ಬೆಂಗಳೂರು ಗ್ರಾಮಾಂತರ

ವೀರಾಂಜನೇಯ ದೇಗುಲದ ಬಾಗಿಲು ಒಡೆದು ಕಳವು

Published On :
ಚನ್ನಪಟ್ಟಣ: ತಾಲೂಕಿನಲ್ಲಿ ದೇವಾಲಯ ಕಳ್ಳತನ ಮತ್ತೆ ಮರುಕಳಿಸಿದ್ದು, ವಳಗೆರೆ ದೊಡ್ಡಿ ಗ್ರಾಮದ ವೀರಾಂಜನೇಯ ದೇವಾಲಯದ ಬಾಗಿಲು ಒಡೆದು ಹುಂಡಿಯಲ್ಲಿದ್ದ ಹಣ, ಮತ್ತು 500 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ. ಸೋಮುವಾರ ರಾತ್ರಿ ದೇವಾಲಯ ಕಳ್ಳತನ ಮಾಡಿದ್ದು, ಹುಂಡಿಯಲ್ಲಿ ಸಾಕಷ್ಟು ಹಣ ಇದ್ದುದಾಗಿ ದೇವಾಲಯದ ಆಡಳಿತ ಮಂಡಲಿ ಸದಸ್ಯರು ತಿಳಿಸಿದ್ದು, ದೇವರ ಕಿರೀಟ, ಮೀಸೆ ಸೇರಿದಂತೆ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಎಂ.ಕೆ.ದೊಡ್ಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಳ್ಳತನಕ್ಕೆ ಮುಂಚೆ ವಾಮಾಚಾರ ನಡೆಸಿದ್ದು, ಪ್ರಾಣಿಬಲಿ ನೀಡಿರುವ ಕುರುಹುಗಳು ದೇವಾಲಯದ ಮುಂಭಾಗದಲ್ಲಿ ಪತ್ತೆಯಾಗಿವೆ. ತಾಲೂಕಿನಾದ್ಯಂತ ಕಳೆದ ವರ್ಷ ಹಲವಾರು ದೇವಾಲಯಗಳಲ್ಲಿ ಕಳವು ನಡೆದಿತ್ತು.  ದೇವರ ಹೊಸಹಳ್ಳಿ ಸಂಜೀವರಾಯ ಸ್ವಾಮಿ, ಕೆಂಗಲ್ ಆಂಜನೇಯ ಸ್ವಾಮಿ ಸೇರಿದಂತೆ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಲಕ್ಷಾಂತರ ರು. ಮೌಲ್ಯದ ಆಭರಣ, ಹಣ ಕಳವಾಗಿ ಎರಡು ವರ್ಷ ಕಳೆದಿದೆಯಾದರೂ ಕಳ್ಳರು ಇನ್ನೂ ಸಿಕ್ಕಿಲ್ಲ. ತಾಲೂಕಿನ ದೇವಾಲಯ ಕಳ್ಳತನ ಪ್ರಕರಣಗಳು ಕಡಿಮೆಯಾಯಿತೆಂದು ಸಮಾಧಾನ ಪಟ್ಟು ಕೊಳ್ಳುವ ವೇಳೆಗೆ ಮತ್ತೆ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ತಾಲೂಕಿನಾದ್ಯಂತ ಶ್ರೀರಾಮ ನವಮಿ 
ಚನ್ನಪಟ್ಟಣ: ತಾಲೂಕಿನಾದ್ಯಂತ ಶ್ರೀರಾಮ ನವಮಿ ಹಬ್ಬ ವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು. ತಾಲೂಕಿನ ಹಲವೆಡೆ ಕೆಲ ಸಂಘಸಂಸ್ಥೆಗಳು ಮತ್ತು ಸ್ವಯಂ ಸೇವಕರು ಪಾನಕ, ನೀರು ಮಜ್ಜಿಗೆ, ಕೋಸಂಬರಿ ಯನ್ನು ರಾಮನವಮಿ ಪ್ರಯುಕ್ತ ಸಾರ್ವಜನಿಕರಿಗೆ ಹಂಚಿದರು. ತಾಲೂಕಿನ ಕೆಂಗಲ್ ಆಂಜನೇಯ, ದೇವರಹೊಸಹಳ್ಳಿ ಸಂಜೀವರಾಯ ಸ್ವಾಮಿ, ಕೂಡ್ಲೂರು ಶ್ರೀರಾಮ ದೇವಸ್ಥಾನ, ಮಳೂರಿನ ಅಪ್ರಮೇಯ ಸ್ವಾಮಿ ದೇವಸ್ಥಾನ, ಕೋಟೆಬಾಗಿಲು ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಸೇರಿದಂತೆ ತಾಲೂಕಿನ ವಿವಿಧ ರಾಮಂದಿರ, ಶ್ರೀರಾಮ ಯುವಕರ ಸಂಘಗಳ ವತಿಯಿಂದ ರಾಮನವಮಿ ಆಚರಿಸಲಾಯಿತು. ತಾಲೂಕಿನ ವಿವಿಧ ಆಟೋಚಾಲಕರ ಸಂಘ, ಕಾರು ಚಾಲಕರ ಸಂಘ, ಟೆಂಪೋ ಚಾಲಕರು ಮತ್ತು ಮಾಲೀಕರ ಸಂಘ, ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವಿವಿಧೆಡೆ ಪಾನಕ ನೀರು ಮಜ್ಜಿಗೆ ಹಂಚಲಾಯಿತು.

ಹಳೆವಿದ್ಯಾರ್ಥಿ ಸಂಘದ ಸಭೆ ಇಂದು
ಚನ್ನಪಟ್ಟಣ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಸಭೆಯನ್ನು ಏ.9 ರಂದು ಕರೆದಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಎಸ್.ಲಿಂಗಣ್ಣಯ್ಯ ತಿಳಿಸಿದ್ದಾರೆ. 

ಶ್ರೀಮಂತರು, ಬಡವರ ಮಧ್ಯೆ ನಡೆಯುತ್ತಿರುವ ಚುನಾವಣೆ: ಕೃಷ್ಣಬೈರೇಗೌಡ್ಙ
ದೇವನಹಳ್ಳಿ:  ನಮ್ಮ ದೇಶದಲ್ಲಿ ಶೇ.30ರಷ್ಟಿರುವ ಶ್ರೀಮಂತರು ಹಾಗೂ ಶೇ.70 ರಷ್ಟಿರುವ ಬಡವರ ಮಧ್ಯೆ ನಡೆಯುತ್ತಿರುವ ಚುನಾವಣೆ ಇದಾಗಿದ್ದು ನಮ್ಮದು ಬಡವರ ಪಕ್ಷವಾಗಿದೆ. ಅಲ್ಲದೆ ಕಾಂಗ್ರೆಸ್ ಪಕ್ಷ ಶ್ರೀಮಂತರಲ್ಲಿನ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿ ಬಡವರಿಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.  ಕಾಂಗ್ರೆಸ್ ರೈತರಿಗಾಗಿ  ಸಾಲ ಮನ್ನ ಮಾಡಿದೆ,  ರೈತರು ಬಳಸುವ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಿದೆ ಎಂದರು. ಕುಮಾರ ಸ್ವಾಮಿ ಎಂಪಿಗಳಾಗಿ ಸಂಸತ್ತಿಗೆ ಸರಿಯಾಗಿ ಹಾಜರಾಗದೆ ಕರ್ನಾಟಕದ ಬಗ್ಗೆ ಒಂದೂ ಪ್ರಶ್ನೆ ಮಾಡದೆ ಇರುವ ಅವರು ಯಾವ ಪುರುಷಾರ್ಥಕ್ಕಾಗಿ ರಾಮನಗರ ಜನರಿಂದ ತಿರಸ್ಕೃತಗೊಂಡು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಮತದಾರರು ಯೋಚಿಸಲಿ ಎಂದು ಕೃಷ್ಣಭೈರೇಗೌಡ ತಿಳಿಸಿದರು. ಕುಮಾರಸ್ವಾಮಿ ನಂಬಿಕೆಗೆ ಅರ್ಹರಲ್ಲ ಎಂದರು. ಇದೇ ಸಂಧರ್ಭದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ, ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಎ.ಸೋಮಣ್ಣ  ಮಾತನಾಡಿದರು. 

ಸಿಲೆಂಡರ್  ಸ್ಫೋಟ: ಮೂವರಿಗೆ ಗಾಯ
ಮಾಗಡಿ: ಗ್ಯಾಸ್ ಸಿಲೆಂಡರ್  ಸ್ಫೋಟಗೊಂಡು ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಕಾಮಣ್ಣನಗುಡಿ ಬೀದಿಯಲ್ಲಿ ನಡೆದಿದೆ. ಮಂಜುನಾಥ್, ಪತ್ನಿ ಪಂಕಜ ಹಾಗೂ ಒಂದು ವರ್ಷದ ಮಗು ಪ್ರಜ್ವಲ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು  ಗುರುತಿಸಲಾಗಿದೆ.  ಗಾಯಾಳುಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ  ಹೋಬಳಿಯ ಬಿಸನಹಳ್ಳಿ ಗ್ರಾಮದಲ್ಲಿ ವರದಕ್ಷಿಣಿ ಕಿರುಕುಳ  ತಾಳಲಾರದೆ ಮಹಿಳೆಯೊಬ್ಬಳು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಮತ(20) ಆತ್ಮಹತ್ಯೆ ಮಾಡಿಕೊಂಡವರು. ಈ ನಡುವೆ ವರದಕ್ಷಿಣಿ ಕಿರುಕುಳ ನೀಡಿ ತಮ್ಮ ಮಗಳನ್ನು ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. ನಂದಗುಡಿ  ಪೊಲೀಸ್ ಠಾಣೆ ವ್ಯಾಪ್ತಿಯ ಬಿಸನಹಳ್ಳಿ ಗ್ರಾಮದಲ್ಲಿನ ಚಿಕ್ಕಣ್ಣ ಮತ್ತು ಭತ್ಯಮ್ಮ ದಂಪತಿಯ ಮಗನಾದ ರಾಮಚಂದ್ರನಿಗೆ ಚಿಕ್ಕಬಳ್ಳಾಪುರ  ಜಿಲ್ಲೆ ಶಿಡ್ಲಘಟ್ಟ ತಾ.ಕಂಬಾಲಹಳ್ಳಿ ಗ್ರಾಮದ ಕನ್ನಯಪ್ಪ, ವೆಂಕಟಲಕ್ಷಮ್ಮ ದಂಪತಿಯ ಒಬ್ಬಳೇ ಮಗಳಾದ ಮಮತಳನ್ನು ಸಾಕಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗೆ ಒಬ್ಬ ಮಗನಾಗುವವರೆಗೂ ಚೆನ್ನಾಗಿದ್ದ ಸಂಸಾರ ನಂತರ ದಿನಗಳಲ್ಲಿ ವರದಕ್ಷಿಣೆ ಗಾಗಿ ಕಿರುಕುಳ ನೀಡಲು ಶುರುಮಾಡಿದ್ದರು. ಈ ಬಗ್ಗೆ ಅನೇಕ ಬಾರಿ ನ್ಯಾಯ ಪಂಚಾಯ್ತಿ ಮಾಡಿದ್ದರೂ ರಾಮಚಂದ್ರನ ಹೆತ್ತವರ ಕಿರುಕುಳ ನಡೆದೇ ಇತ್ತು. ಸೋಮವಾರ ಈ ಬಗ್ಗೆ ಗಲಾಟೆ ನಡೆದಿತ್ತು.ರಾಮಚಂದ್ರನ ಕುಟುಂಬದವರು ರಾತ್ರಿ ತನ್ನ ಮಗಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ನಂದಗುಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಬೆಳಕಿಗೆ  ಬಂದ ತಕ್ಷಣ ರಾಮಚಂದ್ರನ ಹೆತ್ತವರು ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಮಮತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ನಂದಗುಡಿ ಸಿಪಿಐ ತಿಮ್ಮಯ್ಯ, ಪಿಎಸ್‌ಐ ಪ್ರಕಾಶ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಯುವಕ ಆತ್ಮಹತ್ಯೆ
ಕನಕಪುರ: ತಾಲೂಕು ಕೋಡಿಹಳ್ಳಿ ಹೋಬಳಿಯ ಹೇರಂಗೆರೆ ಕಾಡಿನಲ್ಲಿ ಯುವಕನೊಬ್ಬ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯುವಕನನ್ನು ಹುಣಸನಹಳ್ಳಿ ಗ್ರಾಮದ ವಿನಯ್ (21) ಎಂದು ಗುರುತಿಸಲಾಗಿದ್ದು ಆತ್ಮಹತ್ಯೆಗೆ ಕಾರಣಗಳು ತಿಳಿದುಬಂದಿಲ್ಲ. ಕಳೆದ ನಾಲ್ಕುದಿನಗಳ ಹಿಂದೆ ಹುಣಸನಹಳ್ಳಿಯ ಮನೆಬಿಟ್ಟು ಹೊರಟ ವಿನಯ್ ಹೇರಂಗೆರೆ ಸಮೀಪದ ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದು, ಕಾಡಿನಲ್ಲಿ ಕುರಿ ಮೇಯಿಸಲು ಹೋಗಿದ್ದವರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರಕ್ಷಕ ಉಪನಿರೀಕ್ಷಕ ಮಹದೇವಸ್ವಾಮಿ ತನಿಖೆ ನಡೆಸುತ್ತಿದ್ದಾರೆ.

ಅಪಘಾತ: ಗಾಯ 
ಮಾಗಡಿ:  ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಕಾಳಾರಿ ರಸ್ತೆಯಲ್ಲಿ ನಡೆದಿದೆ. ಮರೂರಿನಿಂದ ಸ್ವಗ್ರಾಮ ಕಾಳಾರಿಗೆ ಬೈಕ್‌ನಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ಅಪರಿಚಿತ ಆಟೋ ಬೈಕಿಗೆ  ಡಿಕ್ಕಿ ಹೊಡೆದ ಪರಿಣಾಮ ಕಾಳಾರಿ ಗ್ರಾಮದ ರೇಣುಕಯ್ಯನ ಎಡಗಾಲು ಮುರಿದಿದ್ದು, ಗಾಯಾಳುವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಗಾಯಾಳು ರೇಣುಕಯ್ಯನನ್ನು ನಂತರ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಆಸ್ಪತ್ರೆ ಟಿವಿ ಕಳವು
ಮಾಗಡಿ: ತಾಲೂಕಿನ ತಿಪ್ಪಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಟಿವಿಯೊಂದನ್ನು ಯಾರೋ ಕದ್ದಿದ್ದಾರೆ ಎಂದು ಡಾ. ಚಂದ್ರಶೇಖರ್  ಪೊಲೀಸರಿಗೆ ದೂರು ನೀಡಿದ್ದಾರೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯ ಟಿವಿಯನ್ನು ಸ್ಥಳೀಯರೇ ಯಾರೋ ಕದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ಬ್ಯಾಂಕಿನಲ್ಲಿ ಕಾಯಿನ್ ವೆಂಡಿಂಗ್ ಯಂತ್ರ ಉದ್ಘಾಟನೆ
ದೊಡ್ಡಬಳ್ಳಾಪುರ:  ಇಲ್ಲಿನ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರರ್ ಕೋ ಆಪರೇಟಿವ್ ಬ್ಯಾಂಕ್ ಟಿಎಂಸಿ ಬ್ಯಾಂಕ್‌ನಲ್ಲಿ ಕಾಯಿನ್ ವೆಂಡಿಂಗ್ ಯಂತ್ರದ ಉದ್ಘಾಟನಾ ಸಮಾರಂಭ ನಡೆಯಿತು. ದೊಡ್ಡಬಳ್ಳಾಪುರದ ಎಸ್‌ಬಿಎಂನ ವ್ಯವಸ್ಥಾಪಕ ಎಸ್. ಸೀತಾರಾಂ ಉದ್ಘಾಟನೆ ನೆರವೇರಿಸಿದರು. ಅವರು ಮಾತನಾಡಿ ಇಲ್ಲಿರುವ ಸುಮಾರು 20 ಬ್ಯಾಂಕುಗಳಲ್ಲಿ ಟಿಎಂಸಿ ಬ್ಯಾಂಕ್ ಮಾತ್ರ ನಾಣ್ಯ ಪಡೆಯುವ ಯಂತ್ರದ ಸೇವೆಯನ್ನು ಜನತೆಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ವಾಸುದೇವ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಕಾರಿ ಬ್ಯಾಂಕುಗಳಲ್ಲಿ ಈ ಯಂತ್ರವನ್ನು ಉದ್ಘಾಟನೆ ಮಾಡುತ್ತಿರುವುದು ಇದೇ ಮೊದಲು. ಈ ಸಾಧನೆಯ ಹೆಗ್ಗಳಿಕೆಗೆ ಬ್ಯಾಂಕು ಪಾತ್ರವಾಗಿದೆ. ಸಾರ್ವಜನಿಕರು ಮತ್ತು ಬ್ಯಾಂಕಿನ ಗ್ರಾಹಕರು ಇದರ ಸದುಪಯೋಗ ಪಡೆಯಬಹುದು. 10 ರಿಂದ 100 ರುಗಳ ನೋಟುಗಳನ್ನು ಹಾಕಿ ಚಿಲ್ಲರೆ ನಾಣ್ಯಗಳನ್ನು ಪಡೆಯಬಹುದಾಗಿದೆ. ದೇವಾಲಯಗಳಲ್ಲಿ ಬರುವ ಹುಂಡಿ ಹಣದ ಚಿಲ್ಲರೆಯನ್ನು ಬ್ಯಾಂಕಿಗೆ ನೀಡುವಂತೆ ದೇವಾಲಯ ಆಡಳಿತ ಮಂಡಲಿಗಳಲ್ಲಿ ಮನವಿ ಮಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಪಿ.ಸಿ.ವೆಂಕಟೇಶ್, ಬ್ಯಾಂಕಿನ ನಿರ್ದೇಶಕರು, ಸದಸ್ಯರು, ದೇವಾಂಗ ಮಂಡಲಿ, ಶ್ರೀಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್, ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ಸಮಿತಿ, ನೆಲದಾಂಜನೇಯಸ್ವಾಮಿ ಸೇವಾ ಸಮಿತಿ ನಿರ್ದೇಶಕರುಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.