ಬೆಂಗಳೂರು ಗ್ರಾಮಾಂತರ

ನನ್ನನ್ನು ಅಮಾನವೀಯವಾಗಿ ನಡೆಸಿಕೊಂಡರು: ತೋಪಯ್ಯ

Published On :

ರಾಮನಗರ: ಪಕ್ಷದ ಕೈಪಿಡಿ ಮತ್ತು ಕರಪತ್ರಗಳನ್ನು ಕೊಂಡೊಯ್ಯುತ್ತಿದ್ದ ತಮ್ಮನ್ನು ಗುರುವಾರ ರಾತ್ರಿ ಚನ್ನಪಟ್ಟಣ ತಾಲೂಕಿನ ಮಾಕಳಿ ಚೆಕ್ ಪೋಸ್ಟ್ನಲ್ಲಿ ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಕೂರಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಎಸ್ಪಿ  ಅಭ್ಯರ್ಥಿ ಸಿ. ತೋಪಯ್ಯ ಆರೋಪಿಸಿದ್ದಾರೆ.
ಈ ಕುರಿತು ಅಭ್ಯರ್ಥಿ ತೋಪಯ್ಯ ಅವರು ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮುಂಜಾನೆ ಪ್ರತಿಭಟನೆ ನಡೆಸಿದ್ದಾರೆ. ನಂತರ ಸ್ವತಃ ತೋಪಯ್ಯ ಮತ್ತು ಪಕ್ಷದ ವತಿಯಿಂದ
ಚನ್ನಪಟ್ಟಣ ತಹಸೀಲ್ದಾರ್, ಬೆಂ.ಗ್ರಾ. ಕ್ಷೇತ್ರದ ಚುನಾವಣಾಧಿಕಾರಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ನಾನು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ. ಉತ್ತರ ಪ್ರದೇಶದಿಂದ ಬಂದಿದ್ದ ಪಕ್ಷದ ಕೈಪಿಡಿ ಹಾಗೂ ಕರಪತ್ರಗಳನ್ನು ಬೆಂಗಳೂರಿನ ಪಕ್ಷದ ಕಚೇರಿಯಿಂದ ಪಡೆದು, ಈ ಭಾಗದ ತಾಲೂಕು ಘಟಕಗಳಿಗೆ ತಲುಪಿಸಲಾಗಿತ್ತು. ರಾತ್ರಿ 9.30ರಲ್ಲಿ ಕುಣಿಗಲ್ ಕಡೆ ಹೊರಟಿದ್ದಾಗ ಮಾಕಳಿ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ತಾವಿದ್ದ ಕಾರು ತಡೆದು ತಪಾಸಣೆ ನಡೆಸಿದರು ಎಂದು ಅವರು ತಿಳಿಸಿದ್ದಾರೆ.
ದಲಿತನಾಗಿದ್ದಕ್ಕೆ ಕ್ರಮ: ತಾವು ಪ್ರಯಾಣಿಸುತ್ತಿದ್ದ ವಾಹನ, ಕೈಪಿಡಿ ಹಾಗೂ ಕರಪತ್ರಗಳನ್ನು ಸಾಗಿಸುವುದಕ್ಕೆ ಅನುಮತಿ ಪಡೆದುಕೊಳ್ಳಲಾಗಿತ್ತು. ಇಷ್ಟಾಗಿಯೂ ನನ್ನನ್ನು ತಡೆದು ವಶಕ್ಕೆ ತೆಗೆದುಕೊಂಡಿರುವುದು ದುರುದ್ದೇಶದಿಂದ ಕೂಡಿದೆ. ಬೇರೆ ಅಭ್ಯರ್ಥಿಗಳು, ನಾಯಕರ ಕಾರನ್ನು ತಡೆಯುವ ಗೋಜಿಗೆ ಹೋಗದ ಅಧಿಕಾರಿಗಳು ನಾನೊಬ್ಬ ದಲಿತ ಅಭ್ಯರ್ಥಿ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಮಾಡಿದ್ದಾರೆ ಎಂದು ತೋಪಯ್ಯ ಆರೋಪಿಸಿದ್ದಾರೆ.
ಬೇರೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣವನ್ನು ಸಾಗಿಸುತ್ತಿದ್ದರೂ ಕೇಳುವವರಿಲ್ಲ. ಅವರಿಂದಾಗುತ್ತಿರುವ ನೀತಿ ಸಂಹಿತೆ ಉಲ್ಲಂಘನೆಗೆ ಅಧಿಕಾರಿಗಳೇ ನೆರವಾಗುತ್ತಿದ್ದಾರೆ. ನನ್ನನ್ನು ಠಾಣೆಯಲ್ಲಿ ಕೂರಿಸಿ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದು ಎಷ್ಟರಮಟ್ಟಿಗೆ ಸರಿ. ಇದಕ್ಕೆ ಸಂಬಂಧಿಸಿದಂತೆ ಮಾಕಳಿ ಚೆಕ್ಪೋಸ್ಟ್ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದೊಮ್ಮೆ ನಾನು ಚುನಾವಣಾ ಅಕ್ರಮ ನಡೆಸಿರುವುದು, ನೀತಿ ಸಂಹಿತೆ ಉಲ್ಲಂಘಿಸಿರುವುದೇ ಆದರೆ ಆ ಸಂಬಂಧ ಪ್ರಕರಣ ದಾಖಲಿಸಬೇಕಿತ್ತು.
ನನ್ನನ್ನು ಏಕಾಏಕಿ ವಶಕ್ಕೆ ತೆಗೆದುಕೊಂಡು, ರಾತ್ರಿಯಿಡೀ ಠಾಣೆಯಲ್ಲಿ ಕೂರಿಸಿದ್ದರೂ ಯಾವುದೇ ಪ್ರಕರಣ ದಾಖಲಿಸದೆ ಬೆಳಗಾದ ನಂತರ ಬಿಡುಗಡೆ ಮಾಡಿರುವುದಾದರೂ ಏಕೆ ಎಂದು ತೋಪಯ್ಯ ಪ್ರಶ್ನಿಸಿದ್ದಾರೆ.
ತಹಸೀಲ್ದಾರ್ ಸ್ಪಷ್ಟನೆ: ಬಿಎಸ್ಪಿ ಅಭ್ಯರ್ಥಿ ಸಿ.ತೋಪಯ್ಯ ಮತ್ತು ಅವರು ಪ್ರಯಾಣಿಸುತ್ತಿದ್ದ ಕಾರು, ಅದರಲ್ಲಿದ್ದ ಪ್ರಚಾರ ಸಾಮಗ್ರಿಗಳನ್ನು ಮಾಕಳಿ ಚೆಕ್ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿತ್ತು. ದಾಖಲಾತಿಗಳು ಸರಿಯಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆಗೊಳಿಸಲಾಗಿದೆ ಎಂದು ಚನ್ನಪಟ್ಟಣ ತಹಸೀಲ್ದಾರ್ ಅರುಣಪ್ರಭ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.