ಬೆಂಗಳೂರು ಗ್ರಾಮಾಂತರ

ಅಕ್ರಮ ಮರಳು ಸಾಗಣೆಗೆ ಜಿಲ್ಲಾಡಳಿತದಿಂದ ರಹದಾರಿ

Published On :

 ಮತ್ತೀಕೆರೆ ಜಯರಾಮ್
ರಾಮನಗರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಚೆಕ್ಪೋಸ್ಟ್ ತೆರೆದು, ನಗದು ಮತ್ತು ಬಳುವಳಿಗೆ ಬಳಸುವ ಸಾಮಗ್ರಿಗಳ ತಪಾಸಣೆಯಲ್ಲಿ ತೊಡಗಿದ ಜಿಲ್ಲಾಡಳಿತವು ಅಕ್ರಮ ಮರಳು ಸಾಗಣೆಗೆ ರಹದಾರಿ ಮಾಡಿಕೊಟ್ಟಿದೆ.
ಚುನಾವಣಾ ಅಕ್ರಮಗಳ ತಡೆ ಮತ್ತು ನೀತಿ ಸಂಹಿತೆ ಪಾಲನೆಗೆ ಸಾಕಷ್ಟು ಚೆಕ್ಪೋಸ್ಟೆತೆರೆದು, ಹತ್ತಾರು ಸಂಚಾರಿ ತಂಡಗಳನ್ನು ರಚಿಸಿ ಅಧಿಕಾರಿಗಳನ್ನೇನೋ ನಿಯೋಜಿಸಿದೆ. ಅಧಿಕಾರಿಗಳ ಕಣ್ಣೆದುರೇ ಅಕ್ರಮ ಮರಳು ಸಾಗಣೆ ವಾಹನಗಳು ರಾಜಾರೋಷವಾಗಿಯೇ ಸಾಗಿ ಹೋಗುತ್ತಿವೆ.
ಅರ್ಕಾವತಿ, ಕಣ್ವ ನದಿ ಆಸುಪಾಸಿನ ಕಂದಾಯ ಜಮೀನುಗಳು, ಶಿಂಷಾ ನದಿ ಪಾತ್ರ ಮತ್ತಿತರೆ ಕಡೆ ಈಗಾಗಲೇ ಬಗೆದು ದಾಸ್ತಾನು ಮಾಡಿರುವ ಮತ್ತು ಹೊಸದಾಗಿ ತೆಗೆದ ಭಾರಿ ಪ್ರಮಾಣದ ಮರಳನ್ನು ಬೆಂಗಳೂರು ಸಹಿತ ನಾನಾ ಕಡೆಗೆ ದಂಧೆಕೋರರು ಸಾಗಣೆ ಮಾಡುತ್ತಿದ್ದಾರೆ.
ಕಣ್ತಪ್ಪಿಸಿ ಹೋಗುತ್ತಿಲ್ಲ: ಪ್ರತಿ ಬಾರಿ ಚುನಾವಣೆ ಬಂದಾಗಲೂ ಮರಳು ದಂಧೆಕೋರರಿಗೆ ಸುಗ್ಗಿಯೇ. ಈಗಲೂ ಅದೇ ಆಗಿದೆ. ಮರಳು ಸಾಗಣೆ ವಾಹನಗಳು ಚೆಕ್ ಪೋಸ್ಟ್ನಲ್ಲಿರುವ ಅಧಿಕಾರಿಗಳು ಹಾಗೂ ತಪಾಸಣಾ ತಂಡಗಳನ್ನು ಕಣ್ತಪ್ಪಿಸಿಯೇನೂ ಹೋಗುತ್ತಿಲ್ಲ.
ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಅಕ್ರಮ ಮರಳುಗಾರಿಕೆ ವಿರುದ್ಧದ ಟಾಸ್ಕ್ಫೋರ್ಮ್ ವ್ಯಾಪ್ತಿಗೆ ಒಳಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈ ಬೆಚ್ಚಗೆ ಆಗುತ್ತಿದ್ದರೆ, ಇನ್ನುಳಿದ ಅಧಿಕಾರಿಗಳು ತಮಗೂ ಮರಳಿಗೂ ಸಂಬಂಧವೇ ಇಲ್ಲವೆನ್ನುವಂತಿದ್ದಾರೆ.
ಘಟಕಗಳು ಪುನಾರಂಭ: ರಾಮನಗರ ತಾಲೂಕಿನ ಅರ್ಕಾವತಿ ನದಿ ಪಾತ್ರದಲ್ಲಿ ಮರಳುಗಾರಿಕೆ ಜತೆಗೆ ಫಿಲ್ಟರ್ ಮರಳು ದಂಧೆಯ ಘಟಕಗಳು ಪುನಾರಂಭಗೊಂಡಿವೆ. ಚುನಾವಣೆ ಮುಗಿಯುವ ತನಕ ಸಾಧ್ಯವಾದಷ್ಟು ಮರಳು ಲೂಟಿ ಮಾಡಿ, ಹಣ ಮಾಡುವುದು ದಂಧೆಕೋರರ ಉದ್ದೇಶವಾಗಿದೆ. ಶಿಂಷಾ ನದಿ ಪಾತ್ರದಲ್ಲಿ ನಾಲ್ಕಾರು ದಿನ ತೋರ್ಪಡಿಕೆಯ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಚನ್ನಪಟ್ಟಣ ತಾಲೂಕು ಆಡಳಿತ ನೆರವಾಗಿತ್ತು. ಇದಕ್ಕಾಗಿ ಮರಳು ದಂಧೆಕೋರರು ಸಾಕಷ್ಟು ಹಫ್ತಾ ನೀಡಿದ್ದಾರೆ ಎನ್ನುವ ಮಾತುಗಳು ಅಧಿಕಾರಿ ವಲಯದಿಂದಲೇ ಕೇಳಿ ಬರುತ್ತಿವೆ.
ಇನ್ನೂ ಸದ್ದು ಮಾಡಿಲ್ಲ: ಚನ್ನಪಟ್ಟಣದಲ್ಲಿ ಮರಳು ಮಾಫಿಯಾದ ಕಬಂದಬಾಹು ಸಾಕಷ್ಟು ವಿಸ್ತಾರದವರೆಗೆ ಚಾಚಿದೆ. ದಶಕದಿಂದ ಮರಳುಗಾರಿಕೆ ವಿರುದ್ಧ ತೊಡೆ ತಟ್ಟುತ್ತಲೇ ಬಂದ ಸ್ಥಳೀಯ ಶಾಸಕ ಸಿ.ಪಿ.ಯೋಗೇಶ್ವರ್ ಚುನಾವಣೆ ಕಾರಣಕ್ಕೋ ಏನೋ ಈಗ ಆ ಬಗ್ಗೆ ಗಮನ ಹರಿಸಿದಂತೆ ಕಾಣುತ್ತಿಲ್ಲ.
ಈ ಹಿಂದೆ ಇದ್ದ ವಿವಾದಿತ ತಹಸೀಲ್ದಾರ್ ಶಿವರುದ್ರಪ್ಪ ಎತ್ತಂಗಡಿ ನಂತರ ಆ ಸ್ಥಾನಕ್ಕೆ ಅರುಣಪ್ರಭ ಪುನರಾಗಮನವಾಗಿದೆ. ಮರಳುಗಾರಿಕೆ ವಿರುದ್ಧ ಸಡ್ಡು ಹೊಡೆದ ಅವರಿಗೆ ಅಧೀನ ಅಧಿಕಾರಿಗಳು, ಸಿಬ್ಬಂದಿಯ ಸೂಕ್ತ ಸಹಕಾರ ಸಿಗದ ಜತೆಗೆ ಚುನಾವಣಾ ಕರ್ತವ್ಯ ಅಡ್ಡಿಯಾದಂತಿದೆ.  ಅಕ್ರಮ ಮರಳುಗಾರಿಕೆ ತಡೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆಯನ್ನೇನೋ ರಚಿಸಲಾಗಿದೆ. ಕಾರ್ಯಪಡೆಯಲ್ಲಿರುವ ವಿವಿಧ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ, ಧನದಾಹಿ ಧೋರಣೆಯ ಪರಿಣಾಮ ಅಸಹಾಕಾರ ದಂಧೆಕೋರರಿಗೆ ವರದಾನವಾಗಿದೆ.
ಅಹೋರಾತ್ರಿ ಸಾಗಾಟ: ದಿನ ನಿತ್ಯ 200ಕ್ಕೂ ಹೆಚ್ಚು ಲಾರಿ ಲೋಡ್ನಷ್ಟು ಮರಳು ಅಹೋರಾತ್ರಿ ಬೆಂಗಳೂರು ಮಾರುಕಟ್ಟೆ ತಲುಪುತ್ತಿದೆ. ಅದೆಲ್ಲವೂ ಲೂಟಿ ಮಾಡಿದ್ದೇ ಹೊರತು ಸರ್ಕಾರಕ್ಕೆ ರಾಜಧನ ಕಟ್ಟಿ, ಸಾಗಣೆ ಮಾಡುತ್ತಿರುವುದಂತೂ ಅಲ್ಲ.
ಮರಳುಗಾರಿಕೆಯಿಂದ ರಾಮನಗರ ಜಿಲ್ಲೆ ಈಗಾಗಲೇ ಭೀಕರ ಬವಣೆಗೆ ತುತ್ತಾಗಿದೆ. ಪ್ರಾಕೃತಿಕ ಸಂಪತ್ತು ಲೂಟಿಯಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಸಾವಿರ ಅಡಿ ದಾಟಿದರೂ ಕೊಳವೆ ಬಾವಿಗಳಲ್ಲಿ ಹನಿ ನೀರು ಜಿನುಗದಂತಾಗಿರುವುದು ವಿಪರ್ಯಾಸದ ಸಂಗತಿ.
ಕೈ ಜೋಡಿಸದ ಜನತೆ: ಚನ್ನಪಟ್ಟಣದಲ್ಲಿ ಸಿದ್ದರಾಮ ಹೆಗ್ಗಡೆ ಅಕ್ರಮ ಮರಳುಗಾರಿಕೆ ವಿರುದ್ಧ ಪ್ರಾರಂಭಿಸಿದ ಚಳವಳಿಯು ವಿಷ್ಣುವರ್ಧನ್ ಅಭಿನಯದ ಮಾತಾಡ್ಮಾತಾಡ್ಮ್ಲ್ಲಿಗೆ ಸಿನೆಮಾದ ಹೂವಯ್ಯನ ಹೋರಾಟದಂತೆ ತೀವ್ರ ಸ್ವರೂಪ ಕಾಣುತ್ತದೆ ಎನ್ನುವ ನಿರೀಕ್ಷೆಯೆಲ್ಲ ಹುಸಿಯಾಯ್ತು.
ಆ ವ್ಯಕ್ತಿ ಹೊಂದಿದ ಉದ್ದೇಶ ಏನೇ ಆಗಿರಲಿ. 50 ದಿನ ಸತ್ಯಾಗ್ರಹ ನಡೆಸಿ, ಮೂಡಿಸಿದ ಜನ ಜಾಗೃತಿ ಮೆಚ್ಚುವಂಥದ್ದೇ. ಎಚ್.ಎಸ್. ದೊರೆಸ್ವಾಮಿ, ಕಡಿದಾಳ್ ಶಾಮಣ್ಣ ಸೇರಿದಂತೆ ಸಾಕಷ್ಟು ಮಂದಿ ಬಂದು ಹೋದರಾದರೂ ಚನ್ನಪಟ್ಟಣದ ಜನತೆ ರೊಚ್ಚಿಗೆದ್ದು, ಹೋರಾಟಕ್ಕೆ ಶಕ್ತಿ ತುಂಬಲಿಲ್ಲ.
ಅಧಿಕಾರಿಗಳು ಕೈಲಾಗದವರೇ: ರಾಮನಗರ ಜಿಲ್ಲಾಡಳಿತ, ಚನ್ನಪಟ್ಟಣ ಮತ್ತು ರಾಮನಗರ ತಾಲೂಕು ಆಡಳಿತದ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ವಿಷಯದಲ್ಲಿ ಕೈಲಾಗದವರೋ ದಂಧೆಕೋರರ ಮುಂದೆ ಕೈಯೊಡ್ಡಿದವರೋ ಅಥವಾ ಈ ಪ್ರದೇಶಕ್ಕೆ ಶಾಪವಾದವರೋ ಎನ್ನುವ ಪ್ರಶ್ನೆ ಜನರನ್ನು ಸಹಜವಾಗಿಯೇ ಕಾಡುತ್ತಿದೆ.
ಈ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮರಳು ದಂಧೆಗೆ ಕಡಿವಾಣ ಸವಾಲಿನದ್ದಾಗಿದೆ. ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿದ್ದರೂ ತಮಗೇನೂ ಸಂಬಂಧವೇ ಇಲ್ಲವೆನ್ನುವಂತೆ ಕಣ್ಮುಚ್ಚಿ ಕುಳಿತ ಜನತೆಯೂ ತಮ್ಮ ಭವಿಷ್ಯವನ್ನು ತಾವೇ ಮಸುಕಾಗಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.