ್ಗೆ ದಿಢೀರನೆ ತೆರವು ಮಾಡಿರುವುದು ಈಗ ವಿವಾದದ ವಿಚಾರವಾಗಿದೆ.
ಈ ಕಾರ್ಯಾಚರಣೆ ಬಗ್ಗೆ ಸ್ಥಳೀಯರನೇಕರು ಮತ್ತು ಬಯಲು ಬಸವಣ್ಣ ಸೇವಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕಟ್ಟಡ ಸಾರ್ವಜನಿಕವಾಗಿ ಉಪಯೋಗವಾಗುತ್ತಿತ್ತು. ಬರುವ ಸೋಮವಾರ ಇಲ್ಲಿನ ಪರಂಪರೆಯಿಂದ ನಡೆದುಕೊಂಡು ಬರುವ ಕಡಲೇಕಾಯಿ ಪರಿಷೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ ವಾರವಷ್ಟೇ ಕಟ್ಟಡದ ಬಗ್ಗೆ ಚರ್ಚೆಗಳು ನಡೆದಿವೆ. ಸ್ವತಃ ನಗರಸಭೆ ಪೌರಾಯುಕ್ತರ ಜೊತೆಗೇ ಮಾತುಕತೆ ನಡೆದು ಪರಿಷೆ ಮುಗಿಯುವವರೆಗೂ ಯಾವುದೇ ಕಾರ್ಯಾಚರಣೆ ಮಾಡಬಾರದು ಎಂದು ಮನವಿ ಮಾಡಲಾಗಿದೆ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳ ಪೂರ್ವ ನಿಯೋಜಿತ ಪಿತೂರಿಯಿಂದ ಈ ಕಾರ್ಯಾಚರಣೆ ನಡೆದಿದೆ ಎಂದು ಸಮಿತಿಯ ಅಧ್ಯಕ್ಷರು-ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಮಾಜಿ ಶಾಸಕರ ತರಾಟೆ: ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಆಯುಕ್ತ ಡಾ.ಬಿಳಿಕೆಂಚಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು ಕಟ್ಟಡ ತೆರವು ಮಾಡುವ ಮೂಲಕ ಯಾವ ಪುರುಷಾರ್ಥ ಸಾಧನೆಯಾಗಿದೆ ಎಂದು ಪ್ರಶ್ನಿಸಿದರು. ಹಲವರಿಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತಿದ್ದ ಕಟ್ಟಡ ಯಾರಿಗೂ ತೊಂದರೆಯಂತೂ ಆಗಿರಲಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಬೆಳಗಿನಜಾವದ ವೇಳೆ ಕಾರ್ಯಾಚರಣೆ ನಡೆಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಈ ಬಗೆಯ ವಿಚಾರದಲ್ಲಿ ಪ್ರಜ್ಞಾ ಪೂರ್ವಕವಾಗಿ ನಡೆದುಕೊಳ್ಳುವಂತೆ ಸಲಹೆ ನೀಡಿದರು.
ದೇಗುಲದ ಸಮೀಪದಲ್ಲೇ ಇರುವ ನಗರಸಭೆ ಪಾರ್ಕಿಗೂ ಈ ಜಾಗಕ್ಕೂ ಸಂಬಂಧವೇ ಇರಲಿಲ್ಲ. ಘಟನೆಯಿಂದ ಭಕ್ತಾದಿಗಳ ಮನಸ್ಸಿಗೆ ನೋವಾಗಿದೆ. ಈ ಕಟ್ಟಡವನ್ನು ಇಲ್ಲಿನ ಯುವಕರು ಸ್ವಯಂ ಪ್ರೇರಣೆಯಿಂದ ನವೀಕರಿಸುವ ಹಂತದಲ್ಲಿದ್ದರು. ಈ ಜಾಗದಲ್ಲಿ ಹಲವು ವರ್ಷಗಳಿಂದ ಕಡಲೇಕಾಯಿ ಪರಿಷೆಗೆ ಬರುವ ಕಡಲೇಕಾಯಿ ಮತ್ತಿತರೆ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗುತ್ತಿತ್ತು.
ಎಲ್ಲರಿಗೂ ಉಪಯೋಗವಾಗುತ್ತಿತ್ತು.ಆದರೆ ಯಾವ ಕಾರಣಕ್ಕಾಗಿ ಕಾರ್ಯಾಚರಣೆಯನ್ನು ಕಡಲೇಕಾಯಿ ಪರಿಷೆ ನಡೆಯುವ ಮುನ್ನವೇ ಮಾಡಲಾಗಿದೆ ಎಂಬುದು ನಿಗೂಢವಾಗಿದೆ ಈ ಬಗ್ಗೆ ತಹಸೀಲ್ದಾರ್ ಮತ್ತು ಶಾಸಕರು ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಸಮಿತಿಯ ಗೌ.ಅಧ್ಯಕ್ಷ ಎನ್.ನರಸಿಂಹಮೂರ್ತಿ, ಅಧ್ಯಕ್ಷ ಕೆ.ವಿ.ರವಿಕುಮಾರ್, ಕಾರ್ಯದರ್ಶಿ ಡಿ.ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ ಮತ್ತಿತರರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.