ಒತ್ತಡ ಜೀವನ ಶೈಲಿಯಿಂದ ಮಾನಸಿಕ ರೋಗ
ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದು, ಇದಕ್ಕೆಲ್ಲ ಒತ್ತಡ ಜೀವನ ಶೈಲಿಯೇ ಕಾರಣ ಎಂದು ಮನೋವೈದ್ಯೆ ಡಾ. ರಜನಿ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾನಿಕೇತನ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿದ್ದ 'ಮಾನಸಿಕ ಆರೋಗ್ಯ ಮತ್ತು ವಿದ್ಯಾರ್ಥಿನಿಯರು - ಒಂದು ಸಂವಾದ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ನಿರುತ್ಸಾಹ, ನಿರಾಸೆ, ಆತಂಕ, ಕೋಪ ಭಯ, ಸಂದೇಹಗಳು ಮಾನಸಿಕ ರೋಗದ ಲಕ್ಷಣ ಎಂದರು.
ಒತ್ತಡ ಕಾರಣ: ಶೇ.40ರಷ್ಟು ಯುವಕರು ಖಿನ್ನತೆಯಿಂದ ಬಳಲುತ್ತಿದ್ದರೆ, ಶೇ.12 ರಿಂದ 17 ರಷ್ಟು ಯುವಕರು ಇನ್ನಿತರ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅವರು ವಿವರಿಸಿದರು.
ಸಲಹೆ: ಕೆಲವು ಮಾನಸಿಕ ಸಮಸ್ಯೆಗಳಿಗೆ ಸರಳ ಪರಿಹಾರಗಳಿದ್ದು ವೈದ್ಯರ ಬಳಿ ಆಪ್ತ ಸಮಾಲೋಚನೆಯ ಮೂಲಕ ಅದನ್ನು ಪರಿಹರಿಸಿ ಕೊಳ್ಳಬಹುದಾಗಿದೆ. ಆದರೆ ಬಹುತೇಕ ಮಂದಿ ಮಾನಸಿಕ ರೋಗವನ್ನು ನಿರ್ಲಕ್ಷಿಸುವುದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆರಂಭದಲ್ಲೇ ಮಾನಸಿಕ ತೊಳಲಾಟಗಳಿಗೆ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಸಲಹೆ ಇತ್ತರು.
ದೆವ್ವ ಕೇವಲ ಭ್ರಮೆ: ಕೆಲ ಮಂದಿ ದೆವ್ವ ಭೂತ ಎಂಬ ಮನೋವ್ಯಾಧಿಗೆ ಸಿಲುಕುತ್ತಾರೆ ಎಂದ ರಜನಿ, ಇದ್ಯಾವುದೂ ಇಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂಥ ಭೀತಿ ಕಾಡಿದಲ್ಲಿ ಮನೋವೈದ್ಯರ ಬಳಿಕೆ ಕರೆದುಕೊಂಡು ಹೋಗಬೇಕೇ ವಿನಃ, ಮಂತ್ರವಾದಿಗಳ ಬಳಿಗಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆ ಹಿರಿಯ ಫಾರ್ಮಾಸಿಸ್ಟ್, ವೇದಮೂರ್ತಿ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಟ್ಟುಕೊಳ್ಳದೆ ಮನೋವೈದ್ಯರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ವಿಜ್ಞಾನ ಸಾಕಷ್ಟು ಪ್ರಗತಿ ಹೊಂದುತ್ತಿರುವ ಈ ಸಮಯದಲ್ಲಿ ವಿದ್ಯಾವಂತರು ಮೂಢ ನಂಬಿಕೆಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಟಿ.ಎಂ. ರಾಜು, ಎನ್ಎಸ್ಎಸ್ ಅಧಿಕಾರಿ ಬಿ.ಪಿ. ಸುರೇಶ್, ಯುವ ಸಾಹಿತಿ ಸುರೇಶ್ ಗೌತಮ್, ಉದ್ಯಮಿ ಪೂರ್ಣಿಮಾ, ಉಪನ್ಯಾಸಕ ಮಹೇಶ್ ಇದ್ದರು.
ಆತ್ಮಹತ್ಯೆ ಪರಿಹಾರ ಅಲ್ಲ
ನಮ್ಮ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂದ ರಜನಿ, ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೇ ವಿನಃ ಬೆನ್ನು ತೋರಿಸಬಾರದು. ನಿಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ಸ್ನೇಹಿತರು, ಸಂಬಂಧಿಕರೊಂದಿಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕು. ಆದರೆ, ಆತ್ಮಹತ್ಯೆಯ ದಾರಿ ಹಿಡಿಯಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

