ವಿವೇಕದಿಂದ ಸ್ವಾಭಿಮಾನಿ ಬದುಕು ಸಾಧ್ಯ
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ನ.30
ವಿವೇಕಾನಂದ ಜಗತ್ತು ಕಂಡ ಅತ್ಯಂತ ಶ್ರೇಷ್ಠ ವಿಚಾರವಾದಿ ಮತ್ತು ಸ್ವಾಭಿಮಾನಿ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲ ಭಾರತೀಯ ಯುವ ಮನಸ್ಸುಗಳಿಗೆ ಇದೆ ಎಂದು ಪುಷ್ಪಾಂಡಜ ಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಕೋಷ್ಟದ ಅಡಿಯಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಧಕ ಶಿಕ್ಷಕರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತ ಜಗತ್ತಿಗೇ ಮಾದರಿ ಎನಿಸುವಷ್ಟು ಜ್ಞಾನ ಸಂಪತ್ತನ್ನು ಹೊಂದಿದೆ. ಆದರೆ ನಮ್ಮ ಆಲೋಚನೆಗಳು ಇತರರ ಮೂಲಕ ಬೆಳಕಿಗೆ ಬರುತ್ತಿರುವುದು ವಿಷಾದನೀಯ. ನಮ್ಮ ಆಲೋಚನೆಗಳು ಈ ನೆಲದ ಸಂಸ್ಕೃತಿಯ ಜೊತೆಗೆ ವಿಶ್ವಾತ್ಮಕವಾಗಿ ಬೆಳೆಯಬೇಕಿದೆ. ಅಂತಹ ಕನಸು ಕಂಡ ವಿವೇಕರ ಚಿಂತನೆಗಳು ಇಂದು ಭಾಷಣದ ವಿಚಾರವಾಗಿರುವುದು ದುರಂತ. ದೇಶದಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಆದರೆ ಅವುಗಳ ಸದ್ಬಳಕೆಯ ವಿವೇಚನೆ ಕೊರತೆ ಎದ್ದು ಕಾಣುತ್ತಿದೆ. ಶೈಕ್ಷಣಿಕವಾಗಿ ನಮ್ಮ ಆಲೋಚನೆಗಳು ಶುಭ್ರವಾಗಿರಬೇಕು. ಆಗ ಮಾತ್ರ ಉತ್ತಮ ಹೊಣೆಯಾಧಾರಿತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಕೋಷ್ಟದ ಅಡಿಯಲ್ಲಿ ಮಹತ್ವದ ಕಾರ್ಯಕ್ರಮ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರಕ್ಕಾಗಿ ದುಡಿದ ಮಹನೀಯರನ್ನು ವಿವೇಕಾನಂದರ ಹೆಸರಿನಲ್ಲಿ ಗೌರವಿಸುತ್ತಿರುವುದು ಗಣನೀಯ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಕೋಷ್ಟದ ರಾಜ್ಯ ಸಂಚಾಲಕ ಎಂ.ನೀಲಯ್ಯ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಮತ್ತು ರಾಮನಗರ ಜಿಲ್ಲೆಯ 150 ಮಂದಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸಾಧಕ ಶಿಕ್ಷಕರು, ಉಪನ್ಯಾಸಕರು ಮತ್ತು ಆಡಳಿತ ಮಂಡಲಿಯ ಪ್ರತಿನಿಧಿಗಳನ್ನು ಸನ್ಮಾನಿಸಿ ವಿವೇಕರತ್ನ ಪ್ರಶಸ್ತಿ ನೀಡಲಾಯಿತು. ಪ್ರಕೋಷ್ಟದ ಪ್ರಮುಖರಾದ ಪ್ರದೀಪ್, ತಾಲೂಕು ಸಂಚಾಲಕ ಸದಾಶಿವು ಮತ್ತಿರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

