ಬೆಂಗಳೂರು ಗ್ರಾಮಾಂತರ

ಸಚಿವ ಡಿ.ಕೆ. ಶಿವಕುಮಾರ್ ಪ್ರಚಾರ ನಾಳೆ

Published On :

ಕನಕಪುರ: ಏಪ್ರಿಲ್ 17 ರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಬೆಂಬಲಿಸಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಕನಕಪುರ ಕ್ಷೇತ್ರ ವ್ಯಾಪ್ತಿಯ 29 ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಏ.3 ಹಾಗೂ ಏ.4 ರಂದು ಪ್ರಚಾರ ನಡೆಸಲಿದ್ದಾರೆ ಎಂದು ಸಚಿವರ ಮಾಧ್ಯಮ ಕಾರ್ಯದರ್ಶಿ ಮರಸಪ್ಪರವಿ ತಿಳಿಸಿದ್ದಾರೆ.  ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರವಿ, ಪಟ್ಟಣ ಪ್ರಾಧಿಕಾರದ ಅಧ್ಯಕ್ಷ ವಿಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಜಿಪಂ ಸದಸ್ಯರಾದ ಇಕ್ಬಾಲ್ ಹುಸೇನ್, ವೆಂಕಟೇಶಯ್ಯ, ಸಿ.ವಿಜಯ್, ಆರ್. ಕೃಷ್ಣಮೂರ್ತಿ, ವಿ.ಶ್ರೀನಿವಾಸ್ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
'ಯುಪಿಎ ವಿಶ್ವವ್ಯಾಪಾರ ಸಂಸ್ಥೆ ಕೈಗೊಂಬೆ'
ಹೊಸಕೋಟೆ: ಯುಪಿಎ ವಿಶ್ವವ್ಯಾಪಾರ ಸಂಸ್ಥೆಯ ಕೈಗೊಂಬೆಯಾಗಿ ವರ್ತಿಸಿದ್ದರಿಂದ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಹೇಳಿದರು. ಪಟ್ಟಣದ ಪಕ್ಷದ ಕಚೇರಿ ಮುಂಭಾಗ ಬೈಕ್ ರ್ಯಾಲಿ ಉದ್ಘಾಟಿಸಿ ಮಾತನಾಡಿ, ಖಾಸಗೀಕರಣ, ಉದಾರೀಕರಣ ನೀತಿಯಿಂದ ಅಗತ್ಯ ವಸ್ತುವಿನ ನಿರಂತರ ಬೆಲೆ ಏರಿಕೆ, 2ಜಿ, ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ,  ಕೇಂದ್ರ ಸರಕಾರದ ಸಾಧನೆ. ಸಾರ್ವಜನಿಕ ಉದ್ದಿಮೆಗಳ ಷೇರುಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿರುವುದರಿಂದ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡೂ ರೈತರು ಮತ್ತು ಕಾರ್ಮಿಕರ ವಿರೋಧಿ ಎಂದು ಟೀಕಿಸಿದರು. ಇಷ್ಟು ದಿನ ಸುಮ್ಮನಿದ್ದ ವೀರಪ್ಪ ಮೊಯ್ಲಿ ದಿಢೀರ್ ಎಂದು ಎತ್ತಿನಹೊಳೆ ಸೇರಿದಂತೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ದೇಶದಲ್ಲಿ ತೃತೀಯ ರಂಗ ರಚಿಸುವ ಹೇಳಿಕೆ ನೀಡಿದ ಮಾಜಿ ಪ್ರಧಾನಿ, ರಾಜ್ಯದಲ್ಲಿ ಮಾತ್ರ ನಿರ್ಲಿಪ್ತ ಮನೋಭಾವ ತಳೆದಿರುವುದರಿಂದ ಎಡ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದೆ ಎಂದು ತಿಳಿಸಿದರು. ಬೈಕ್ ರ್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಹೋಬಳಿಗಳಲ್ಲೂ ಕಾರ್ಯಕ್ರಮ ನಡೆಯಿತು. ಸಿಪಿಎಂ ತಾಲೂಕು ಅಧ್ಯಕ್ಷ ಹರೀಂದ್ರ, ಮುಖಂಡರಾದ ಗೋಪಾಲಗೌಡ, ಮನೋಹರ್, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.