ಬೆಂಗಳೂರು ಗ್ರಾಮಾಂತರ

ಭೂ ಅಕ್ರಮಗಳ ತಡೆಗೆ ಜಿಲ್ಲಾಧಿಕಾರಿ ಚಿಂತನೆ

Published On :

 ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ನ.30
ಬೆಂಗಳೂರು ಮಗ್ಗುಲಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ರಿಯಲ್ ಎಸ್ಟೇಟ್ ದಂಧೆಕೋರರ ಹಾವಳಿಯೂ ಹೆಚ್ಚಿದೆ. ಭೂ ಮಾಫಿಯಾ ಜತೆ ಶಾಮೀಲಾದ ಕಂದಾಯ ಅಧಿಕಾರಿಗಳ ಆಟಾಟೋಪಕ್ಕೆ ಅಂತ್ಯಹಾಡಿ, ಭೂ ಅಕ್ರಮಗಳ ತಡೆಗೆ ಮುಂದಾಗಲು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಚಿಂತನೆ ನಡೆಸಿದ್ದಾರೆ.
ಈಗಾಗಲೇ ಸಾಬೀತಾಗಿರುವ ಭೂ ಅಕ್ರಮಗಳ ವಿರುದ್ಧ ಕಾನೂನು ಕ್ರಮ, ಬಯಲಾಗಿರುವ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯ ಜತೆಗೆ ಮುಂದೆ ಅಕ್ರಮಗಳು ಮರುಕಳಿಸದಂತೆ ತಹಸೀಲ್ದಾರ್ ಸಹಿತ  ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಆಯೋಜನೆಗೆ ವಿಶ್ವನಾಥ್ ಉದ್ದೇಶಿಸಿದ್ದಾರೆ.   
ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಆಮಿಷಕ್ಕೆ ಒಳಗಾಗಿ ಅಕ್ರಮಗಳಲ್ಲಿ ಪಾಲುದಾರರಾಗುತ್ತಿದ್ದಾರೆ. ಹೀಗಾಗಿ ಅವರ ಕರ್ತವ್ಯ, ಜವಬ್ದಾರಿ, ಸರ್ಕಾರಿ ಆಸ್ತಿಪಾಸ್ತಿ ರಕ್ಷಣೆ, ಕಾನೂನು ಪಾಲನೆ ಸೇರಿದಂತೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಇನ್ನೊಮ್ಮೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡಿಸೆಂಬರ್ ಅಂತ್ಯದೊಳಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಅಕ್ರಮಗಳ ತಾಂಡವ: ನಗರೀಕರಣಕ್ಕೆ ಮೈಯ್ಯೊಡ್ಡಿರುವ ರಾಮನಗರ ಜಿಲ್ಲೆಯಲ್ಲಿ ಕೈಗಾರೀಕರಣವೂ ಬೆಂಗಳೂರಿನಷ್ಟೇ ವೇಗವಾಗಿ ಬೆಳೆಯುತ್ತಿದೆ.
ಹೀಗಾಗಿ ಜಿಲ್ಲೆಯ ಗೋಮಾಳ, ಅರಣ್ಯ ಪ್ರದೇಶ ಸಹಿತ ಸರ್ಕಾರಿ ಭೂಮಿಯ ಕಬಳಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಉದ್ಯಮಿಗಳು, ಭೂ ಮಾಫಿಯಾಕ್ಕೆ ಕಂದಾಯ ಅಧಿಕಾರಿಗಳೇ ಧಾರೆ ಎರೆದು ಕೊಡುತ್ತಿದ್ದಾರೆ.
ವಿಶ್ವನಾಥ್ ಅವರು ರಾಮನಗರ ಜಿಲ್ಲೆಗೆ ವರ್ಗವಾಗಿ ಬಂದ ಬೆನ್ನಲ್ಲೇ ನಾಲ್ಕಾರು ಭೂ ಅಕ್ರಮ ಪ್ರಕರಣಗಳು ಬೆಳಕಿಗೆ ಬಂದಿದೆ. ಸರ್ಕಾರಿ ಕೆರೆ-ಕಟ್ಟೆ, ರಾಜ ಕಾಲುವೆ, ರಸ್ತೆಗಳೇ ಮಾಯವಾಗಿವೆ. ಬೋಗಸ್ ಖಾತೆ, ಪೌತಿ ಖಾತೆ ಬದಲಾವಣೆಯಲ್ಲಿ ಅಕ್ರಮಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಅವರು ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ.
ಭೂ ದಾಖಲೆಗಳು, ಸಕಾಲ ಯೋಜನೆಯಡಿ ಅರ್ಜಿ ವಿಲೇವಾರಿ, ಮಾಹಿತಿ ಹಕ್ಕು ಅಧಿನಿಯಮದ ಅರ್ಜಿ ಪ್ರಕರಣ, ಬಿಪಿಎಲ್ ಲ್ಯಾಂರ್ಡ್ ಹಂಚಿಕೆ, ಭೂ ವ್ಯಾಜ್ಯಗಳ ವಿಲೇವಾರಿ ವಿಳಂಬ ಸೇರಿದಂತೆ ಕಂದಾಯ ಇಲಾಖೆಗೆ ಸೇರಿದ ಇನ್ನೂ ಹಲವು ವಿಷಯವಾಗಿಯೂ ದೂರುಗಳಿವೆ. ಈ ಅಂಶಗಳ ಬಗ್ಗೆಯೂ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವನ್ನು ಅವರು ಮನಗಂಡಿದ್ದಾರೆ.
ಪ್ರತಿಧ್ವನಿಸಲಿದೆ ಅಕ್ರಮ: ಬಿಡದಿ ಸುತ್ತಮುತ್ತಲ ಪ್ರದೇಶದಲ್ಲಿ ಭೂ ಕಬಳಿಕೆ ಪ್ರಕರಣಗಳು ಹೆಚ್ಚಾಗಿವೆ. ಅಬ್ಬನಕುಪ್ಪೆ ಗ್ರಾ.ಪಂ. ವ್ಯಾಪ್ತಿಯ ಏಳು ಸುತ್ತಿನ ಬೆಟ್ಟ ನೆಲಸಮ, ಸರ್ಕಾರಿ ಭೂಮಿ ನುಂಗಿದ ಮಾಫಿಯಾ, ಲಂಚದ ಹಣ ತಿಂದು ತೇಗಿದ ಕೆಐಎಡಿಬಿ ಅಧಿಕಾರಿಗಳ ಅಕ್ರಮದ ಬಗ್ಗೆ ಅತ್ತ ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಜ್ಜಾಗಿದ್ದಾರೆ.
ಅಬ್ಬನಕುಪ್ಪೆ ವ್ಯಾಪ್ತಿಯಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಸಹಸ್ರಾರು ಎಕರೆ ಸರ್ಕಾರಿ ಜಮೀನಿನ ಕಬಳಿಕೆ ಮತ್ತು ಪರಭಾರೆಯ ಇನ್ನಷ್ಟು ಪ್ರಕರಣಗಳ ಕಡತ ಕುಮಾರಸ್ವಾಮಿ ಕೈ ಸೇರಿದೆ. ಈ ಭೂ ಹಗರಣದಲ್ಲಿ ಸಾಕಷ್ಟು ರಾಜಕಾರಣಿಗಳೂ ಶಾಮೀಲಾಗಿದ್ದಾರೆ. ಅವರ ವಿರುದ್ಧ ಸಮರ ಸಾರಿದ್ದೇ ಹಿಂದಿನ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಲೆದಂಡಕ್ಕೆ ಕಾರಣವಾಗಿತೆನ್ನುವುದು  ಗುಟ್ಟಿನ ಸಂಗತಿಯೇನಲ್ಲ.  
ಇದೀಗ ಚನ್ನಪಟ್ಟಣ ತಾಲೂಕಿನ ಅಬ್ಬೂರುದೊಡ್ಡಿಯ ರೈತರೊಬ್ಬರನ್ನು ಬದುಕಿರುವಾಗಲೇ ಸಾಯಿಸಿ ಮರಣ ಪ್ರಮಾಣ ಪತ್ರ ನೀಡಿದ್ದು, ಅವರ ಪಾಲಿನ ಪಿತ್ರಾರ್ಜಿತ ಆಸ್ತಿಯನ್ನು ಬೇರೊಂದು ಕುಟುಂಬದವರಿಗೆ ಪೌತಿ ಖಾತೆ ಮಾಡಿಕೊಟ್ಟಿರುವುದು ಬಯಲಾಗಿದೆ.
ಇಂತಹ ಅದೆಷ್ಟೋ ಪ್ರಕರಣಗಳ ಅರ್ಜಿಗಳು ವಿಲೇವಾರಿ ಆಗದೆ ಕಂದಾಯ ಕಚೇರಿಯಲ್ಲಿ ಧೂಳು ಹಿಡಿಯುತ್ತಿರುವುದು ನೂತನ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ.



ಹಂತ ಹಂತವಾಗಿ ಕ್ರಮ
ರಾಮನಗರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಕಾರ್ಯವೈಖರಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕಾರ್ಯಕ್ರಮ ರೂಪಿಸಿ, ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಿದೆ. ಈ ನಿಟ್ಟಿನಲ್ಲಿ ಸಮಗ್ರ ಸಿಬ್ಬಂದಿಗೆ ತರಬೇತಿ ಆಯೋಜನೆ ಮೊದಲ ಕಾರ್ಯಕ್ರಮವಾಗಿದೆ.
-ಡಾ.ಡಿ.ಎಸ್.ವಿಶ್ವನಾಥ್
ಜಿಲ್ಲಾಧಿಕಾರಿ, ರಾಮನಗರ


ಸ್ವಾಸ್ಥ್ಯ ಕೆಡಿಸಿದ ಆಸ್ತಿ...
ಭೂಮಿ ಬೆಲೆ ಗಗನಕ್ಕೇರಿದಂತೆಲ್ಲಾ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಸಾಕಷ್ಟು ಮಂದಿ ರಕ್ತ ಸಂಬಂಧಗಳನ್ನೇ ಮರೆತು ಆಸ್ತಿಗಾಗಿಯೇ ಹಪಾಹಪಿಸುತ್ತಿದ್ದಾರೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ನಡುವಿನ ಜಗಳ ತಾರಕಕ್ಕೇರಿದೆ. ದೋಖಾ ಆದವರು ಸಿವಿಲ್ ವ್ಯಾಜ್ಯಗಳನ್ನು ಹೊತ್ತು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಆಸ್ತಿಯಿಂದಾಗಿಯೇ ಸಮಾಜದ ಸ್ವಾಸ್ಥ್ಯ ಕೆಡಲಾರಂಭಿಸಿದೆ. ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕಿನ ಪರಿಣಾಮವೂ ಕೌಟುಂಬಿಕ ಕದನಗಳು ತಲೆದೋರಿವೆ. ಕೆಲವರಂತೂ  ಆಸ್ತಿಗಾಗಿ ರಕ್ತಪಿಪಾಸುಗಳಾಗಿದ್ದಾರೆ. ಮನೆ ಜಗಳಗಳು ಬೀದಿಗೆ ಬಂದಿವೆ. ಸಾಕಷ್ಟು ಕೊಲೆಗಳೂ ನಡೆದು ಸಮಾಜವನ್ನೇ ತಲ್ಲಣಗೊಳಿಸಿದೆ. ಆಸ್ತಿಗಾಗಿಯೇ ಹಂಬಲಿಸಿದವರು ಅದರ ವಿನಃ ಮತ್ತಿನ್ನೇನೂ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ.  ಪಿತ್ರಾರ್ಜಿತ ಆಸ್ತಿ ಇರುವ ಕುಟುಂಬಗಳಲ್ಲಿ ವಯಸ್ಸಾದ ಪೋಷಕರ ಪೋಷಣೆಯತ್ತ ಮಕ್ಕಳು ಅಷ್ಟಾಗಿ ಗಮನ ಹರಿಸುತ್ತಿಲ್ಲ. ಆದರೆ, ಸ್ವಯಾರ್ಜಿತ ಆಸ್ತಿ ಹೊಂದಿದ ಪೋಷಕರ ಪೋಷಣೆಗೆ ತಾಮುಂದು ನಾಮುಂದು ಎಂದು ಗುದ್ದಾಡುವ ಸೋಗಲಾಡಿಗಳು ಹೆಚ್ಚಾಗಿದ್ದಾರೆ. ಅದೆಷ್ಟೋ ಉಯಿಲು, ಜಮೀನು ನೋಂದಣಿ ಪತ್ರಗಳು ಗುಟ್ಟಾಗಿಯೇ ನಡೆದು ಹೋಗಿರುವುದೂ ಉಂಟು.
ವ್ಯಾಜ್ಯದಿಂದ ಬೇಸತ್ತು ಆತ್ಮಹತ್ಯೆ
ವರ್ಷದ ಹಿಂದಷ್ಟೇ ರಾಮನಗರದ ಮಿನಿ ವಿಧಾನಸೌಧ ಕಚೇರಿಯ ಎರಡನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ಜಾಲಮಂಗಲದ ರೈತ ಗಂಗಯ್ಯನ ಆತ್ಮಹತ್ಯೆಗೂ ಕಂದಾಯ ಇಲಾಖೆಯ ವೈಫಲ್ಯವೇ ನೇರ ಕಾರಣವೆನ್ನುವುದು ನಿರ್ವಿವಾದ ಸತ್ಯ. ಆರೇಳು ವರ್ಷ ಆ ರೈತನನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಎಡತಾಕುವಂತೆ ಮಾಡಿದ್ದರು. ಬದುಕಿದ್ದಾಗ ವ್ಯಾಜ್ಯ ಬಗೆಹರಿಸಿ ರೈತನಿಗೆ ನ್ಯಾಯ ದೊರಕಿಸಿಕೊಡಲಿಲ್ಲ. ಆತ ಸತ್ತ ನಂತರ ವ್ಯಾಜ್ಯ ಇತ್ಯರ್ಥಗೊಳಿಸಿ, ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಂಡರು.
ಕೊಲೆ ಯತ್ನದ ಪ್ರಕರಣ
ಮೊನ್ನೆಯಷ್ಟೇ ರಾಮನಗರ ತಾಲೂಕಿನ ಚಿಕ್ಕಗಂಗವಾಡಿಯಲ್ಲಿ ತಾಯಿ ಭಾಗ್ಯಮ್ಮ, ಮಗ ಶಶಿಕುಮಾರನ ಕೊಲೆ ಯತ್ನದಂತಹ ಗಂಭೀರ ಪ್ರಕರಣಕ್ಕೂ ಕಂದಾಯ ಇಲಾಖೆ ಮಾಡಿಟ್ಟ ಅವಾಂತರ, ಎಡವಟ್ಟೇ ಕಾರಣವಾಗಿದೆ. ಗೋಮಾಳ ಜಮೀನು ಸಾಗುವಳಿ ಮಾಡುತ್ತಿರುವವರೇ ಒಬ್ಬರಾದರೆ, ಅದನ್ನು ದರಖಾಸ್ತು ಮಂಜೂರು ಮಾಡಿರುವುದೇ ಇನ್ನೊಬ್ಬರಿಗೆ. ಈ ಪರಿಣಾಮ ಎರಡು ಕುಟುಂಬಗಳ ನಡುವೆ ವೈಷಮ್ಯ ಮೂಡಿ, ನೆತ್ತರು ನೆಲಕ್ಕೆ ಹರಿದಿದೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.