ಬೆಂಗಳೂರು ಗ್ರಾಮಾಂತರ

ಶುದ್ಧ ಕುಡಿವ ನೀರಿನ ಸಾವಿರ ಘಟಕ

Published On :

ರಾಮನಗರ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರರೆಡ್ಡಿ ಅವರು ಗೆಲವು ಸಾಧಿಸಿದರೆ, ಅವರು ಕ್ಷೇತ್ರಾದ್ಯಂತ ಶುದ್ಧ ಕುಡಿಯುವ ನೀರಿನ 1 ಸಾವಿರ ಘಟಕಗಳನ್ನು ಸ್ವಂತ ಖರ್ಚಿನಲ್ಲಿ ತೆರೆಯಲಿದ್ದಾರೆ ಎಂದು ರಾಮನಗರ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಟಪ್ಪ ಪ್ರಕಟಿಸಿದ್ದಾರೆ.  
ಶುದ್ಧ ಕುಡಿಯುವ ನೀರಿನ ನೂರು ಘಟಕಗಳಿಗೆ ಅಡಿಗಲ್ಲು ಹಾಕಿದ್ದನ್ನೇ ದೊಡ್ಡ ಸಾಧನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಅಭ್ಯರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಹಸ್ರ ಘಟಕಗಳ ಸ್ಥಾಪನೆ ಭರವಸೆ ನೀಡಿದ್ದಾರೆ ಎಂದು ಅವರು ಬಿಡದಿ ಸುತ್ತಮುತ್ತಲ ಭಾಗದಲ್ಲಿ
ಮತಯಾಚನೆ ವೇಳೆ ತಿಳಿಸಿದರು.
ಇದು ಧರ್ಮಯುದ್ಧ: ಈ ಬಾರಿಯ ಲೋಕಸಭೆ ಚುನಾವಣೆ ಧರ್ಮ ಪ್ರತಿಪಾದಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಮತ್ತು ಅಧರ್ಮವನ್ನೇ ನೆಚ್ಚಿಕೊಂಡ ಕಾಂಗ್ರೆಸ್ ಅಭ್ಯರ್ಥಿ ನಡುವಿನ ಹೋರಾಟವಾಗಿದೆ. ಈ ಧರ್ಮಯುದ್ಧದಲ್ಲಿ  ಮತದಾರರು  ಧರ್ಮವನ್ನೇ ಎತ್ತಿ ಹಿಡಿಯಬೇಕು. ಅಧರ್ಮವನ್ನು ಸದೆಬಡಿಯಬೇಕು ಎಂದು ಬ್ಯಾಟಪ್ಪ
ಮನವಿ ಮಾಡಿದರು.
ನಮ್ಮ ಅಭ್ಯರ್ಥಿ ಪ್ರಭಾಕರರೆಡ್ಡಿ ಅವರು ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಸಮಾಜಕ್ಕೆ ಕೋಟ್ಯಂತರ ರು. ದಾನ ಮಾಡಿದ್ದಾರೆ. ಅದೇ ಕಾಂಗ್ರೆಸ್ ಅಭ್ಯರ್ಥಿ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಸಿರುವ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಗೌಡರ ಕೈ ಬಲಪಡಿಸಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮಗೆ ಎದುರಾಳಿಗಳೇ ಇಲ್ಲ, 2 ಲಕ್ಷ ಮತಗಳ ಅಂತರದಿಂದ ಗೆದ್ದಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಜನರ ನಾಡಿಮಿಡಿತವನ್ನು ಅರಿಯುವಲ್ಲಿ ಅವರು ಖಂಡಿತ ವಿಫಲರಾಗಿದ್ದು, ಅತಿಯಾದ ಆತ್ಮವಿಶ್ವಾಸವೇ ಅವರಿಗೆ ಮುಳುವಾಗಲಿದೆ ಎಂದು ಬ್ಯಾಟಪ್ಪ ಭವಿಷ್ಯ ನುಡಿದರು.
ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ರಚನೆ ಸಾಧ್ಯತೆ ನಿಚ್ಚಳವಾಗಿದ್ದು, ಕನ್ನಡಿಗ ಎಚ್.ಡಿ. ದೇವೇಗೌಡ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶವಿದೆ. ಹೀಗಾಗಿ ಅವರ ಕೈ ಬಲಪಡಿಸಲು ಬೆಂಗಳೂರು ಗ್ರಾಮಾಂತರದ ಮತದಾರರೂ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.

ಎಚ್‌ಡಿಕೆ ತಂತ್ರಗಾರಿಕೆ
ಎಚ್.ಡಿ.ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರಕ್ಕೆ ಹೋಗಿರುವುದು ವಲಸೆಯೋ, ಪಲಾಯನವೋ ಅಲ್ಲ. ಎರಡೂ ಕಡೆ ಭ್ರಷ್ಟರನ್ನು ಸದೆಬಡಿಯುವ ಒಂದೇ ಉದ್ದೇಶದಿಂದ ಕುಮಾರಸ್ವಾಮಿ ತಂತ್ರಗಾರಿಕೆ ಹೆಣೆದಿದ್ದಾರಷ್ಟೇ. ಅವರ ಚಾಣಾಕ್ಷ ನೀತಿ ಏನು ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸಲಿದೆ ಎಂದು
ಬ್ಯಾಟಪ್ಪ ವಿಶ್ಲೇಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.