ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ
ಕ.ಪ್ರ.ವಾರ್ತೆ ರಾಮನಗರ ಏ.15
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ 1500 ಪೊಲೀಸ್ ಸಿಬ್ಬಂದಿ ಹಾಗೂ ಪ್ಯಾರಾ ಮಿಲಿಟರಿಯ 3 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದರು.
ಮೂವರು ಡಿವೈಎಸ್ಪಿ, 12 ಇನ್ಸ್ಪೆಕ್ಟರ್, 90 ಸಬ್ ಇನ್ಸ್ಪೆಕ್ಟರ್, 1400 ಮುಖ್ಯಪೇದೆ ಮತ್ತು ಪೇದೆಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಶಾಂತಿಭಂಗ ಉಂಟು ಮಾಡುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಈ ಜಿಲ್ಲೆ ವ್ಯಾಪ್ತಿಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತದ ಜತೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
4 ಕ್ಷೇತ್ರಗಳ ವ್ಯಾಪ್ತಿ: ಈ ಜಿಲ್ಲೆ ಪೊಲೀಸ್ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳ ಕೆಲ ಭಾಗಗಳು ಸೇರಿವೆ. ನಾಲ್ಕೂ ಲೋಕಸಭಾ ಕ್ಷೇತ್ರಗಳಿಂದ ಒಟ್ಟಾರೆ 1464 ಮತಗಟ್ಟೆಗಳು ನಮ್ಮ ಪೊಲೀಸ್ ವ್ಯಾಪ್ತಿಗೆ ಸೇರಿವೆ ಎಂದು ಅವರು ತಿಳಿಸಿದರು.
ಒಟ್ಟಾರೆ ಮತಗಟ್ಟೆಗಳ ಪೈಕಿ 190 ಅತಿ ಸೂಕ್ಷ್ಮ, 274 ಸೂಕ್ಷ್ಮ, 1 ಸಾವಿರ ಸಾಮಾನ್ಯ ಮತಗಟ್ಟೆಗಳಿವೆ. 3 ಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಒಂದೇ ಕೇಂದ್ರದಲ್ಲಿ ಹೊಂದಿರುವ 72 ಕೇಂದ್ರಗಳಿವೆ. ಮತದಾನದಂದು ಭದ್ರತೆಗೆ ಯಾವುದೇ ಲೋಪವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಗ್ರವಾಲ್ ಹೇಳಿದರು.
77 ಮೊಬೈಲ್ ಸ್ಕ್ವಾಡ್: ಕಾನೂನು ಮತ್ತು ಶಾಂತಿ ಪಾಲನೆ, ಚುನಾವಣಾ ವ್ಯವಸ್ಥೆ ನಿರ್ವಹಣೆಗಾಗಿ 77 ಮೊಬೈಲ್ ಪೊಲೀಸ್ ಸ್ಕ್ವಾಡ್ಗಳನ್ನು ನೇಮಕ ಮಾಡಲಾಗಿದೆ. ಈ ತಂಡಗಳ ನೇತೃತ್ವವನ್ನು ಸಬ್ ಇನ್ಸ್ಪೆಕ್ಟರ್ ಇಲ್ಲವೆಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ವಹಿಸಲಿದ್ದಾರೆ. ಇವುಗಳ ಮೇಲ್ವಿಚಾರಣೆಗೆ ಡಿವೈಎಸ್ಪಿ ಅಥವಾ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ 17 ಸ್ಕ್ವಾಡ್ ಕಾರ್ಯ ನಿರ್ವಹಿಸಲಿದೆ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ರ್ಯಾಪಿಡ್ ಆಕ್ಷನ್ ತುಕಡಿಗಳು ಕಾರ್ಯನಿರ್ವಹಿಸಲಿವೆ. ಜಿಲ್ಲೆಯಲ್ಲಿ 2100 ಬಂದೂಕು ಲೈಸನ್ಸ್ ಹೊಂದಿದವರಿದ್ದು, ಅವರೆಲ್ಲರಿಂದ ಬಂದೂಕುಗಳನ್ನು ಸುಪರ್ದಿಗೆ ಪಡೆಯಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ 920 ರೌಡಿಗಳ ಮೇಲೆ ಪ್ರಕರಣ ತೆರೆದು ಎಚ್ಚರಿಕೆ ನೀಡಲಾಗಿದೆ ಎಂದು ಅಗ್ರವಾಲ್ ತಿಳಿಸಿದರು. ಕ್ರಿಮನಲ್ ಮೊಕದ್ದಮೆ ಇರುವ 600 ಕ್ಕೂ ಹೆಚ್ಚು ಜನರ ವಿರುದ್ದ ತಹಸೀಲ್ದಾರ್ ಮೂಲಕ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗದು, ಮದ್ಯ, ಆಮಿಷಗಳಿಗೆ ಬಳಸಲ್ಪಡುವ ಸಾಮಗ್ರಿಗಳ ದಾಸ್ತಾನು ಇಲ್ಲವೇ ಸಾಗಣೆ ವಿರುದ್ಧ ನಿಗಾ ವಹಿಸಲಾಗಿದೆ ಎಂದು ಅವರು ವಿವರಿಸಿದರು.
ಸಿಬ್ಬಂದಿಗೆ ಮತ ಹಕ್ಕು
ರಾಮನಗರ ಜಿಲ್ಲೆಯಲ್ಲಿ 900 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿರುವವರಿಗೆ ಇಡಿಸಿ, ಕ್ಷೇತ್ರದ ಹೊರಗಿನವರಿಗೆ ಅಂಚೆ ಮತದಾನದ ಅವಕಾಶ ಒದಗಿಸಲಾಗಿದೆ ಎಂದು ಅನುಪಮ್ ಅಗ್ರವಾಲ್ ತಿಳಿಸಿದರು.
ಸಿಬ್ಬಂದಿ ಅದಲು ಬದಲು
ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ದೃಷ್ಟಿಯಿಂದ ಬಹುಪಾಲು ಸಿಬ್ಬಂದಿಯನ್ನು ತಾವಿರುವ ಠಾಣೆ, ಸ್ವಂತ ಊರಿನಿಂದ ಬೇರೆಡೆಗೆ ನಿಯೋಜಿಸಲಾಗಿದೆ. ಈ ವ್ಯವಸ್ಥೆ ಚುನಾವಣಾ ಸುಧಾರಣೆ ನಿಟ್ಟಿನಲ್ಲಿ ಪೂರಕವಾಗಿದೆ ಎಂದು ಅಗ್ರವಾಲ್ ಹೇಳಿದರು.
ಮೂವರು ಡಿವೈಎಸ್ಪಿ, 12 ಇನ್ಸ್ಪೆಕ್ಟರ್, 90 ಸಬ್ ಇನ್ಸ್ಪೆಕ್ಟರ್, 1400 ಮುಖ್ಯಪೇದೆ ಮತ್ತು ಪೇದೆಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಶಾಂತಿಭಂಗ ಉಂಟು ಮಾಡುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
-ಅನುಪಮ್ ಅಗ್ರವಾಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

