ಕ್ಲಬ್ ದಾಳಿ ಪ್ರಕರಣ ತೇಪೆ ಹಚ್ಚಿದ ಪೊಲೀಸರು
ಚನ್ನಪಟ್ಟಣ: ಅಪ್ಪಗರೆ ಸಮೀಪದ ಪ್ರಗತಿ ರಿಕ್ರಿಯೇಷನ್ ಕ್ಲಬ್ ಮೇಲಿನ ದಾಳಿಯಲ್ಲಿ ಕೆಲವೇ ಕೆಲವು ಲಕ್ಷ ರು. ವಶಪಡಿಸಿ ಕೊಂಡಿರುವುದಾಗಿ ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆ ನೀಡಿರುವುದು ತಾಲೂಕಿನೆಲ್ಲೆಡೆ ತೀವ್ರ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.
ಪಟ್ಟಣದ ಪ್ರತಿಷ್ಠಿತ ಕ್ಲಬ್ಗಳಲ್ಲಿ ಒಂದಾಗಿರುವ ಪ್ರಗತಿ ಕ್ಲಬ್ನಲ್ಲಿ ಯುಗಾದಿ ನಿಮಿತ್ತ ಜೂಜಾಟದಲ್ಲಿ ಪಾಲ್ಗೊಂಡಿದ್ದವರು ತಾಲೂಕಿನ ಘಟಾನುಘಟಿಗಳೇ ಆಗಿದ್ದು, ಒಬ್ಬೊಬ್ಬರ ಬಳಿ ಕನಿಷ್ಠ 50 ಸಾವಿರ ರು. ಗಳಿಗೆ ಕಡಿಮೆ ಇಲ್ಲದಷ್ಟು ಹಣ ಇತ್ತು. ಆದರೆ ಪೊಲೀಸರು 79ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕೇವಲ 4.48 ಲಕ್ಷ ರು. ಗಳನ್ನು ವಶಪಡಿಸಿ ಕೊಂಡಿರುವುದಾಗಿ ಹೇಳಿಕೆ ನೀಡಿರುವುದು ಹತ್ತು ಹಲವು ಗುಮಾನಿಗಳಿಗೆ ಎಡೆಮಾಡಿದೆ.
ದಾಳಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿ ಕೊಳ್ಳಲಾಗಿದೆಯಾದರೂ ಸಿಕ್ಕ ಹಣದಲ್ಲಿ ಕೇವಲ ಶೇ.10 ಭಾಗವನ್ನು ಮಾತ್ರ ತೋರಿಸಲಾಗಿದೆ. ನಮ್ಮ ಬಳಿ ಹಣ ಇದ್ದಿದ್ದಕ್ಕೆ ಸೂಕ್ತ ದಾಖಲೆಗಳಿದ್ದು ಕಾನೂನು ಹೋರಾಟ ನಡೆಸುವುದಾಗಿ ಕೆಲ ಬಂಧಿತ ವ್ಯಕ್ತಿಗಳು ತಿಳಿಸಿದ್ದು, ಇದರಿಂದ ಕ್ಲಬ್ ಮೇಲಿನ ದಾಳಿ ಪ್ರಕರಣ ಹೊಸ ರೀತಿಯ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ.
ಹತ್ತಾರು ಲಕ್ಷ ರು. ಹಣದಲ್ಲಿ ಅಲ್ಪ ಪ್ರಮಾಣ ಮಾತ್ರ ದಾಖಲೆ ತೋರುತ್ತಿದ್ದು ಉಳಿದ ಹಣ ಏನಾಯ್ತು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಈ ಮಧ್ಯೆ ಕೆಲ ಪೊಲೀಸ್ ಸಿಬ್ಬಂದಿ ಮತ್ತು ಬಂಧಿತ ಜೂಜುಕೋರರ ನಡುವೆ ಹಣ ವಾಪಸ್ ಪಡೆಯುವ ವಿಚಾರಕ್ಕೆ ಜಗಳ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಪ್ರಮುಖರ ಕ್ಲಬ್: ಪೊಲೀಸ್ ದಾಳಿಗೊಳಗಾಗಿರುವ ಪ್ರಗತಿ ಕ್ಲಬ್ನ ಪದಾಧಿಕಾರಿಗಳು ತಾಲೂಕು ಕಾಂಗ್ರೆಸ್ನ ಪ್ರಮುಖರಾಗಿದ್ದು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ ಕ್ಲಬ್ನ ಗೌರವಾಧ್ಯಕ್ಷರಾಗಿದ್ದರೆ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪುಟ್ಟಸ್ವಾಮಿ ಕ್ಲಬ್ನ ಅಧ್ಯಕ್ಷರು. ಆಡಳಿತ ಮಂಡಲಿ ನಿರ್ದೇಶಕರ ಪಟ್ಟಿಯಲ್ಲಿ ಸಹ ಸಾಕಷ್ಟು ಕಾಂಗ್ರೆಸ್ ಪ್ರಮುಖರಿದ್ದಾರೆ. ಕಾಂಗ್ರೆಸ್ಸಿಗರ ಹಿಡಿತದಲ್ಲಿರುವ ಕ್ಲಬ್ನಲ್ಲಿ ಆಟವಾಡಿದರೆ ಪೊಲೀಸ್ ದಾಳಿ ನಡೆಯುವುದಿಲ್ಲ ಎಂಬ ನಂಬಿಕೆಯ ಮೇಲೆ ತಾಲೂಕಿನ ಬಹುತೇಕ ಮಂದಿ ಜೂಜಾಟದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.
ಕ್ಲಬ್ನ ಪ್ರಮುಖರು ನಮ್ಮ ಬಳಿ ಅನುಮತಿ ಇದೆ, ನೀವು ನಿರಾತಂಕವಾಗಿ ಆಟವಾಡಿ ಎಂದು ಭರವಸೆ ನೀಡಿದ್ದರಿಂದ ಹಬ್ಬ ಮುಗಿದರೂ ಆಟವಾಡುತ್ತಿದ್ದೆವು. ಕ್ಲಬ್ ಪದಾಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ನಾವು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವಂತಾಯಿತು ಎಂದು ಕೆಲ ಮಂದಿ ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇವರ ತಪ್ಪಿನಿಂದಾಗಿ ಕೆಲ ಮಂದಿ ಸಾಲ ಸೋಲ ಮಾಡಿ ತಂದಿದ್ದ ಲಕ್ಷಾಂತರ ರು. ಹಣ ವಿನಾಕಾರಣ ಪೊಲೀಸರ ಪಾಲಾಗಿದೆ ಎಂಬ ವಿಷಾದದ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಕ್ಲಬ್ಗೆ ಬೀಗ: ಕಾನೂನು ಬಾಹಿರವಾಗಿ ಜೂಜಾಟ ನಡೆಸುತ್ತಿದ್ದ ಪ್ರಗತಿ ಕ್ಲಬ್ಗೆ ಪೊಲೀಸರು ಬೀಗ ಹಾಕಿದ್ದಾರೆ.
ಬೀಗ ತೆರವು ಗೊಳಿಸುವಂತೆ ಶುಕ್ರವಾರ ಕ್ಲಬ್ನ ಕೆಲ ಪದಾಧಿಕಾರಿಗಳು ಎಎಸ್ಪಿ ಕುಲದೀಪ್ಕುಮಾರ್ ಆರ್. ಜೈನ್ ಬಳಿ ಮನವಿ ಮಾಡಿದರಾದರೂ, ಚುನಾವಣೆ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಕ್ಲಬ್ ತೆರೆಯಲು ಅವಕಾಶ ಮಾಡಿ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿರುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

